ಕ್ರೀಡಾಪಟುಗಳಿಗೆ ಅಂಚೆ ಇಲಾಖೆಯಲ್ಲಿ ಹೆಚ್ಚು ಮೀಸಲಾತಿ ಸಿಗಲಿ

| Published : Nov 15 2024, 12:38 AM IST

ಸಾರಾಂಶ

ಬ್ಯಾಡ್ಮಿಂಟನ್‌ ಎಲ್ಲರೂ ಆಡುವಂತಹ ಆಟವಾಗಿದ್ದು, ಪ್ರತಿಯೊಬ್ಬರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ ಕಾಪಾಡಿಕೊಳ್ಳಲು ಸಹಕಾರಿ

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಹೆಚ್ಚು ಅವಕಾಶ ಸಿಗಬೇಕು. ಕ್ರೀಡಾಪಟುಗಳಿಗೆ ಅಂಚೆ ಇಲಾಖೆಯಲ್ಲಿ ಹೆಚ್ಚು ಮೀಸಲಾತಿ ನೀಡಿ ಅವರಿಗೆ ಪ್ರೋತಾಹ ನೀಡಬೇಕು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು, ಧ್ಯಾನ್‌ಚಂದ್‌ಪ್ರಶಸ್ತಿ ವಿಜೇತೆ ಅಶ್ವಿನಿ ಅಕ್ಕುಂಜಿ ಒತ್ತಾಯಿಸಿದರು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 38ನೇ ಅಖಿಲ ಭಾರತ ಅಂಚೆ ಬ್ಯಾಡ್ಮಿಂಟನ್‌ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರ ಅವರು, ಬಿಡುವಿದ್ದಾಗಲೆಲ್ಲಾ ಎಲ್ಲರೂ ಯಾವುದಾದರೂ ಕ್ರೀಡಾ ತರಬೇತಿಯಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.

ಬ್ಯಾಡ್ಮಿಂಟನ್‌ ಎಲ್ಲರೂ ಆಡುವಂತಹ ಆಟವಾಗಿದ್ದು, ಪ್ರತಿಯೊಬ್ಬರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಈ ಆಟದ ನಿಯಮವನ್ನು ಎಲ್ಲರೂ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ತಿಳಿಸಿದರು.

ಸ್ಥಳೀಯ ಆಟಗಳಾಗಿರುವ ಬ್ಯಾಡ್ಮಿಂಟನ್‌ ಮತ್ತು ಬಾಲ್‌ಬ್ಯಾಡ್ಮಿಂಟನ್‌ ಗೆ ಹೆಚ್ಚು ಮನ್ನಣೆಗೆ ಬರಬೇಕು ಎಂದು ಆಶಿಸಿದರು.

ಈ ಪಂದ್ಯಾವಳಿಯು ಕ್ರೀಡಾ ಮನೋಭಾವ ಮತ್ತು ಕ್ರೀಡಾ ಸ್ಫೂರ್ತಿಯಿಂದ ಯಶಸ್ವಿಯಾಗಿ ನಡೆದಿದ್ದು ಅತ್ಯಂತ ಸಂತಸದ ವಿಷಯ. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮತ್ತು ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೆ ಧನ್ಯವಾದ ತಿಳಿಸಿದರು.

ಕೇಂದ್ರ ಅಂಚೆ ಇಲಾಖೆಯ ಅಂಚೆ ಸೇವಾ ಮಂಡಳಿ ಸದಸ್ಯರಾದ ಆಶಿಶ್‌ಕುಮಾರ್‌ಮಾತನಾಡಿ, ಕ್ರೀಡಾಪಟುಗಳ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಅಂಚೆ ಇಲಾಖೆಯು ಯಶಸ್ವಿಯಾಗಿ ಆಯೋಜನೆ ಮಾಡಿದ್ದಾರೆ ಎಂದು ಹೇಳಿದರು. ವಿವಿಧ ವಿಭಾಗದ ಪ್ರಶಸ್ತಿ ವಿಜೇತರಿಗೆ ಗಣ್ಯರು ಪ್ರಶಸ್ತಿ ವಿತರಿಸಿದರು.

