ಚಂದ್ರಮೌಳೇಶ್ವರ ದೇವಾಲಯಕ್ಕೆ ಚಾಣಕ್ಯ ವಿವಿ ವಿದ್ಯಾರ್ಥಿಗಳ ಪ್ರವಾಸ

| Published : Sep 08 2025, 01:00 AM IST

ಚಂದ್ರಮೌಳೇಶ್ವರ ದೇವಾಲಯಕ್ಕೆ ಚಾಣಕ್ಯ ವಿವಿ ವಿದ್ಯಾರ್ಥಿಗಳ ಪ್ರವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಚಂದ್ರಮೌಳೇಶ್ವರ ದೇವಾಲಯವು ಹೊಯ್ಸಳ, ಚಾಲುಕ್ಯ ಹಾಗೂ ಗಂಗ ರಾಜವಂಶಗಳ ಇತಿಹಾಸದ ಸ್ಮರಣಾರ್ಥವಾಗಿದೆ. ನಗರವು ಆ ಕಾಲದಲ್ಲಿ ಪ್ರಮುಖ ರಾಜಕೀಯ ಮತ್ತು ಧಾರ್ಮಿಕ ಕೇಂದ್ರವಾಗಿತ್ತು. ಶೈವ, ವೈಷ್ಣವ ಹಾಗೂ ಜೈನ ಧರ್ಮಗಳ ಸಾಂಸ್ಕೃತಿಕ ಕುರುಹುಗಳು ಇಲ್ಲಿನ ಇತಿಹಾಸವನ್ನು ಸಮೃದ್ಧಗೊಳಿಸುತ್ತವೆ. ಈ ಭಾಗದಲ್ಲಿ ನಾಣ್ಯ ಮುದ್ರಣ ಟಂಕಸಾಲೆಗಳಿರುವ ಪುರಾತನ ದಾಖಲೆಗಳೂ ದೊರೆತಿವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಚಾಣಕ್ಯ ವಿಶ್ವವಿದ್ಯಾಲಯದ ಪದವಿ ತರಗತಿಯ ವಿದ್ಯಾರ್ಥಿಗಳು ನಗರದ ಹೊಯ್ಸಳ ಕಾಲದ ಶ್ರೀ ಚಂದ್ರಮೌಳೇಶ್ವರ ದೇವಾಲಯಕ್ಕೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡು ದೇವಾಲಯದ ಇತಿಹಾಸ ಹಾಗೂ ಶಿಲ್ಪಕಲೆಯ ಕುರಿತು ಅಧ್ಯಯನ ನಡೆಸಿದರು.

ನಾಗರಿಕ ಸೇವಾ ಪರೀಕ್ಷೆಗಳ ತರಬೇತುದಾರರು, ಸಂಸ್ಕೃತ ಮತ್ತು ಭಾರತೀಯ ಪರಂಪರೆ ವಿಭಾಗದ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ದೇವಾಲಯದ ಒಳಾಂಗಣ ಹಾಗೂ ಹೊರಾಂಗಣದಲ್ಲಿರುವ ಶಿಲ್ಪಗಳನ್ನು ವೀಕ್ಷಿಸಿ, 900 ವರ್ಷಗಳ ಹಿಂದಿನ ಹೊಯ್ಸಳ ಶೈಲಿಯ ಕಲಾತ್ಮಕತೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ದೇವಾಲಯದಲ್ಲಿರುವ ಶಿಲಾಶಾಸನಗಳ ಲಿಪಿಗಳನ್ನು ಓದುವ ಪ್ರಯತ್ನ, ಶಿಲಾಮೂರ್ತಿಗಳ ವಿವರಗಳನ್ನು ದಾಖಲಿಸುವ ಕಾರ್ಯದಲ್ಲಿ ಅವರು ತೊಡಗಿದ್ದರು.ಈ ಸಂದರ್ಭ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಹರೀಶ್ ಮಾತನಾಡಿ, ಶ್ರೀ ಚಂದ್ರಮೌಳೇಶ್ವರ ದೇವಾಲಯವು ಹೊಯ್ಸಳ, ಚಾಲುಕ್ಯ ಹಾಗೂ ಗಂಗ ರಾಜವಂಶಗಳ ಇತಿಹಾಸದ ಸ್ಮರಣಾರ್ಥವಾಗಿದೆ. ನಗರವು ಆ ಕಾಲದಲ್ಲಿ ಪ್ರಮುಖ ರಾಜಕೀಯ ಮತ್ತು ಧಾರ್ಮಿಕ ಕೇಂದ್ರವಾಗಿತ್ತು. ಶೈವ, ವೈಷ್ಣವ ಹಾಗೂ ಜೈನ ಧರ್ಮಗಳ ಸಾಂಸ್ಕೃತಿಕ ಕುರುಹುಗಳು ಇಲ್ಲಿನ ಇತಿಹಾಸವನ್ನು ಸಮೃದ್ಧಗೊಳಿಸುತ್ತವೆ. ಈ ಭಾಗದಲ್ಲಿ ನಾಣ್ಯ ಮುದ್ರಣ ಟಂಕಸಾಲೆಗಳಿರುವ ಪುರಾತನ ದಾಖಲೆಗಳೂ ದೊರೆತಿವೆ ಎಂದು ತಿಳಿಸಿದರು. ಸಂಸ್ಥೆಯ ಉಪನ್ಯಾಸಕ ನವೀನ್ ಭಟ್ ಮಾತನಾಡಿ, ಚಾಣಕ್ಯ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಇತಿಹಾಸ ಅಧ್ಯಯನವನ್ನು ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ಅರಸೀಕೆರೆಯ ನಂತರ ಬೇಲೂರು ಮತ್ತು ಹಳೇಬೀಡಿಗೆ ಶಿಲ್ಪಕಲೆಗಳ ಅಧ್ಯಯನಕ್ಕಾಗಿ ಪ್ರಯಾಣ ಮುಂದುವರಿಯಲಿದೆ. ಇಂತಹ ಪ್ರವಾಸಗಳು ವಿದ್ಯಾರ್ಥಿಗಳಲ್ಲಿ ಇತಿಹಾಸ ಅರಿವು ಮೂಡಿಸುತ್ತವೆ ಎಂದರು.ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುದೀಪ ಬಸರಕೋಡ, ಕೇಶವ ಚಂದ್ರ, ನಿಶಾಂತ್ ಕುಮಾರ, ಭುವನೇಶ್ವರನ್, ಮಂದಾರ, ಭುವನಿ, ಇಶಾ ಶರ್ಮಾ ಸೇರಿದಂತೆ ಸ್ಥಳೀಯ ಮುಖಂಡರಾದ ಸೋಮಶೇಖರ್ ಮತ್ತು ಚಂದನ್ ಉಪಸ್ಥಿತರಿದ್ದರು.