ಸಾರಾಂಶ
ಇಂದಿನ ಒತ್ತಡ ಜೀವನದಲ್ಲಿ ಅನೇಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಪುರಸಭೆ ಸದಸ್ಯ ಸುಭಾಸ ಚವ್ಹಾಣ ಹೇಳಿದರು.
ಶಿಗ್ಗಾಂವಿ: ಪ್ರತಿಯೊಬ್ಬ ಮನುಷ್ಯ ವರ್ಷಕ್ಕೆ ಎರಡು ಬಾರಿ ಸಮಗ್ರ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ಸದೃಢ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದು ಪುರಸಭೆ ಸದಸ್ಯ ಸುಭಾಸ ಚವ್ಹಾಣ ಹೇಳಿದರು.
ಶಿಗ್ಗಾಂವಿ ಪಟ್ಟಣದ ೪ನೇ ವಾರ್ಡಿನಲ್ಲಿ ನಡೆದ ಕೆಎಸ್‌ಎಪಿಎಸ್, ಡ್ಯಾಪ್ಕೋ ಹಾಗೂ ಆಯುಷ್ಮಾನ ಆರೋಗ್ಯ ಮಂದಿರ ನೇತೃತ್ವದಲ್ಲಿ ನಡೆದ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಇಂದಿನ ಒತ್ತಡ ಜೀವನದಲ್ಲಿ ಅನೇಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಆರ್ಯುವೇದ ವೈದ್ಯಾಧಿಕಾರಿ ಡಾ. ಸರಸ್ವತಿ ಮಾತನಾಡಿ, ನಾವು ವಾಸಿಸುವ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಿಕೊಂಡಾಗ ಶೇ. ೬೦ರಷ್ಟು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದನ್ನು ನಿಯಂತ್ರಣ ಮಾಡಬಹುದು. ಜೊತೆಗೆ ನಮ್ಮ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.ಸಮುದಾಯ ಆರೋಗ್ಯ ಅಧಿಕಾರಿ ಸಂತೋಷ ಮಾತನಾಡಿ, ಸರಕಾರದಲ್ಲಿ ಅನೇಕ ಯೋಜನೆಗಳಿವೆ. ಅದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಆಪ್ತ ಸಮಾಲೋಚಕಿ ರೇಣುಕಾ ಹೊಸಮನಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಗ್ರ ಆರೋಗ್ಯ ತಪಾಸಣೆ ಮಾಡುವುದರ ಮೂಲಕ ಅವರಲ್ಲಿರುವ ಕಾಯಿಲೆಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಸುಮಾ, ಶ್ರುತಿ, ಆಶಾ ಕಾರ್ಯಕರ್ತೆಯರು, ವಾರ್ಡಿನ ಸಾರ್ವಜನಿಕರು ಸೇರಿದಂತೆ ಸಂಘ-ಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿ ಶಮ್ಸ್ ತಬರೇಜ್ ನಿರ್ವಹಿಸಿದರು.