ಸಾರಾಂಶ
ಕಾವೇರಿ ಹೋರಾಟದಲ್ಲಿ ಕನ್ನಡ, ರೈತ ಸಂಘಟನೆ ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು. ಎಲ್ಲರನ್ನೂ ಸೇರಿಸಿಕೊಂಡು ಸಭೆ ಕರೆದು ಚರ್ಚಿಸಿ ಒಮ್ಮತದಿಂದ ಸಮಿತಿಯನ್ನು ರಚಿಸಬೇಕೇ ಹೊರತು ಕೆಲವರನ್ನು ಮಾತ್ರ ಸೇರಿಸಿಕೊಂಡರೆ ಅದಕ್ಕೆ ಅರ್ಥವಿರುವುದಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ಹೋರಾಟದಂತಹ ಚಳವಳಿಗಳಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಜಿಲ್ಲಾ ಹಿತರಕ್ಷಣಾ ಸಮಿತಿಯನ್ನು ಕೆಲವೇ ಕೆಲವರು ಸೇರಿ ಪುನಾರಚನೆ ಮಾಡಿಕೊಂಡಿದ್ದು, ತಕ್ಷಣವೇ ಇದನ್ನು ವಿಸರ್ಜಿಸಿ ಎಲ್ಲಾ ಸಂಘಟನೆಗಳ ಸಭೆ ಕರೆದು ಸಮಿತಿಯನ್ನು ಹೊಸದಾಗಿ ರಚನೆ ಮಾಡುವಂತೆ ರೈತಪರ ಹೋರಾಟಗಾರರ ಸಂಘದ ಅಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ಒತ್ತಾಯಿಸಿದರು.ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಂಸದ ಜಿ. ಮಾದೇಗೌಡ ಅವರ ನಿಧನಾನಂತರ ರೈತ ಹಿತರಕ್ಷಣಾ ಸಮಿತಿಯ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆಲವರು ಪ್ರವಾಸಿ ಮಂದಿರದಲ್ಲಿ ಸಭೆ ಕರೆದು ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡು ತಮಗೆ ಬೇಕಾದವರನ್ನು ಪದಾಧಿಕಾರಿಗಳನ್ನಾಗಿ ನೇಮಿಸಿ ಪುನರ್‌ರಚಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾವೇರಿ ಹೋರಾಟದಲ್ಲಿ ಕನ್ನಡ, ರೈತ ಸಂಘಟನೆ ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು. ಎಲ್ಲರನ್ನೂ ಸೇರಿಸಿಕೊಂಡು ಸಭೆ ಕರೆದು ಚರ್ಚಿಸಿ ಒಮ್ಮತದಿಂದ ಸಮಿತಿಯನ್ನು ರಚಿಸಬೇಕೇ ಹೊರತು ಕೆಲವರನ್ನು ಮಾತ್ರ ಸೇರಿಸಿಕೊಂಡರೆ ಅದಕ್ಕೆ ಅರ್ಥವಿರುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಕೆಲವರು ಅನಾರೋಗ್ಯಕ್ಕೊಳಗಾಗಿದ್ದಾರೆ ಹಾಗಾಗಿ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿಲ್ಲ ಎಂಬ ಸಬೂಬು ಹೇಳುತ್ತಾರೆ. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಸೇರಿದಂತೆ ಹಲವರು ಸಮಿತಿಯಲ್ಲಿ ಉನ್ನತ ಸ್ಥಾನದಲ್ಲಿದ್ದರು. ಅಂತಹವರನ್ನೇ ಸಮಿತಿಯ ಹೊರಗಿಟ್ಟು ರಚನೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.೨೦ ದಿನಗಳೊಳಗೆ ಸಮಿತಿಯೊಳಗೆ ನಡೆದಿರುವ ತಪ್ಪನ್ನು ಸರಿಪಡಿಸಿಕೊಂಡು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪುನಾರಚನೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಬಿ. ರಮೇಶ್, ರಾಜುಗೌಡ ಎಂ.ಎಸ್. ಸೋಮಶೇಖರ್, ಮಹೇಂದ್ರಗೌಡ, ಕೃಷ್ಣ ಸೇರಿ ಹಲವರು ಗೋಷ್ಠಿಯಲ್ಲಿದ್ದರು.