ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಸರು ತಡೆ ಹಿಡಿಯಬೇಕು. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ಪರವಾಗಿಲ್ಲ. ಆದರೆ, ಕಾಂಗ್ರೆಸ್‌ನಲ್ಲಿದ್ದು, ಈಶ್ವರಪ್ಪರಿಗೆ ಓಟು ಹಾಕುತ್ತೇನೆ ಎನ್ನುವವರಿಗೆ ಮಾತ್ರ ಟಿಕೆಟ್ ಕೊಡಬಾರದು ಎಂದು ನೈಋತ್ಯ ಪದವೀಧರ ಕ್ಷೇತ್ರ ಟಿಕೆಟ್ ಆಕಾಂಕ್ಷಿ ಎಸ್.ಪಿ.ದಿನೇಶ್ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೈಋತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಆಯನೂರು ಮಂಜುನಾಥ್‌ರಿಗೆ ಟಿಕೆಟ್ ನೀಡಿದ್ದಾರೆ. ನಾವು ಅಭ್ಯರ್ಥಿಯ ಬದಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ಕೆಪಿಸಿಸಿ ಅಧ್ಯಕ್ಷರಿಗೆ ಆಯನೂರು ಮಂಜುನಾಥ್ ಗೆ ಟಿಕೆಟ್ ಕೊಟ್ಟಿರುವುದೇ ಗೊತ್ತಿಲ್ಲ. ನಾವು ಭೇಟಿಯಾದಾಗ ಅಚ್ಚರಿಯಾಗಿ ನಮ್ಮನ್ನೆ ಕೇಳಿದ್ದಾರೆ. ನಾನು ನನ್ನ ಮೊಬೈಲ್‍ನಲ್ಲಿಯೇ ಎಐಸಿಸಿಯಿಂದ ಬಂದ ಪತ್ರವನ್ನು ಅವರಿಗೆ ತೋರಿಸಿದ್ದೇವು. ಅವರು ನಮ್ಮ ಮನವಿ ಪುರಸ್ಕರಿಸುವ ವಿಶ್ವಾಸವಿದೆ ಎಂದರು.
ಪಕ್ಷದಲ್ಲಿ ದುಡಿದವರಿಗೆ ಟಿಕೆಟ್ ನೀಡಿ:ಅಲ್ಲದೆ, ಅವರು ಬಿಜೆಪಿಯಲ್ಲಿದ್ದಾಗ ಸಿದ್ದರಾಮಯ್ಯರನ್ನು ಜೈಲಿಗೆ ಕಳಿಸುತ್ತೇನೆ ಎಂದಿದ್ದರು. ಅಷ್ಟೇ ಅಲ್ಲ ರಾಹುಲ್‍ಗಾಂಧಿ ವಿರುದ್ಧವೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ನಿಂದ ಸ್ಪರ್ಧಿಸಿ ಅವರು ಠೇವಣಿ ಕಳೆದುಕೊಂಡಿದ್ದಾರೆ. ಇಂತವರಿಗೆ ಟಿಕೆಟ್ ನೀಡಿದರೆ ಕೆಲಸ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಪಕ್ಷದಲ್ಲಿ ದುಡಿದಿರುವ ಯಾರಿಗೆ ಬೇಕಾದರೂ ಕೊಡಲಿ. ಕೆಲಸ ಮಾಡುತ್ತೇವೆ ಎಂದರು.
