ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಇಲ್ಲಿನ ಎಪಿಎಂಸಿ ಕೊಬ್ಬರಿ ಮಾರುಕಟ್ಟೆ ಕೊಬ್ಬರಿ ವ್ಯಾಪಾರಕ್ಕೆ ಏಷ್ಯಾದಲ್ಲಿಯೇ ಉತ್ತಮ ಹೆಸರು ಪಡೆದಿದ್ದು, ರೈತರ ಅನುಕೂಲಕ್ಕಾಗಿ ಎಪಿಎಂಸಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು ನ.1ರಿಂದ ನೂತನ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರದ ಎಪಿಎಂಸಿಯ ರೈತಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬೆಳೆಯುವ ಕೊಬ್ಬರಿಗೆ ರಾಷ್ಟ್ರ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ಈ ಮಾರುಕಟ್ಟೆಯಲ್ಲಿ ಕೊಬ್ಬರಿ ವ್ಯಾಪಾರ ಮತ್ತಷ್ಟು ಚನ್ನಾಗಿ ನಡೆಯಲು ಇತ್ತೀಚೆಗೆ ರೈತರು ಮತ್ತು ವರ್ತಕರ ಸಭೆಯನ್ನು ಆಯೋಜಿಸಿ ಚರ್ಚಿಸಿ ಕೆಲವು ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ. ತಿಪಟೂರು ಎಪಿಎಂಸಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಸಾಕಷ್ಟು ಏರುಪೇರುಗಲಾಗುತ್ತಿದ್ದು ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿರುವುದು ಕಂಡು ಬರುತ್ತಿದೆ ಎಂದರು.
ಇದರಿಂದ ರೈತರಿಗೆ ವರ್ತಕರ ಮೇಲೆ ಆಕ್ರೋಶ, ಅಪನಂಬಿಕೆ ಹೆಚ್ಚಾಗಿ ಉಂಟಾಗುತ್ತಿದೆ. ಕ್ವಿಂಟಾಲ್ ಕೊಬ್ಬರಿಗೆ 18 ಸಾವಿರ ರು.ವರೆಗೂ ತಲುಪಿ ಕಳೆದ ಎರಡು ವರ್ಷಗಳಿಂದ ಸರಿಯಾದ ವೈಜ್ಞಾನಿಕ ಕಾರಣಗಳಿಲ್ಲದೆ ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿದ್ದು ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಕೊಬ್ಬರಿ ಉತ್ಪಾದನಾ ವೆಚ್ಚಕ್ಕೂ ಹಾಲು ಮಾರುಕಟ್ಟೆ ದರಕ್ಕೂ ಬಹಳ ವ್ಯತ್ಯಾಸ ಕಂಡು ಬಂದು ರೈತರು ದಿಕ್ಕು ತೋಚದಂತಾಗಿದೆ ಎಂದರು.ಕಳೆ ಒಂದು ತಿಂಗಳಿನಿಂದ ಮತ್ತೆ ಕೊಬ್ಬರಿ ಬೆಲೆ ತುಸು ಏರುಮುಖ ಕಂಡು ಸದ್ಯ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರು. ಇದೆ. ಈಗ ಚೇತರಿಸಿಕೊಂಡಿರುವ ಬೆಲೆ ಹೀಗೆ ಮುಂದುವರೆಯಬೇಕು. ಇರುವ ನ್ಯೂನತೆಗಳನ್ನು ಸರಿಪಡಿಸಬೇಕೆಂದು ರೈತರೊಂದಿಗೆ ನಡೆಸಿದ ಸಭೆಯಲ್ಲಿ ಕೆಲವು ರೈತರು ವಾರಕ್ಕೆ ಮೂರು ದಿನ ಟೆಂಡರ್ ನಡೆಸಲು ಸಲಹೆ ನೀಡಿದ್ದು, ಅದನ್ನು ಪರಿಶೀಲಿಸಲಾಗುವುದು. 15ರಿಂದ 20 ಸಾವಿರ ಚೀಲ ಕೊಬ್ಬರಿ ಮಾರುಕಟ್ಟೆಗೆ ಬರುತ್ತಿದ್ದು ಅದನ್ನು ರವಾನೆ ಮಾಡಲು ಕೂಡ ಸಮಯ ಬೇಕಾಗುತ್ತದೆ. ವರ್ತಕರು ಎರಡೇ ದಿನ ಸಾಕು ಎನ್ನುತ್ತಿದ್ದಾರೆ. ಹಾಗಾಗಿ ಸರ್ಕಾರದ ಮಟ್ಟದಲ್ಲಿ ಮತ್ತೊಮ್ಮೆ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುವುದು. ಟೆಂಡರ್ ದಿನ ಬದಲಾವಣೆ: ಸದ್ಯಕ್ಕೆ ವಾರದಲ್ಲಿ ಎರಡು ದಿನ ಮಾತ್ರ ಟೆಂಡರ್ ನಡೆಯುತ್ತದೆ. ಹಾಲಿ ಟೆಂಡರ್ ಪ್ರಕ್ರಿಯೆ ಶನಿವಾರ ಹಾಗೂ ಬುಧವಾರ ಎರಡು ದಿನಗಳು ಮಾತ್ರ ಇದ್ದು, ತಿಂಗಳ ಎರಡು ಶನಿವಾರಗಳು ಬ್ಯಾಂಕಿಗೆ ರಜೆ ಇರುವ ಕಾರಣ, ಇದನ್ನು ಬದಲಾಯಿಸಿ ವಾರದ ಸೋಮವಾರ ಹಾಗೂ ಗುರುವಾರ ಟೆಂಡರ್ ನಡೆಸಲು ತೀರ್ಮಾನಿಸಲಾಗಿದ್ದು ಇದರಿಂದ ರೈತರಿಗೆ ಹಾಗೂ ವರ್ತಕರಿಗೆ ಹೆಚ್ಚು ಅನುಕೂಲವಾಗಲಿದ್ದು ಇದರ ಸದುಪಯೋಗವನ್ನು ಇಬ್ಬರು ಪಡೆದುಕೊಳ್ಳಬೇಕು ಎಂದು ಶಾಸಕರು ಸ್ಪಷ್ಟಪಡಿಸಿದರು. ಕೇಂದ್ರ ಸಚಿವ ಸೋಮಣ್ಣಗೆ ಅಭಿನಂದನೆ: ಇತ್ತೀಚೆಗೆ ದೆಹಲಿಗೆ ತೆರಳಿದ್ದಾಗ ತಾಲೂಕಿನ ಹಲವಾರು ಬೇಡಿಕೆಗಳ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣನವರೊಂದಿಗೆ ಚರ್ಚಿಸಿ ಬೇಡಿಕೆ ಸಲ್ಲಿಸಿದ್ದೆ. ಅದರಲ್ಲಿ ಜನಶತಾಬ್ದಿ ರೈಲನ್ನು ತಿಪಟೂರಿನಲ್ಲಿ ನಿಲುಗಡೆ ಮಾಡುವುದೂ ಸೇರಿತ್ತು. ಅದಕ್ಕೆ ಅವರು ಕೂಡಲೇ ಸ್ಪಂದಿಸಿ ಆದೇಶ ಹೊಡಿಸಿದ್ದಾರೆ. ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಸದ್ಯದಲ್ಲಿಯೇ ಕೇಂದ್ರ ಸರ್ಕಾರದ ವತಿಯಿಂದಲೇ ಜನಶತಾಬ್ದಿ ರೈಲು ನಿಲುಗಡೆ ಸಮಾರಂಭ ಏರ್ಪಡಿಸಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು. ನ.1ರಿಂದ ಎಪಿಎಂಸಿಯಲ್ಲಿ ಜಾರಿಯಾಗುವ ನಿಯಮಗಳೇನು?1.ಕೊಬ್ಬರಿ ಆನ್‌ಲೈನ್ ಹರಾಜು ವಾರಕ್ಕೆ ಎರಡು ದಿನ ಸೋಮವಾರ ಮತ್ತು ಗುರುವಾರ ನಡೆಯಲಿದೆ.2.ರೈತರು ತರುವ ಎಲ್ಲ ಕೊಬ್ಬರಿಯೂ ಎಪಿಎಂಸಿ ಪ್ರವೇಶದ ಗೇಟ್ ಬಳಿ ನಮೂದು ಕಡ್ಡಾಯ3.ಹರಾಜು ಸಮಯ ಮಧ್ಯಾಹ್ನ 2 ಗಂಟೆ ಬದಲಿಗೆ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.4.ಆಯಾ ಅಂಗಡಿಯ ಗರಿಷ್ಠ ಹರಾಜು ಬೆಲೆಯನ್ನು ಆಯಾ ಅಂಗಡಿಯವರೇ ರೈತರಿಗೆ ನೀಡಬೇಕು.5.ದಲ್ಲಾಲರು ತಮ್ಮ ಅಂಗಡಿಗಳಲ್ಲಿ ಘೋಷಣೆಯಾಗುವ ಅತಿ ಹೆಚ್ಚಿನ ಟೆಂಡರ್ ಧಾರಣೆಯನ್ನು ರೈತರಿಗೆ ಪಾವತಿಸಬೇಕು.6.ಡಿಮ್ಯಾಂಡ್‌ಗೆ ತಕ್ಕ ಹಾಗೆ ಟೆಂಡರ್ ಹಾಕಬೇಕು. ರವಾನೆದಾರರು ಬೇಕಾಬಿಟ್ಟಿ ಸುಮ್ಮನೇ ಟೆಂಡರ್ ಹಾಕಿದರೆ ಕ್ರಮ ಕೈಗೊಳ್ಳಲಾಗುವುದು.7.ಟೆಂಡರ್ ಬಿಟ್ಟು ಖಾಸಗಿಯಾಗಿ ಯಾರೂ ವ್ಯಾಪಾರ ಮಾಡುವಂತಿಲ್ಲ.8.ರೈತರು ತರುವ ಕೊಬ್ಬರಿಯನ್ನು 3 ಟೆಂಡರ್‌ಗಳ ಅವಧಿಗೆ ಮಾತ್ರ ವರ್ತಕರು ಇಟ್ಟುಕೊಳ್ಳಬೇಕು. ಮುಂದುವರೆದು ಇಟ್ಟುಕೊಂಡರೆ ಅಂತಹ ದಲ್ಲಾಲರ ಮೇಲೆ ಕ್ರಮ ವಹಿಸಲಾಗುವುದು.