ಕುಂದಾಪುರದ ಎಂ.ಎಂ. ಹೆಗ್ಡೆ ಪ್ರತಿಷ್ಠಾನ ಕೊಡಮಾಡುವ 2026ನೇ ಸಾಲಿನ ಎಂ.ಎಂ. ಹೆಗ್ಡೆ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಚಂದ್ರಗೌಡ ಗೋಳಿಕೆರೆ ಆಯ್ಕೆಯಾಗಿದ್ದಾರೆ.

ಉಡುಪಿ: ಕುಂದಾಪುರದ ಎಂ.ಎಂ. ಹೆಗ್ಡೆ ಪ್ರತಿಷ್ಠಾನ ಕೊಡಮಾಡುವ 2026ನೇ ಸಾಲಿನ ಎಂ.ಎಂ. ಹೆಗ್ಡೆ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಚಂದ್ರಗೌಡ ಗೋಳಿಕೆರೆ ಆಯ್ಕೆಯಾಗಿದ್ದಾರೆ.ಪ್ರಶಸ್ತಿ 10 ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದ್ದು, ಜ. 25 ರಂದು ನಡೆಯುವ ಇಂದ್ರಾಳಿ ಯಕ್ಷಗಾನ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕಿನ ಇಡೂರು ಕುಂಜಾಡಿ ಗೋಳಿಕೆರೆ ಎಂಬಲ್ಲಿ ಮಂಜು ಗೌಡ ಮತ್ತು ತಾರಮ್ಮ ಗೌಡ್ತಿಯವರ ಪುತ್ರನಾಗಿ ಚಂದ್ರಗೌಡರು ಜನಿಸಿದರು. ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾದ ಇವರು 5ನೇ ತರಗತಿಯಲ್ಲಿರುವಾಗ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ಕಮಲಶಿಲೆ ಮಹಾಬಲ ದೇವಾಡಿಗರಿಂದ ಯಕ್ಷಗಾನ ಶಿಕ್ಷಣ ಪಡೆದು ಮಾರಣಕಟ್ಟೆ ಮೇಳಕ್ಕೆ ಪಾದಾರ್ಪಣೆ ಮಾಡಿದರು. ನಂತರ ಹಾಲಾಡಿ ಮೇಳದಲ್ಲಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ತಮ್ಮ ಕಲಾ ಸೇವೆ ಮುಂದುವರಿಸಿದರು.ಗತ್ತು-ಗಾಂಭೀರ್ಯದ ರಂಗನಡೆ, ಮುಖದಲ್ಲಿ ರಾಜಕಳೆ ಹಾಗೂ ಶ್ರುತಿಬದ್ಧ ಮಾತುಗಾರಿಕೆಯಿಂದ ರಂಗ ಸ್ಥಳದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕಂಸ, ಹಿರಣ್ಯಕಶಿಪು, ರಾವಣ, ಕರ್ಣ, ಆಂಜನೇಯ, ಕೌರವ, ಭಸ್ಮಾಸುರ ಮೂಕಾಸುರ, ಆಂಜನೇಯ ಮುಂತಾದ ಪಾತ್ರಗಳಿಂದ ಇವರು ಪ್ರಸಿದ್ಧರಾಗಿದ್ದಾರೆ. ಹಿರಿಯ–ಕಿರಿಯ ಕಲಾವಿದರೊಂದಿಗೆ ೪೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಇವರು ‘ಯಕ್ಷ ತೇಜಸ್ವಿ’ ಎಂಬ ಬಿರುದು ಸೇರಿದಂತೆ ನಾಡಿನಾದ್ಯಂತ ಅನೇಕ ಸನ್ಮಾನ–ಪುರಸ್ಕಾರಗಳನ್ನು ಪಡೆದಿದ್ದಾರೆ.