ಸಾರಾಂಶ
ಮಾನ್ಯತೆ/ನವೀಕರಣ ಇಲ್ಲದೆ ಅನೇಕ ವರ್ಷಗಳಿಂದ ಅಕ್ರಮವಾಗಿ ನಡೆಯುತ್ತಿರುವ ರಾಜ್ಯದ ಅನೇಕ ಖಾಸಗಿ ಶಾಲೆಗಳನ್ನು ಸಕ್ರಮಗೊಳಿಸಲು ಇದೀಗ ಅವಕಾಶ ಕಲ್ಪಿಸಿದೆ.
--ಲಿಂಗರಾಜು ಕೋರಾ
ಬೆಂಗಳೂರು : ಮಾನ್ಯತೆ ಪಡೆಯದೆ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಹೇಳುವ ಸರ್ಕಾರ, ಮಾನ್ಯತೆ/ನವೀಕರಣ ಇಲ್ಲದೆ ಅನೇಕ ವರ್ಷಗಳಿಂದ ಅಕ್ರಮವಾಗಿ ನಡೆಯುತ್ತಿರುವ ರಾಜ್ಯದ ಅನೇಕ ಖಾಸಗಿ ಶಾಲೆಗಳನ್ನು ಸಕ್ರಮಗೊಳಿಸಲು ಇದೀಗ ಅವಕಾಶ ಕಲ್ಪಿಸಿದೆ.
2023-24 ಮತ್ತು ಅದಕ್ಕೂ ಹಿಂದಿನ ವರ್ಷಗಳಲ್ಲಿ ಮಾನ್ಯತೆಯೇ ಇಲ್ಲದೆ ಅಥವಾ ಮಾನ್ಯತೆ ನವೀಕರಣ ಮಾಡಿಕೊಳ್ಳದೆ ನಡೆಯುತ್ತಿರುವ ಖಾಸಗಿ ಶಾಲೆಗಳಿಗೆ ಇದೀಗ ಬಾಕಿ ಇರುವ ಹಿಂದಿನ ಎಲ್ಲ ವರ್ಷಗಳಿಗೆ ಮತ್ತೆ ಅರ್ಜಿ ಸಲ್ಲಿಸಿ ಮಾನ್ಯತೆ/ನವೀಕರಣ ಪಡೆಯಲು ಅವಕಾಶ ನೀಡಿದೆ. ಇಂಥ ಶಾಲೆಗಳು ರಾಜ್ಯದಲ್ಲಿ ಎಷ್ಟಿವೆ ಎಂಬ ಬಗ್ಗೆ ಇಲಾಖೆಯಲ್ಲಿ ಅಧಿಕೃತ ಮಾಹಿತಿ ಇಲ್ಲ. ಅರ್ಜಿ ಸಲ್ಲಿಸಿದ ಬಳಿಕವಷ್ಟೇ ಅಂಕಿ-ಸಂಖ್ಯೆ ಲಭ್ಯವಾಗಲಿದೆ. ಮೂಲಗಳ ಪ್ರಕಾರ, ರಾಜ್ಯದಲ್ಲಿ ಇಂಥ ನೂರಾರು ಶಾಲೆಗಳಿವೆ ಎನ್ನಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಾಲಮಿತಿಯಲ್ಲಿಹೊಸ ಮಾನ್ಯತೆ, ಮಾನ್ಯತೆ ನವೀಕರಣಕ್ಕೆ ಆನ್‌ಲೈನ್ ತಂತ್ರಾಂಶದ ಮೂಲಕ ಅಕ್ರಮ ಶಾಲೆಗಳಿಗೆ ಅವಕಾಶ ನೀಡಿದೆ. ಉದಾಹರಣೆಗೆ 2021-22ನೇ ಸಾಲಿನಿಂದ ಮಾನ್ಯತೆಯನ್ನೇ ಪಡೆಯದಿರುವ ಖಾಸಗಿ ಶಾಲೆಯು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಆ ವರ್ಷಕ್ಕೆ ಮಾನ್ಯತೆ ದೊರೆಯುತ್ತದೆ. ತಕ್ಷಣ ಮುಂದಿನ ಐದೇ ದಿನದಲ್ಲಿ 2022-23ನೇ ಸಾಲಿನ ಮಾನ್ಯತೆ ನವೀಕರಣಕ್ಕೆ ಅದೇ ಶಾಲೆ ಅರ್ಜಿ ಸಲ್ಲಿಸಬಹುದು. ಹೀಗೆ ಬಾಕಿ ಇರುವ ವರ್ಷಗಳಿಗೆಲ್ಲ ಅಕ್ರಮವಾಗಿ ನಡೆಯುತ್ತಿರುವ ಶಾಲೆಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಸಕ್ರಮಗೊಳಿಸಿಕೊಳ್ಳಬಹುದಾಗಿದೆ.