ಈ ವೇಳೆ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣವು 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಅಂಚೆ ವಲಯದ ಪೋಸ್ಟ್‌ಮಾಸ್ಟರ್‌ಜನರಲ್‌ ಸುಶೀಲ್‌ ಕುಮಾರ್‌, ಬೆಂಗಳೂರು ಎಚ್‌.ಕ್ಯೂ ವಲಯದ ಪೋಸ್ಟ್‌ಮಾಸ್ಟರ್‌ ಜನರಲ್‌ ಎಲ್‌.ಕೆ. ದಾಶ್‌, ದಕ್ಷಿಣ ಕರ್ನಾಟಕ ಅಂಚೆ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ಡಾ. ಚಂದ್ರಶೇಖರ್‌ಕಾಕುಮನು, ದಕ್ಷಿಣ ಕರ್ನಾಟಕ ಅಂಚೆ ವಲಯದ ನಿರ್ದೇಶಕ ಸಂದೇಶ್‌ ಮಹದೇವಪ್ಪ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯ್ಕ್ ಮೊದಲಾದವರು ಇದ್ದರು.

38ನೇ ಅಖಿಲ ಭಾರತ ಅಂಚೆ ಇಲಾಖೆಯ 5 ದಿನಗಳ ಬ್ಯಾಂಡ್ಮಿಂಟನ್‌ಪಂದ್ಯಾವಳಿಯಲ್ಲಿ ದೇಶದ 20 ಪೋಸ್ಟಲ್ ಸರ್ಕಲ್‌ ಗಳ 194 ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿವಿಧ ಏಳು ವಿಭಾಗದಲ್ಲಿ ಪಂದ್ಯಗಳು ನಡೆದವು.

ಫಲಿತಾಂಶ

ಪುರುಷರ ಸಿಂಗಲ್ಸ್ ನಲ್ಲಿ ಹಿಮಾಚಲ ಪ್ರದೇಶದ ಅಜಯ್‌ಕೈತ್ ಪ್ರಥಮ, ‌ಉತ್ತರ ಪ್ರದೇಶದ ಅಮಿತ್‌ಶರ್ಮ ದ್ವಿತೀಯ, ಮಹಿಳೆಯರ ಸಿಂಗಲ್ಸ್ ನಲ್ಲಿ ವೆಸ್ಟ್‌ಬೆಂಗಾಲದ ಅನುರಿಯಾ ದಾಸ್ ಪ್ರಥಮ, ಗುಜರಾತ್‌ನ ವೈಶಾಲಿ ಎಫ್‌ಬರಿಯಾ ದ್ವಿತೀಯ.

ಪುರುಷರ ಡಬಲ್ಸ್‌ ನಲ್ಲಿ ‌ಶುಭಂ ಯಾದವ್‌ ಮತ್ತು ಸ್ವಾದಿನ್‌ಗೌಡ ಪ್ರಥಮ, ಯುವರಾಜ್‌ಮತ್ತು ಎಸ್‌. ಸುಬ್ರಮಣ್ಯಂ ದ್ವಿತೀಯ, ಮಹಿಳೆಯರ ಡಬಲ್ಸ್ ನಲ್ಲಿ ಮಯೂರಿ ಯಾದವ್ ಮತ್ತು ಆರ್‌. ಲೀಲಾ ಲಕ್ಷ್ಮಿ ಪ್ರಥಮ, ಅನುರಿಯಾ ದಾಸ್‌ಮತ್ತು ಛಾವಿ ಠಾಕೂರ್ ದ್ವಿತೀಯ.

ಮಿಶ್ರ ಡಬಲ್ಸ್ ನಲ್ಲಿ ‌ಶುಭಂ ಯಾದವ್‌ಮತ್ತು ಮಯೂರಿ ಯಾದವ್ ಪ್ರಥಮ, ಪರಮೇಶ್‌ಪಟಿದಾರ್‌ಮತ್ತು ಆರ್‌. ಲೀಲಾ ಲಕ್ಷ್ಮಿ ದ್ವಿತೀಯ. 45 ವರ್ಷ ಮೇಲ್ಪಟ್ಟವರ ಸಿಂಗಲ್ಸ್‌ ನಲ್ಲಿ ಕುನ್ಹಾಲ್‌ಮಕ್ವಾನ ಪ್ರಥಮ, ವಿಕಾಸ್‌ಸೂದ್‌ದ್ವಿತೀಯ. 45 ವರ್ಷ ಮೇಲ್ಪಟ್ಟವರ ಡಬಲ್ಸ್‌ ನಲ್ಲಿ ಪರಾಗ್‌ಏಕಂಡೆ ಮತ್ತು ವಿಕಾಸ್‌ಸೂದ್ ಪ್ರಥಮ, ಹಿಮಾಂಶು ಭೂಷಣ್ ಪರಿದಾ ಮತ್ತು ಜೋಮನ್‌ಜಾರ್ಜ್ ದ್ವಿತೀಯ ಸ್ಥಾನ ಪಡೆದರು.