ಟಿಕೆಟ್ ಬದಲಾಯಿಸಿ ಕೊಡಲಿ:ನಾವು ಈಗಾಗಲೇ ಸಾಕಷ್ಟು ನೋಂದಣಿ ಮಾಡಿದ್ದೇವೆ. ಶ್ರಮ ಪಟ್ಟಿದ್ದೇವೆ. ನಮಗೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದೇವೆ. ಈ ಹಿಂದೆ ಎಷ್ಟೋ ಬಾರಿ ಟಿಕೆಟ್ ಘೋಷಿಸಿ ಬದಲಾವಣೆ ಮಾಡಿದ ಉದಾಹರಣೆ ಇದೆ. ಹಾಗೆಯೇ ನನಗೂ ಮಾಡಲಿ. ಒಂದು ಪಕ್ಷ ಬದಲಾವಣೆ ಸಾಧ್ಯವಾಗದಿದ್ದರೆ ನಮಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಲಿಂಗಾಯತ ಮತ ಸೆಳೆಯಲು ಅವರಿಗೆ ಟಿಕೆಟ್ ನೀಡಿದ್ದರೆ ನಾವು ಕಾಂಗ್ರೆಸ್‌ನ ನೈಜ ಲಿಂಗಾಯತರು. ಅವರಂತೆ ಎರಡು, ಮೂರು ತಿಂಗಳಿಗೊಮ್ಮೆ ಬಂದು ಹೋಗೋ ಲಿಂಗಾಯತ ಅಲ್ಲ ಎಂದು ಟಾಂಗ್ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮತ್ತೊಬ್ಬ ಆಕಾಂಕ್ಷಿ ರಂಗಸ್ವಾಮಿ ಗೌಡ ಮಾತನಾಡಿ, 92 ರಿಂದ ನಾನು ಕಾಂಗ್ರೆಸ್‍ನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ, ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಿದರೆ 30 ವರ್ಷದಿಂದ ಪಕ್ಷದಲ್ಲಿ ದುಡಿದವರು ಎಲ್ಲಿಗೆ ಹೋಗಬೇಕು? ಅಲ್ಲದೇ ಈಗಿನ ಅಭ್ಯರ್ಥಿ ಪರ ಟಿಕೆಟ್ ಕೇಳಲು ಹೋದರೆ ಅವರೇ ಈಶ್ವರಪ್ಪರಿಗೆ ಟಿಕೆಟ್ ಕೇಳುತ್ತಿದ್ದಾರೆ, ನೀವು ಅವರ ಪರ ಮತ ಕೇಳಲು ಬಂದಿದ್ದೀರಾ ಎಂದು ಜನ ನಮ್ಮನ್ನು ಕೇಳುವುದಿಲ್ಲ ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವನಾಥಕಾಶಿ, ಜ್ಯೋತಿ ಅರಳಪ್ಪ, ಜಗದೀಶ್, ಮಹಾಲಿಂಗೇಗೌಡ, ಸತೀಶ್‍ಕುಮಾರ್, ಮಹೇಶ್ ಇದ್ದರು.
ಆಯನೂರುಗೆ ಹೇಗೆ ಟಿಕೆಟ್ ಕೊಟ್ಟರೋ ಗೊತ್ತಿಲ್ಲಎರಡು ತಿಂಗಳಿಗೊಮ್ಮೆ ಪಕ್ಷ ಬದಲಿಸುವ ಆಯನೂರು ಮಂಜುನಾಥ್ ರಿಗೆ ಅದು ಹೇಗೆ ಟಿಕೆಟ್ ಕೊಟ್ಟರೋ ಗೊತ್ತಿಲ್ಲ. ಬಹಿರಂಗವಾಗಿ ಈಶ್ವರಪ್ಪನವರಿಗೆ ನನ್ನ ಓಟು ಎಂದು ಹೇಳಿದ್ದಾರೆ. ಹೊಳೆಹೊನ್ನೂರಿನಲ್ಲಿ ನಡೆದ ಸಭೆಯಲ್ಲೂ ಆಯನೂರು ಬಿಜೆಪಿ ಬೆಂಬಲಿಸಿ ಎಂದಿದ್ದಾರೆ. ಪುತ್ರನಿಗೆ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿದ್ದ ಈಶ್ವರಪ್ಪರನ್ನು ಕಿಚಾಯಿಸಿ ಅವರು ಸ್ಪರ್ಧೆ ಮಾಡುವಂತೆ ಮಾಡಿದ್ದಾರೆ. ಈಶ್ವರಪ್ಪ ಹಿಂದುಳಿದ ವರ್ಗಗಳ ನಾಯಕರಾಗಿದ್ದು ಅವರು ಸ್ಪರ್ಧೆ ಮಾಡುವುದರಿಂದ ಹಿಂದುಳಿದ ಓಟುಗಳು ವಿಭಜನೆಯಾಗುತ್ತದೆ. ಇದರಿಂದ ಕಾಂಗ್ರೆಸ್‌ಗೆ ನಷ್ಟವಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಅವರಿಗೆ ಇಲ್ಲ ಎಂದು ಎಸ್.ಪಿ.ದಿನೇಶ್ ಕಿಡಿಕಾರಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))