ಷರತ್ತು ಅನ್ವಯ:
2024-25ನೇ ಸಾಲಿಗೆ ಹಿಂದಿನ ಸಾಲುಗಳಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಇಲ್ಲದೆ ನಡೆಯುತ್ತಿರುವ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಅಂಥ ಶಾಲೆಗಳಿಗೆ ಅಂತಿಮ ಎಚ್ಚರಿಕೆಯೊಂದಿಗೆ ಈ ಅವಕಾಶ ಕಲ್ಪಿಸಲಾಗಿದೆ. ಮಾನ್ಯತೆ ನವೀಕರಣಕ್ಕೆ ಅಗತ್ಯವಿರುವ ಎಲ್ಲ ದಾಖಲೆ ಪೂರೈಸಿರುವುದನ್ನು ಕೂಲಂಕಷವಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು, ಮುಂದಿನ ವರ್ಷಗಳಲ್ಲಿ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಮಾನ್ಯತೆ ನವೀಕರಣ ಮಾಡಿಕೊಳ್ಳುವ, ಒಂದು ವೇಳೆ ವಿಫಲವಾದರೆ ಶಾಲೆಯ ನೋಂದಣಿ ರದ್ದುಪಡಿಸುವ ಮತ್ತು ಮಾನ್ಯತೆ ಹಿಂಪಡೆಯುವ ಷರತ್ತು ವಿಧಿಸಿ ಒಂದು ಬಾರಿಗೆ ಮಾತ್ರ ಈ ಅವಕಾಶಕ್ಕೆ ಒಪ್ಪಿಗೆ ನೀಡಲಾಗಿದೆ. ಈ ಅವಧಿ ನಂತರವೂ ಮಾನ್ಯತೆ ಪಡೆಯಲು ವಿಫಲವಾಗುವ ಶಾಲೆಗಳ ನೋಂದಣಿ ರದ್ದುಪಡಿಸಲು ಡಿಡಿಪಿಐಗಳಿಗೆ ಸೂಚಿಸಿದೆ.
ಏ.28ರಿಂದ ಅರ್ಜಿ ಸಲ್ಲಿಕೆ:
ಏ.28ರಿಂದ ಮೇ 13ರವರೆಗೆ ಖಾಸಗಿ ಶಾಲೆಗಳು ಬಾಕಿ ಇರುವ ಶೈಕ್ಷಣಿಕ ಸಾಲುಗಳಿಗೆ ಹೊಸ ಮಾನ್ಯತೆ ಪಡೆಯಲು ಅಥವಾ ಮಾನ್ಯತೆ ನವೀಕರಣಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯಾ ಜಿಲ್ಲಾ ಉಪನಿರ್ದೇಶರ ಕಚೇರಿಯಲ್ಲಿ ಅರ್ಜಿ ಬಂದ ದಿನದಿಂದ 5 ದಿನಗಳಲ್ಲಿ ಪರಿಶೀಲಿಸಿ ಅಗತ್ಯವಿದ್ದರೆ ಆಕ್ಷೇಪಣೆ ಸಹಿತ ಶಾಲಾ ಆಡಳಿತ ಮಂಡಳಿಗೆ ಅರ್ಜಿ ಹಿಂದಿರುಗಿಸಬಹುದು. ಈ ಪ್ರಕ್ರಿಯೆಗೆ ಮೇ 3ರಿಂದ 31ರವರೆಗೆ ಕಾಲಾವಕಾಶವಿರುತ್ತದೆ. ನಂತರ ಏಳು ದಿನಗಳಲ್ಲಿ ಆಡಳಿತ ಮಂಡಳಿಗಳು ಡಿಡಿಪಿಐ ಕಚೇರಿಯ ಆಕ್ಷೇಪಣೆಗಳಿಗೆ ಅಗತ್ಯ ಮಾಹಿತಿ/ದಾಖಲೆ ಒದಗಿಸಿ ಮತ್ತೆ ಅರ್ಜಿ ಕಳುಹಿಸಬಹುದು. ಈ ಪ್ರಕ್ರಿಯೆಗೆ ಮೇ 5ರಿಂದ ಜೂನ್ 6ರವರೆಗೆ ಅವಕಾಶ ಇರುತ್ತದೆ. ಆಕ್ಷೇಪಣೆ ಸರಿಪಡಿಸಿ ಬಂದ ಅರ್ಜಿಗಳನ್ನು ಇತ್ಯರ್ಥಪಡಿಸಿ ಅರ್ಹ ಶಾಲೆಗಳಿಗೆ ಮಾನ್ಯತೆ ನೀಡುವ, ಮಾನ್ಯತೆ ನವೀಕರಣ ಪ್ರಮಾಣ ಪತ್ರ ನೀಡಲು ಹಾಗೂ ಅರ್ಜಿ ತಿರಸ್ಕೃತವಾಗಿದ್ದಲ್ಲಿ ತಿರಸ್ಕೃತ ಆದೇಶ ನೀಡುವುದನ್ನು ಐದು ದಿನಗಳಲ್ಲಿ ನೀಡಬೇಕು. ಈ ಪ್ರಕ್ರಿಯೆ ಮೇ 6ರಿಂದ 17ರ ವೇಳೆಗೆ ಪೂರ್ಣಗೊಳ್ಳಬೇಕೆಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಎಲ್ಲಾ ಜಿಲ್ಲಾ ಡಿಡಿಪಿಐಗಳಿಗೆ ಕಾಲಮಿತಿ ನಿಗದಿಪಡಿಸಿದ್ದಾರೆ. ಇನ್ನು ಅರ್ಜಿ ಸಲ್ಲಿಕೆ, ಪರಿಶೀಲನೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ giaprimarycpi@gmail.com ಗೆ ಮಾಹಿತಿ ಸಹಿತ ವಿವರ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಅಕ್ರಮ ಶಾಲೆ ಸಂಖ್ಯೆ
ಅರ್ಜಿಗಳಿಂದ ಬಹಿರಂಗ2023-24 ಮತ್ತು ಅದಕ್ಕೂ ಹಿಂದಿನ ವರ್ಷಗಳಲ್ಲಿ ಮಾನ್ಯತೆ ಇಲ್ಲದ, ನವೀಕರಣ ಮಾಡಿಕೊಳ್ಳದ ಶಾಲೆಗಳು ಎಷ್ಟು ಸಂಖ್ಯೆಯಲ್ಲಿವೆ ಎಂಬುದು ಅರ್ಜಿ ಸಲ್ಲಿಸಿದ ಬಳಿಕವಷ್ಟೇ ಗೊತ್ತಾಗಲಿದೆ. ಮಾನ್ಯತೆ/ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್‌ಗೊಳಿಸಿದ ಬಳಿಕ ಕೆಲ ಸಮಸ್ಯೆ, ಕಾರಣಾಂತರಗಳಿಂದ ಮಾನ್ಯತೆ ಪಡೆಯಲಾಗದ ಶಾಲೆಗಳಿಗೆ ಸರ್ಕಾರದ ಅನುಮತಿ ಪಡೆದು ಅವಕಾಶ ಮಾಡಿಕೊಡಲಾಗಿದೆ.
- ತ್ರಿಲೋಕ್ ಚಂದ್ರ, ಶಾಲಾ ಶಿಕ್ಷಣ ಇಲಾಖೆ ಆಯುಕ್ತ