ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿಯವರ ಮೇಲೆ ರಾಜ್ಯ ಸರ್ಕಾರ ಒಂದು ಸಮುದಾಯದ ಒಲೈಕೆಯ ಸಲುವಾಗಿ ಜೈಲಿಗೆ ಕಳಿಸುವ ಹುನ್ನಾರ ನಡೆಸಿರುವುದು ಅಕ್ಷಮ್ಯ ಅಪರಾಧ ಎಂದು ಒಕ್ಕಲಿಗ ಸಮುದಾಯದ ಮುಖಂಡ ಹಾಗೂ ಜಯಕರ್ನಾಟಕ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ತಕ್ಷಣವೇ ಕ್ಷಮೆಯಾಚಿಸಿ ಚಂದ್ರಶೇಖರ ಸ್ವಾಮೀಜಿಯವರ ಮೇಲಿನ ಪ್ರಕರಣ ಹಿಂತೆಗೆದುಕೊಳ್ಳದಿದ್ದರೆ ಒಕ್ಕಲಿಗರು ಬೀದಿಗಿಳಿದು ಹೋರಾಡಲು ಸಿದ್ಧರಿದ್ದೇವೆ. ರಾಜ್ಯದ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ಕಂಗಾಲಾಗಿದ್ದನ್ನು ಕಂಡು ಮರುಗಿದ ಒಕ್ಕಲಿಗ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಫ್ರೀಡಂಪಾರ್ಕ್ ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತಿನ ಭರದಲ್ಲಿ ಮುಸಲ್ಮಾನರಿಗೆ ಮತದಾನದ ಹಕ್ಕನ್ನು ನಿರಾಕರಿಸಬೇಕು ಎಂದು ಹೇಳಿದ್ದು, ನಂತರ ತಮ್ಮ ಮಾತಿಗೆ ವಿಷಾದಿಸಿ ಕ್ಷಮೆಯಾಚಿಸಿದ್ದರೂ ಕೂಡ ಸರಕಾರ ಒಕ್ಕಲಿಗ ಜನಾಂಗದ ಮೇಲಿನ ದ್ವೇಷ ಹಾಗೂ ಪ್ರತೀಕಾರದ ದೃಷ್ಟಿಯಿಂದ ಸ್ವಾಮೀಜಿಯವರ ಮೇಲೆ ಎಪ್ ಐಆರ್ ದಾಖಲಿಸಿದ್ದು ದುರುದ್ದೇಶಪೂರ್ವಕವಾಗಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಸಾಕ್ಷಿಯಾಗಲಿದೆ ಎಂದರು.
ಒಕ್ಕಲಿಗರು ಕ್ಷಮಿಸುವುದಿಲ್ಲ:ಸ್ವಾಮೀಜಿಯವರ ಬಾಯ್ತಪ್ಪಿನಿಂದ ಆಡಿದ ಒಂದು ಮಾತಿಗೆ ಪ್ರಕರಣ ದಾಖಲಿಸುವುದಾದರೆ ಇತ್ತೀಚೆಗೆ ಮೌಲ್ವಿಯೊಬ್ಬ ದುರಹಂಕಾರದಿಂದ ಸರಕಾರ ನಿಮ್ಮದಿರಬಹುದು, ಆದರೆ ರಸ್ತೆಯುದ್ದಕ್ಕೂ ಮುಸಲ್ಮಾನರಿಂದ ಘೇರಾವ್ ಮಾಡಿಸಿ ಸಂಸತ್ ಭವನಕ್ಕೆ ಒಬ್ಬ ಸಂಸದನನ್ನೂ ಹೋಗದಂತೆ ಮಾಡುವ ತಾಕತ್ತು ಮುಸಲ್ಮಾನರಿಗಿದೆ ಎಂದಿದ್ದರು, ರಾಜ್ಯ ವಕ್ಫ್ ಖಾತೆ ಸಚಿವ ಜಮೀರ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಜನಾಂಗೀಯ ನಿಂದನೆ ಮಾಡಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿ, ಒಕ್ಕಲಿಗ ಸಮುದಾಯದ ಭಾವನೆಗೆ ಧಕ್ಕೆ ತಂದಿದ್ದರು. ಆದರೂ ಸರಕಾರ ಅವರ ಮೇಲೇಕೆ ಪ್ರಕರಣ ದಾಖಲಿಸಲಿಲ್ಲ? ಇದರಿಂದ ಸರ್ಕಾರದ ಒಕ್ಕಲಿಗ ವಿರೋಧಿ ನೀತಿ ಎದ್ದು ಕಾಣುತ್ತಿದ್ದು, ಸರ್ಕಾರದ ನಡೆಯನ್ನು ಒಕ್ಕಲಿಗ ಸಮುದಾಯ ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಮೇಲೆ ಪ್ರಕರಣ ದಾಖಲಿಸಿದ ನಡೆ ಅಕ್ಷಮ್ಯವಾಗಿದ್ದು ವಿಚಾರಣೆಯ ನೆಪದಲ್ಲಿ 81 ವರ್ಷದ ಸ್ವಾಮೀಜಿಯವರ ವಯಸ್ಸನ್ನೂ ಪರಿಗಣಿಸದೆ ಪೊಲೀಸ್ ಠಾಣೆಗೆ ಕರೆಸುವುದು ಸರಿಯಲ್ಲ ಎಂದರು.ರಾಜ್ಯದ ಪ್ರಭಾವಿ ಮಂತ್ರಿಗಳು ಹಾಗೂ ರಾಜ್ಯ ಒಕ್ಕಲಿಗ ಜನಾಂಗದ ನಾಯಕರಾಗಲು ಹೊರಟಿರುವ ಡಿಕೆ ಸಹೋದರರು ಈ ಬಗ್ಗೆ ಏನೂ ಚಕಾರ ಎತ್ತದೇ ಇರುವುದು ಒಕ್ಕಲಿಗ ಜನಾಂಗದ ದುರ್ದೈವವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಒಕ್ಕಲಿಗ ಸಮುದಾಯದ ಮುಖಂಡರಾದ ಸ್ಟುಡಿಯೋ ಚಂದ್ರು, ಕೆರಳಾಳುಸಂದ್ರ ರಾಮಕೃಷ್ಣ, ಚೀರಣಕುಪ್ಪೆ ರಾಜೇಶ್ ಸೇರಿದಂತೆ ಹಲವು ಮುಖಂಡರು ಈ ವೇಳೆ ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))