ಮುಕ್ತ, ನ್ಯಾಯ ಸಮ್ಮತ ಚುನಾವಣೆಗೆ ಸಹಕಾರ ನೀಡಲು ಚಂದ್ರಯ್ಯ ಮನವಿ

| Published : Mar 21 2024, 01:01 AM IST

ಸಾರಾಂಶ

ಚುನಾವಣಾ ಆಯೋಗದ ನಿರ್ದೇಶನದಂತೆ ಕೆ.ಆರ್. ಪೇಟೆ ತಾಲೂಕಿನ 261 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಲು ಹೆಸರು ನೋಂದಾಯಿಸಲು, ತಿದ್ದುಪಡಿಗೆ ಮನವಿ ಸಲ್ಲಿಸಲು ಮಾ.25ರ ವರೆಗೆ ಅವಕಾಶ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಲೋಕಸಭಾ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಆರ್. ಚಂದ್ರಯ್ಯ ಮನವಿ ಮಾಡಿದರು.

ಪಟ್ಟಣದ ತಾಲೂಕು ಆಡಳಿತ ಕಾರ್ಯಸೌಧದ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಿ, ಚುನಾವಣಾ ಆಯೋಗದ ನಿರ್ದೇಶನದಂತೆ ಕೆ.ಆರ್. ಪೇಟೆ ತಾಲೂಕಿನ 261 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಲು ಹೆಸರು ನೋಂದಾಯಿಸಲು, ತಿದ್ದುಪಡಿಗೆ ಮನವಿ ಸಲ್ಲಿಸಲು ಮಾ.25ರ ವರೆಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ತಿದ್ದುಪಡಿ ಸಏರಿದಂತೆ ಸಣ್ಣಪುಟ್ಟ ಬದಲಾವಣೆಗಳಿದ್ದರೆ ತಮ್ಮ ಬೂತ್ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ. ತಾಲೂಕಿನ ಚನ್ನರಾಯಪಟ್ಟಣ ರಸ್ತೆಯ ಆನೆಗೊಳ, ಕೆ.ಆರ್. ನಗರ ರಸ್ತೆಯ ಭೇರ್ಯ ಸಮೀಪದ ಸಿಂಗನಹಳ್ಳಿ ಗ್ರಾಮದ ಬಳಿ ಹಾಗೂ ಶ್ರವಣಬೆಳಗೊಳ ಸಮೀಪದ ಅಘಲಯ ಗ್ರಾಮದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಅಕ್ರಮವಾಗಿ ಹಣ, ಮದ್ಯ ಸಾಗಾಣಿಕೆ ಸೇರಿದಂತೆ ಅಕ್ರಮ ವ್ಯವಹಾರಗಳ ಬಗ್ಗೆ ಹದ್ದಿನಕಣ್ಣು ಇಡಲಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮಗಳು ನಡೆಯುತ್ತಿರುವುದು ಏನಾದರೂ ಕಂಡು ಬಂದರೆ ಸಾರ್ವಜನಿಕರು ಚುನಾವಣಾ ಶಾಖೆ ಅಥವಾ ತಾಲೂಕು ಕಚೇರಿಗೆ ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಹಾಯಕ ಚುನಾವಣಾಧಿಕಾರಿ ಡಾ. ಲೋಕೇಶ್, ಶಿರಸ್ತೇದಾರ್ ರವಿ, ಚುನಾವಣಾ ಶಾಖೆ ಶಿರಸ್ತೇದಾರ್ ಹರೀಶ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರಾಜಶ್ವ ನಿರೀಕ್ಷಕರು, ಕಂದಾಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಸ್ಥಿತರಿದ್ದರು.