ಚಂದ್ರಶೇಖರನ್‌ ಆತ್ಮಹತ್ಯೆ: ನ್ಯಾಯಕ್ಕಾಗಿ ಬೀದಿಗಿಳಿದ ಬಿಜೆಪಿ

| Published : Jun 29 2024, 12:30 AM IST

ಸಾರಾಂಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ಮತ್ತು ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾದ ವತಿಯಿಂದ ನಡೆದ ಬೃಹತ್‌ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ಮತ್ತು ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಶೋಷಿತ ಪೀಡಿತ ಜನರಿಗಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ಚುನಾವಣೆಗೆ ಬಳಸಿಕೊಂಡಿದೆ. ವಾಲ್ಮೀಕಿ ನಿಗಮದ ಹಣವನ್ನು ನುಂಗಿ ನೀರು ಕುಡಿದ ಸರ್ಕಾರ ವಾಲ್ಮೀಕಿ ಮಹರ್ಷಿಗಳಿಗೆ ಅವಮಾನಿಸಿದೆ. ನಿಗಮದ ಅಧಿಕಾರಿ ಚಂದ್ರಶೇಖರನ್‌ ಸರ್ಕಾರ ಭ್ರಷ್ಟಚಾರವನ್ನು ಬಯಲಿಗೆಳೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಗೃಹಸಚಿವರು ಸೇರಿದಂತೆ ಕೆಲ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಮೃತ ಚಂದ್ರಶೇಖರನ್‌ ಮನೆಗೆ ಭೇಟಿ ನೀಡಿದ್ದು, ಬಿಟ್ಟರೆ ಈವರೆಗೆ ಆತನ ಕುಟುಂಬಕ್ಕೆ ಒಂದು ನಯಾಪೈಸೆ ಪರಿಹಾರ ನೀಡಿಲ್ಲ. ಸರ್ಕಾರ ನೀಡಿದ ಭರವಸೆ ಹುಸಿಯಾಗಿದೆ. ಪ್ರಕರಣದ ಮುಚ್ಚುವ ಯತ್ನ ನಡೆದಿದೆ. ಇದಕ್ಕೆ ನ್ಯಾಯ ಕೆಳಲು ಬಂದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನ್ಯಾಯಯುತ ಹೋರಾಟಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಬಂಧನದ ಬೆದರಿಕೆ ವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇದು ಅತ್ಯಂತ ನೋವಿನ ಸಂದರ್ಭ. ವರ್ಷ ಕಳೆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಈ ಸರ್ಕಾರದ ನಡವಳಿಕೆ ಇದೇ ರೀತಿ ಮುಂದುವರೆದರೆ ಕಾನೂನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ದೇಶಕ್ಕೆ ತುರ್ತು ಪರಿಸ್ಥಿತಿ ತಂದು ಮಾನವ ಹಕ್ಕನ್ನು ನಾಶ ಮಾಡಿದ ದಿ.ಇಂದಿರಾಗಾಂಧಿ ಕುಟುಂಬಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಶೋಷಿತ ಪೀಡಿತ ಸಮಾಜದ ದುಡ್ಡನ್ನು ತಿಂದವರು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿಯುವ ಯಾವುದೇ ನೈತಿಕತೆಯಿಲ್ಲ ಎಂದರು.

ಪತ್ರಿಭಟನೆಯಲ್ಲಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್, ಪ್ರಮುಖರಾದ ಮೋಹನ್‍ ರೆಡ್ಡಿ, ಶಿವರಾಜ್, ಜಗದೀಶ್, ಮಂಜುನಾಥ್ ನವುಲೆ, ಜಯರಾಮ್, ಗಾಯಿತ್ರಿ ಮಲ್ಲಪ್ಪ, ರಶ್ಮಿ ಶ್ರೀನಿವಾಸ್, ಶಿವಾನಂದ, ಮಹೇಶ್ ಮೂರ್ತಿ, ರಾಮು, ವೆಂಕಟೇಶ್ ನಾಯ್ಡು, ಎಚ್. ಟಿ. ಬಳಿಗಾರ್, ವಿಶ್ವನಾಥ್, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ ಮತ್ತಿತರರು ಇದ್ದರು.

ಡಿಸಿ ಕಚೇರಿಗೆ ಮುತ್ತಿಗೆ ಯತ್ನ:

ಪ್ರತಿಭಟನಾಕಾರರ ಬಂಧನ

ಬಿಜೆಪಿ ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸರು ಬ್ಯಾರಿಕೇಡ್‌ ಹಾಕಿ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು. ಬೆಳಗ್ಗೆ ಬಿಜೆಪಿ ಕಾರ್ಯಕರ್ತರು ಕಚೇರಿಗೆ ನುಗ್ಗಿ ಮನವಿ ಕೊಡಲು ಯತ್ನಿಸಿದರು. ಈ ವೇಳೆ ಬಿಜೆಪಿ ಮುಖಂಡರಿಗೆ ಪೊಲೀಸರು ಅಡ್ಡಿಪಡಿಸಿ ಜನಸ್ಪಂದನ ಕಾರ್ಯಕ್ರಮ ಇರುವುದರಿಂದ ಯಾವುದೇ ಅಧಿಕಾರಿಗಳು ಇಲ್ಲಿಲ್ಲ ಎಂದು ತಿಳಿದರು.

ಈ ವೇಳೆ ಜನಸ್ಪಂದನೆ ಕಾರ್ಯಕ್ರಮ ನಡೆಯುತ್ತಿದ್ದ ಕುವೆಂಪು ರಂಗಮಂದಿರದ ಕಡೆಗೆ ಪ್ರತಿಭಟನಾ ಕಾರ್ಯಕರ್ತರು ನುಗ್ಗಲು ಯತ್ನಿಸಿದರು. ಆಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆದಿಯಾಗಿ ಮಹಾವೀರ ವೃತ್ತದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.