ಸಾರಾಂಶ
ಹಳ್ಳಿಗಳಲ್ಲಿ ಜಾತಿ, ಪಾಳೇಗಾರಿಕೆ ಬಿಟ್ಟರೆ ಮೌಲ್ಯಗಳಿಗೆ ಕೊರತೆ ಇಲ್ಲ । ಸಂಗೀತ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನಹಳ್ಳಿಗಳಲ್ಲಿ ಜಾತಿ ಎನ್ನುವ ಶನಿ ಮತ್ತು ಪಾಳೇಗಾರಿಕೆ ಬಿಟ್ಟರೆ ಮೌಲ್ಯಗಳಿಗೆ ಯಾವ ಕೊರತೆ ಇಲ್ಲ. ರಾಜಕೀಯ ಬದಲಾವಣೆ ಕೂಡ ಆಗಬೇಕಾದರೆ ಅದು ಗ್ರಾಮೀಣ ಜನರಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಪ್ರೊ. ಹಿ.ಶಿ.ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡ ಜಾನಪದ ಗೀತಗಾಯನ ಮತ್ತು ಸಂಗೀತ ಸಂಭ್ರಮವನ್ನು ತಂಬೂರಿ ನುಡಿಸಿ, ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.‘ಮಾರುಕಟ್ಟೆ ಎಂದರೆ ಕೊಡುವುದು, ಕೊಳ್ಳುವುದು ಇರುತ್ತದೆ. ನೈತಿಕತೆ ಎನ್ನುವುದು ಹೊರಟು ಹೋಗುತ್ತದೆ. ಯಾರು ಮಾರುತ್ತಾರೆ, ಯಾರು ಕೊಂಡುಕೊಳ್ಳುತ್ತಾರೆ ಎಂಬುದನ್ನು ಹೇಳುವುದಕ್ಕಾಗುವುದಿಲ್ಲ. ಅನೇಕ ಶ್ರೀಮಂತರು ಕೊಂಡುಕೊಳ್ಳುತ್ತಿದ್ದಾರೆ. ಇಂದು ಬೆಂಗಳೂರೇ ಒಂದು ಗ್ಯಾರೇಜ್ ಆಗುತ್ತಿದೆ. ಈ ಸಂದರ್ಭದಲ್ಲಿ ನಾವು ಹಳ್ಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಮಾರುಕಟ್ಟೆ ಸಂಸ್ಕೃತಿಯಲ್ಲಿ ಯಾವ ಮೌಲ್ಯ ಇರುವುದಿಲ್ಲ. ಬರೀ ಸುಳ್ಳು, ದರೋಡೆ, ವಂಚನೆ ಇರುತ್ತವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸ್ವಂತದ ಕಡೆ ಹೋಗಲು ನಾವು ಜನಪದ ಕಡೆ ಹೋಗಬೇಕಾಗಿದೆ. ಹಳ್ಳಿಗಳಲ್ಲಿ ನಾನಾ ಬದಲಾವಣೆಗಳಾಗಿದೆ. ಜಾತಿ ಎನ್ನುವ ಶನಿ ಹಾಗೂ ಪಾಳೇಗಾರಿಕೆ ಬಿಟ್ಟರೆ ಹಳ್ಳಿಗಳಲ್ಲಿ ಮೌಲ್ಯಗಳು ಇವೆ. ದೂರ ಇದ್ದವರು ಹತ್ತಿರ ಆಗುವರು, ಹತ್ತಿರ ಇದ್ದವರು ದೂರ ಆಗುತ್ತಿದ್ದ ಮೌಲ್ಯಗಳ ಕಾಣಬಹುದು. ಶಾಂತಿ ಮತ್ತು ನೆಮ್ಮದಿ ಎನ್ನುವುದು ಇದೆ. ಬದುಕಿಗೆ ಒಂದು ಗಟ್ಟಿತನ ಎಂಬುದು ಇದೆ. ಮೌಲ್ಯ, ನೆಮ್ಮದಿ ಉಳಿಯಬೇಕು ಎಂದರೆ ನಾವು ಗ್ರಾಮಗಳ ಕಡೆ ಪ್ರಯಾಣ ಬೆಳೆಸಬೇಕು’ ಎಂದು ಸಲಹೆ ನೀಡಿದರು.ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಅದ್ಭುತವಾದ ಜಾನಪದ ಕಲಾವಿದರು ಈ ಹಾಸನ ಜಿಲ್ಲೆಯಲ್ಲಿ ಇದ್ದಾರೆ. ಹಲವಾರು ಜಾನಪದ ಕಲೆ ಇಲ್ಲಿವೆ. ಬಯಲಾಟ ಇತ್ತು ಈಗ ಸಂಪೂರ್ಣವಾಗಿ ನಶಿಸಿ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಪುರಸ್ಕೃತ ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಡಾ. ಚಂದ್ರು ಕಾಳೇನಹಳ್ಳಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದ ವರಪ್ರಸಾದ್ ರನ್ನು ಸನ್ಮಾನಿಸಿದರು. ನಂತರ ಜಾನಪದ ಗೀತಗಾಯನ ಹಾಗೂ ಸಂಗೀತ ಸಂಭ್ರಮದಲ್ಲಿ ಹಿರಿಯ ಕಲಾವಿದರು ಹಿಂದಿನ ಗ್ರಾಮೀಣ ಕಲೆಯನ್ನು ಮತ್ತೆ ಮರುಕಳಿಸಿದರು.ಕರ್ನಾಟಕ ಜಾನಪದ ಪರಿಷತ್ತು ಕಾರ್ಯಾಧ್ಯಕ್ಷ ಬೆಂಗಳೂರಿನ ಪ್ರೊ.ಹಿ.ಚಿ.ಬೋರಲಿಂಗಯ್ಯ, ಸಾಹಿತಿ ಮೇಟಿಕೆರೆ ಹಿರಿಯಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ, ಜಾನಪದ ಪರಿಷತ್ತು ಕಾರ್ಯದರ್ಶಿ ಬಿ.ಟಿ.ಮಾನವ, ಜಿ.ಓ.ಮಹಾಂತಪ್ಪ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಇದ್ದರು.