ಸಾರಾಂಶ
ವಿದ್ಯುತ್ ದೀಪಗಳ ಬೆಳಕಿನಲ್ಲಿ ಜಗಮಗಿಸಿದ ಜಲಪಾತ, ಬಣ್ಣ ಬಣ್ಣದ ಚಿತ್ತಾರದಲ್ಲಿ ಹಾಲ್ನೊರೆಯಂತೆ ದುಮ್ಮಿಕ್ಕಿದ ಕಾವೇರಿ ಜಲಧಾರೆ, ಜಲಪಾತದ ವೈಭವ ಕಂಡು ಆನಂದ ತುಂದಿಲರಾದ ನೋಡುಗರು, ಕಣ್ಮನ ಸೆಳೆದ ದೀಪಾಲಂಕಾರ, ಸಂಗೀತದ ರಸದೌತಣ ಉಣಬಡಿಸಿದ ಕಲಾವಿದರು, ಕಣ್ಣಿಗೆ ಹಬ್ಬವನ್ನುಂಟು ಮಾಡಿದ ಜಲಪಾತೋತ್ಸವ.
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ವಿದ್ಯುತ್ ದೀಪಗಳ ಬೆಳಕಿನಲ್ಲಿ ಜಗಮಗಿಸಿದ ಜಲಪಾತ, ಬಣ್ಣ ಬಣ್ಣದ ಚಿತ್ತಾರದಲ್ಲಿ ಹಾಲ್ನೊರೆಯಂತೆ ದುಮ್ಮಿಕ್ಕಿದ ಕಾವೇರಿ ಜಲಧಾರೆ, ಜಲಪಾತದ ವೈಭವ ಕಂಡು ಆನಂದ ತುಂದಿಲರಾದ ನೋಡುಗರು, ಕಣ್ಮನ ಸೆಳೆದ ದೀಪಾಲಂಕಾರ, ಸಂಗೀತದ ರಸದೌತಣ ಉಣಬಡಿಸಿದ ಕಲಾವಿದರು, ಕಣ್ಣಿಗೆ ಹಬ್ಬವನ್ನುಂಟು ಮಾಡಿದ ಜಲಪಾತೋತ್ಸವ.- ಇವು ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಶನಿವಾರ ರಾತ್ರಿ ನಡೆದ ಜಲಪಾತೋತ್ಸವದಲ್ಲಿ ಕಂಡು ಬಂದ ರಮಣೀಯ ದೃಶ್ಯಗಳು. ಜಲಪಾತೋತ್ಸವದ ಅಂಗವಾಗಿ ಕಾವೇರಿ ಜಲಪಾತಕ್ಕೆ ಮಾಡಲಾಗಿದ್ದ ಬಗೆ ಬಗೆಯ ವಿದ್ಯುತ್ ದೀಪಾಲಂಕಾರ ಜಗಮಗಿಸಿ ದುಮ್ಮಿಕ್ಕುತ್ತಿದ್ದ ಜಲ ವೈಭವ ಧರೆಗೆ ದೇವಗಂಗೆ ಬಂದಂತೆ ಬಾಸವನ್ನುಂಟು ಮಾಡಿತ್ತು. ಹತ್ತಾರು ಬಗೆಯ ದೀಪಗಳ ಬೆಳಕಿನಿಂದ ಜಲಪಾತದಲ್ಲಿ ನೀರು ಹರಿಯುತ್ತಿದ್ದ ದೃಶ್ಯ ಚಿತ್ತಾರ ಲೋಕವನ್ನು ಸೃಷ್ಠಿಸಿ ಹಾಲ್ನೊರೆಯ ಜಲಪಾತದ ಮನ ಮೋಹಕ ದೃಶ್ಯಗಳು ಎಲ್ಲರ ಮನಸ್ಸಿಗೂ ಮುದ ನೀಡಿದವು.
ಕಳೆದ ನಾಲ್ಕು ವರ್ಷಗಳಿಂದ ವಿವಿಧ ಕಾರಣಗಳಿಂದ ಸ್ಥಗಿತವಾಗಿದ್ದ ಕಾವೇರಿ ಜಲಪಾತೋತ್ಸವ ಈ ಭಾರಿ ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದರಿಂದ ಸಾವಿರಾರು ಮಂದಿ ಭಾಗವಹಿಸಿ ಜಲಪಾತದ ರುದ್ರ ರಮಣೀಯ ದೃಶ್ಯಗಳು ಮತ್ತು ದೀಪಾಲಂಕಾರ ಕಂಡು ಎಲ್ಲರೂ ಸಂತಸಗೊಂಡರು.ಬಸವಯ್ಯ ಮತ್ತು ತಂಡದಿಂದ ಜರುಗಿದ ಜನಪದ ಝೇಂಕಾರ, ಕನ್ನಡ ಸಂಗೀತ ವೈಭವ, ಖ್ಯಾತ ಗಾಯಕ ರಘು ದೀಕ್ಷಿತ್ ತಂಡದಿಂದ ನಡೆದ ಸಂಗೀತ ಸಂಜೆ, ವಿವಿದ ಕಲಾವಿದರು ನೀಡಿದ ವೈವಿಧ್ಯ ಕಾರ್ಯಕ್ರಮಗಳು ಸಂಗೀತದ ರಸದೌತಣ ಉಣ ಬಡಿಸಿತು.
ಶಾಸಕ ಡಿ. ರವಿಶಂಕರ್ ಅವರ ಕಾಳಜಿಯಿಂದ ಜಲಪಾತೋತ್ಸವದ ಅಂಗವಾಗಿ ಚುಂಚನಕಟ್ಟೆ ಮಾತ್ರವಲ್ಲದೆ ಕೆ.ಆರ್. ನಗರ ಸೇರಿದಂತೆ ಚುಂಚನಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಎಲ್ಲಾ ಗ್ರಾಮಗಳ ಪ್ರಮುಖ ವೃತ್ತಗಳಲ್ಲಿಯೂ ದೀಪಾಲಂಕಾರ ಮಾಡಿದ್ದು ವಿಶೇಷವಾಗಿತ್ತು.