ಹಿಂದುತ್ವದ ಮೂಲಕ ಕಾಂಗ್ರೆಸ್‌ ಸೋಲಿಸುವ ಹುನ್ನಾರ: ಸಚಿವ ಸಂತೋಷ ಲಾಡ್​ ಆರೋಪ

| Published : Mar 25 2024, 01:50 AM IST

ಹಿಂದುತ್ವದ ಮೂಲಕ ಕಾಂಗ್ರೆಸ್‌ ಸೋಲಿಸುವ ಹುನ್ನಾರ: ಸಚಿವ ಸಂತೋಷ ಲಾಡ್​ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಲೋಕಸಭಾ ಕ್ಷೇತ್ರ ಮತದಾರರಿಗೆ ಇಂದಿರಾ ಗಾಂಧಿ ಜಾರಿಗೆ ತಂದ ವೃದ್ಧಾಪ್ಯ ವೇತನ ಸೇರಿ ವಿವಿಧ ಯೋಜನೆಗಳ ಬಗ್ಗೆ ತಿಳಿಸುವ ಜತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಚಿವ ಲಾಡ್ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಹಿಂದುತ್ವದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಹಿಂದುತ್ವದ ಮೂಲಕವೇ ಕಾಂಗ್ರೆಸ್​ ಸೋಲಿಸುವ ಹುನ್ನಾರ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಆರೋಪಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್​ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಧಾರವಾಡ ಲೋಕಸಭಾ ಕ್ಷೇತ್ರ ಮತದಾರರಿಗೆ ಇಂದಿರಾ ಗಾಂಧಿ ಜಾರಿಗೆ ತಂದ ವೃದ್ಧಾಪ್ಯ ವೇತನ ಸೇರಿ ವಿವಿಧ ಯೋಜನೆಗಳ ಬಗ್ಗೆ ತಿಳಿಸುವ ಜತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ನಮ್ಮ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತ ಶ್ರಮಿಸಬೇಕು ಎಂದರು.

ಶಾಸಕ ಎನ್​.ಎಚ್​. ಕೋನರೆಡ್ಡಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್​ ಪರ ಗಾಳಿ ಬೀಸಿದೆ. ಆದಾಗ್ಯೂ ಚುನಾವಣೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದರು.

ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, 10 ವರ್ಷದಲ್ಲಿ ಅಭಿವೃದ್ಧಿ ಮಾಡದ ಬಿಜೆಪಿ ಜಾತಿ ಮತ್ತು ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. ಇಂತಹ ದುರಾಡಳಿತ ನಡೆಸುತ್ತಿರುವ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಇವರ ದುರಾಡಳಿತಕ್ಕೆ ಅಂತ್ಯ ಹಾಡುವ ಸಮಯ ಹತ್ತಿರವಾಗಿದ್ದು, ಜನರು ನನಗೆ ಮತ ನೀಡುವ ಮೂಲಕ ದೇಶದಲ್ಲಿ ಸುಭಿಕ್ಷ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಮಹೇಶ ಪತ್ತಾರ ಮಾತನಾಡಿದರು. ಇದೇ ಸಮಯದಲ್ಲಿ ಆಮ್​ ಆದ್ಮಿ, ಸಿಪಿಐ ಹಾಗೂ ಸಿಪಿಎಂ ಪಕ್ಷಗಳ ಮುಖಂಡರು ಕಾಂಗ್ರೆಸ್​ ಅಭ್ಯಥಿರ್ಗೆ ಬೆಂಬಲ ಸೂಚಿಸಿದರು.

