ಯುವ ಸಮುದಾಯದಲ್ಲಿ ಇಂದು ಗೆಲ್ಲುವ ಧಾವಂತ ಹೆಚ್ಚಾಗಿದೆ: ಚಂದ್ರು ಮಂಡ್ಯ

| Published : Mar 26 2024, 01:16 AM IST

ಯುವ ಸಮುದಾಯದಲ್ಲಿ ಇಂದು ಗೆಲ್ಲುವ ಧಾವಂತ ಹೆಚ್ಚಾಗಿದೆ: ಚಂದ್ರು ಮಂಡ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಕೂಡು ಕುಟುಂಬದ ಪರಿಕಲ್ಪನೆ ಮೂಡುವಂತೆ ಪೋಷಕರು ನಡೆದುಕೊಳ್ಳಬೇಕು. ಗುರು ಹಿರಿಯರಲ್ಲಿ ಭಯ, ಭಕ್ತಿ ಮತ್ತು ವಿಧೇಯತೆಯಿಂದ ಇರಬೇಕೆಂದು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ರೂಡಿ ಮಾಡಬೇಕು. ಯುವ ಸಮುದಾಯ ಸಾಧ್ಯವಾದಷ್ಟು ಹೃದಯ ವೈಶಾಲ್ಯತೆ ಹೊಂದುವ ಕಡೆ ಗಮನಹರಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಯುವ ಸಮುದಾಯದಲ್ಲಿ ಇಂದು ಗೆಲ್ಲುವ ದಾವಂತ ಹೆಚ್ಚಾಗಿದೆ. ಗೆಲ್ಲುವ ಹಂತದಲ್ಲಿನ ಪ್ರಕ್ರಿಯೆ ಮತ್ತು ಸೋಲನ್ನು ಆನಂದಿಸುವ ಮನೋಭಾವವನ್ನೇ ತೊರೆದು ಬಿಟ್ಟಿದ್ದಾರೆ ಎಂದು ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ರಂಗಕರ್ಮಿ ಚಂದ್ರು ಮಂಡ್ಯ ತಿಳಿಸಿದರು.

ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಎನ್ಎಸ್ಎಸ್ ಘಟವರು ಬಸವನಹಳ್ಳಿ (ಗದ್ದಿಗೆ) ಗ್ರಾಮದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಜನರಲ್ಲಿ ಗೆಲುವು ಒಂದೇ ಮಾನದಂಡ ಎಂದು ಕೆಲವು ಪೋಷಕರು ಬಯಸುತ್ತಿದ್ದಾರೆ. ಗೆಲುವು ಕ್ಷಣಿಕವಾದ ಮನೋಲ್ಲಾಸ ಮತ್ತು ಸಂತೋಷವನ್ನು ನೀಡುತ್ತದೆ. ಆದರೆ ಗೆಲ್ಲುವ ಹಂತದಲ್ಲಿ ಸಾವಿರಾರು ಪ್ರಕ್ರಿಯೆಯನ್ನು ಆನಂದಿಸುವುದನ್ನು ಯುವ ಜನತೆ ಮತ್ತು ಪೋಷಕರು ಮರೆತಿದ್ದಾರೆ ಎಂದರು.

ಮಕ್ಕಳಿಗೆ ಕೂಡು ಕುಟುಂಬದ ಪರಿಕಲ್ಪನೆ ಮೂಡುವಂತೆ ಪೋಷಕರು ನಡೆದುಕೊಳ್ಳಬೇಕು. ಗುರು ಹಿರಿಯರಲ್ಲಿ ಭಯ, ಭಕ್ತಿ ಮತ್ತು ವಿಧೇಯತೆಯಿಂದ ಇರಬೇಕೆಂದು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ರೂಡಿ ಮಾಡಬೇಕು. ಯುವ ಸಮುದಾಯ ಸಾಧ್ಯವಾದಷ್ಟು ಹೃದಯ ವೈಶಾಲ್ಯತೆ ಹೊಂದುವ ಕಡೆ ಗಮನಹರಿಸಬೇಕು. ತೀರಾ ವೈಯಕ್ತಿಕ ಮತ್ತು ಕೌಟುಂಬಿಕ ನೆಲೆಯನ್ನು ಮೀರಿ ಸಾಮಾಜಿಕ ನೆಲೆಯಲ್ಲಿ ಬದುಕುವುದನ್ನು ಕಲಿಯಬೇಕು ಎಂದು ಅವರು ಹೇಳಿದರು.

ಎನ್ಎಸ್ಎಸ್ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಯುವ ಸಮುದಾಯದ ಪಾತ್ರ ಅತಿ ಮುಖ್ಯ. ನಾಡಿನ ಕಟ್ಟ ಕಡೆಯ ಗ್ರಾಮವನ್ನು ಕೂಡ ನಗರದಷ್ಟೇ ಮುಖ್ಯವಾಗಿ ಮೇಲ್ಪಂಕ್ತಿಗೆ ತರಲು ಶ್ರಮಿಸಬೇಕು. ಹೆಣ್ಣು ಮಕ್ಕಳು ಪುರುಷನಷ್ಟೇ ಸಮರ್ಥವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಗ್ರಾಮಿಣ ಪ್ರದೇಶದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.

ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮುಂದಿನ ದಿನಗಳಲ್ಲಿ ಜೆಎಸ್ಎಸ್ ಸಂಸ್ಥೆ ಇನ್ನೂ ಹೆಚ್ಚಿನ ಸಹಕಾರ ನೀಡಲಿದೆ. ಗಾಂಧೀಜಿಯವರ ಆಸೆಯಂತೆ ವಿದ್ಯಾರ್ಥಿಗಳು ಪರಸ್ಪರ ಪ್ರೀತಿ, ವಿಶ್ವಾಸ ಗೌರವದಿಂದ ಕಾಣಬೇಕು. ಗ್ರಾಮೀಣ ಪರಿಸರ ಅರಿತುಕೊಳ್ಳಲು ಎನ್ಎಸ್ಎಸ್ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಎನ್. ತೇಜಸ್ವಿ, ಜನಪದ ಕಲಾವಿದ ಅಮ್ಮ ರಾಮಚಂದ್ರ, ಜೆಎಸ್ಎಸ್ ಕಾಲೇಜು ಪ್ರಾಂಶುಪಾಲೆ ಡಾ.ಎಸ್. ಪ್ರತಿಭಾ, ಚಲನಚಿತ್ರ ಕಲಾವಿದ ಎನ್. ಸ್ವಾಮಿ, ಬಸವನಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಸವಿತಾ, ಗ್ರಾಮಸ್ಥರಾದ ಎನ್. ಕುಂಟೇಗೌಡ, ಸ್ವಾಮಿಗೌಡ ಇದ್ದರು.