ಸಾರಾಂಶ
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಥೋತ್ಸವ ನಡೆಯುವ ದಿನವಾದ ಚಂಪಾ ಷಷ್ಠಿಯಂದು ಘಾಟಿಯಲ್ಲೂ ವಿವಿಧ ಪೂಜಾ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ಅದೇ ರೀತಿ ಕುಮಾರ ಷಷ್ಠಿಯಂದು ಘಾಟಿ ಸುಬ್ರಹ್ಮಣ್ಯದಲ್ಲಿ ದೊಡ್ಡ ಜಾತ್ರೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾವಿರಾರು ನಾಗ ಶಿಲೆಗಳಿಗೆ ಭಕ್ತಾದಿಗಳು ಪೂಜಿಸಿ, ಇಲ್ಲಿನ ಹುತ್ತಗಳಿಗೆ ಹಾಲೆರುವ ಸಂಪ್ರದಾಯವಿದೆ.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ರಾಜ್ಯದ ಸುಪ್ರಸಿದ್ಧ ನಾಗಾರಾಧನಾ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಅಂಗವಾಗಿ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ಶನಿವಾರ ಹಾಗೂ ಭಾನುವಾರ ನಡೆದವು.ಎರಡೂ ದಿನಗಳಂದು ಬೆಳಗಿನ ಜಾವ 5 ಗಂಟೆಗೆ ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಿತು. ಷಷ್ಠಿಯಂದು ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪ್ರಾಕಾರೋತ್ಸವ ನಡೆಯಿತು. ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ನಾಗಾರಾಧನೆಗೆ ಪ್ರಸಿದ್ಧವಾಗಿರುವ ಘಾಟಿ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಅಂಗವಾಗಿ ಭಕ್ತಾದಿಗಳು ಹುತ್ತಗಳು ಹಾಗೂ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ನೂರಾರು ಭಕ್ತಾದಿಗಳು ಸಾಲುಗಟ್ಟಿ ನಿಂತು ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದರು. ದೇವಾಲಯದಲ್ಲಿ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಥೋತ್ಸವ ನಡೆಯುವ ದಿನವಾದ ಚಂಪಾ ಷಷ್ಠಿಯಂದು ಘಾಟಿಯಲ್ಲೂ ವಿವಿಧ ಪೂಜಾ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ಅದೇ ರೀತಿ ಕುಮಾರ ಷಷ್ಠಿಯಂದು ಘಾಟಿ ಸುಬ್ರಹ್ಮಣ್ಯದಲ್ಲಿ ದೊಡ್ಡ ಜಾತ್ರೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾವಿರಾರು ನಾಗ ಶಿಲೆಗಳಿಗೆ ಭಕ್ತಾದಿಗಳು ಪೂಜಿಸಿ, ಇಲ್ಲಿನ ಹುತ್ತಗಳಿಗೆ ಹಾಲೆರುವ ಸಂಪ್ರದಾಯವಿದೆ.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ, ಪ್ರಧಾನ ಅರ್ಚಕ ಆರ್.ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಇದ್ದರು.ಜಾತ್ರೋತ್ಸವಕ್ಕೆ ಸಿದ್ಧತೆ:
ಬರುವ ಜ.5 ರಂದು ಘಾಟಿ ಕ್ಷೇತ್ರದಲ್ಲಿ ಶ್ರೀಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ. ಇದೇ ಡಿ.20 ರಿಂದ ರಾಜ್ಯದಲ್ಲೇ ಪ್ರಸಿದ್ಧವಾದ ದನಗಳ ಜಾತ್ರೆ ಆರಂಭವಾಗಲಿದೆ. ಈಗಾಗಲೇ ಕ್ಷೇತ್ರದಲ್ಲಿ ದನಗಳ ಜಾತ್ರೆಯ ಸಿದ್ಧತೆಗಳು ನಡೆದಿವೆ. ಜಾತ್ರಾ ಮಹೋತ್ಸವಕ್ಕೂ ಮೊದಲೇ ಕ್ಷೇತ್ರ ಸಂಭ್ರಮದಿಂದ ಸಜ್ಜುಗೊಳ್ಳುತ್ತಿದೆ.