ಜಿಲ್ಲಾಧ್ಯಕ್ಷ ಅಲ್ತಾಫ​ ಹಳ್ಳೂರ, ಅನಿಲಕುಮಾರ ಪಾಟೀಲ, ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ, ಇಸ್ಮಾಯಿಲ್​ ತಮಟಗಾರ, ಪ್ರೊ. ಐ.ಜಿ. ಸನದಿ, ಕುಸುಮಾವತಿ ಶಿವಳ್ಳಿ, ಶಿವಲೀಲಾ ಕುಲಕರ್ಣಿ, ಎ.ಎಂ. ಹಿಂಡಸಗೇರಿ, ಅಲಿ ಗೊರವನಕೊಳ್ಳ, ಸದಾನಂದ ಡಂಗನವರ, ಇತರರು ಇದ್ದರು.ಪಕ್ಷದಲ್ಲಿ ಗುಂಪುಗಾರಿಕೆ, ಭಿನ್ನಮತವಿಲ್ಲ

ಕನ್ನಡಪ್ರಭ ವಾರ್ತೆ ಧಾರವಾಡ

ಧಾರವಾಡ ಲೋಕಸಭಾ ಚುನಾವಣೆ ಪ್ರಚಾರ ಅಧಿಕೃತ ಆರಂಭವಾಗಿದೆ. ಬಿಜೆಪಿಯಲ್ಲಿ ಇರುವಂತೆ ನಮ್ಮ ಪಕ್ಷದಲ್ಲಿ ಭಿನ್ನಮತ, ಗುಂಪುಗಾರಿಕೆ ಇಲ್ಲ. ಎಲ್ಲರೂ ಒಟ್ಟಾಗಿ ಸೇರಿ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಇದರಿಂದ ಅಚ್ಚರಿ ಫಲಿತಾಂಶ ಬರಲಿದೆ ಎಂದು ಸಚಿವ ಸಂತೋಷ ಲಾಡ್‌ ಭರವಸೆ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷಗಳ ಕಾಲ ಜನರಿಗೆ ಪ್ರಧಾನಿ ಮೋದಿ ಹೇಳಿದ ಸುಳ್ಳುಗಳನ್ನು ಜನರಿಗೆ ತಿಳಿಸುವ ಜತೆಗೆ ನಮ್ಮ ಸರ್ಕಾರದ ಸಾಧನೆಯನ್ನೂ ಜನರ ಮುಂದಿಡುತ್ತೇವೆ ಎಂದರು.

ನಾನು ಈ ವರೆಗೂ ಪ್ರಧಾನಿ‌ ಮೋದಿ ಹಾಗೂ ಜೋಶಿ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ. ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುವ ಬಗ್ಗೆ ಮಾತ್ರ ಮಾತನಾಡಿದ್ದೇನೆ. ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಹತಾಶರಾಗಿ ಜೋಶಿ ಅವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಎಲ್ಲ ಹಿರಿಯರು, ಕಾರ್ಯಕರ್ತರು ಸಂಘಟಿತರಾಗಿ ಕಾರ್ಯ ನಿರ್ವಹಿಸುವ ಮೂಲಕ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಸಾಮಾನ್ಯ ಕಾರ್ಯಕರ್ತನಿಗೆ ಕಾಂಗ್ರೆಸ್‌ ಟಿಕೆಟ್‌

ಕನ್ನಡಪ್ರಭ ವಾರ್ತೆ ಧಾರವಾಡ

ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಎಲ್ಲ ಮುಖಂಡರ ಸಲಹೆ ಪಡೆದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ವಿನೋದ ಅಸೂಟಿ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅಲೆ ಇದೆ ಎಂಬುದಕ್ಕೆ ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಿದ್ದಾರೆ. 135 ಸ್ಥಾನ ಗೆದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಉತ್ತಮ ಕೆಲಸ ಮಾಡಿದ್ದು, ಇದು ನನಗೆ ಶ್ರೀರಕ್ಷೆಯಾಗಲಿದೆ ಎಂದರು.

ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಇದೆ. ಗೆಲುವಿನ ಅಂತರ ಎಷ್ಟು ಬರುತ್ತದೆಯೋ ಒಟ್ಟಿನಲ್ಲಿ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.