ಸಾರಾಂಶ
ಧಾರವಾಡ:
ಪ್ರೀತಿಗೆ ಜಾತಿ ಮೀರುವ ಧೈರ್ಯವಿರುವ ಹಿನ್ನೆಲೆಯಲ್ಲಿ ಆಧುನಿಕ ದಿನಗಳಲ್ಲಿ ಅಂತರ್ಜಾತಿ ವಿವಾಹಗಳಿಂದ ಮಾತ್ರವೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಕವಯಿತ್ರಿ ಸವಿತಾ ನಾಗಭೂಷಣ್ ಅಭಿಪ್ರಾಯಪಟ್ಟರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಭಾರತೀಯ ಬೌದ್ಧ ಮಹಾಸಭಾ ಆಶ್ರಯದಲ್ಲಿ ಇಲ್ಲಿಯ ರಂಗಾಯಣದಲ್ಲಿ ನಡೆದ ಮೂರು ದಿನಗಳ ಕನ್ನಡ ವಿಚಾರ ಸಾಹಿತ್ಯ ದರ್ಶನ ಕಮ್ಮಟದಲ್ಲಿ ಶನಿವಾರ ಸಮಾರೋಪ ಭಾಷಣ ಮಾಡಿದರು. ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲು ಹಿಂದೂಗಳು ಮನಸ್ಸು ಮಾಡಬೇಕು ಎಂದ ಅವರು, ಕನಿಷ್ಠ ಇನ್ನೊಬ್ಬರ ಮನಪರಿವರ್ತನೆ ಅಥವಾ ನೋವು ಉಂಟಾಗದಂತೆ, ಕೆರಳಿಸದಂತ ಭಾಷೆ ಬಳಸಬೇಕು ಎಂದರು.
ಅಸ್ಪೃಶ್ಯತೆ ಹೆಚ್ಚು ಆಚರಿಸುವವರು ಹೆಣ್ಣು ಮಕ್ಕಳು. ಹೀಗಾಗಿ ಈ ಅಸ್ಪೃಶ್ಯತೆ ನಿವಾರಣೆ ಕಾರ್ಯ ಮೊದಲು ಅಡುಗೆ ಮನೆಯಿಂದ ಪ್ರಾರಂಭವಾಗಬೇಕಿದೆ. ಅಲ್ಲದೇ, ನಾಡಿನ ಮಹಿಳೆಯರು ಹೆಚ್ಚೆಚ್ಚು ಸುಶಿಕ್ಷಿತರಾಗಬೇಕು ಎಂದು ಕರೆ ನೀಡಿದರು.ಶಿಬಿರದ ನಿರ್ದೇಶಕ ಡಾ. ಅಪ್ಪಗೆರೆ ಸೋಮಶೇಖರ, ಭಾರತ ಹಿಮ್ಮುಖವಾಗಿ ಚಲಿಸುತ್ತಿದೆ. ಹೀಗಾಗಿ ನಾಡಿನ ಯುವ ಜನಾಂಗ ಎಚ್ಚೆತ್ತು ಪ್ರಬುದ್ಧ ಭಾರತ ಕಟ್ಟಲು ನಮ್ಮ ಸಮಾಜ ಸುಧಾರಕರ ವಾರಸುದಾರರಾಗಬೇಕು ಎಂದು ಕರೆ ನೀಡಿದರು. ಮನುವಾದ, ಜಾತಿವಾದ ಹಾಗೂ ಕೋಮುವಾದ ವಿಷಬೀಜಗಳಿಗೆ ವೈಚಾರಿಕ ಕಮ್ಮಟಗಳು ದಿವ್ಯ ಔಷಧಿ. ಮಹಾತ್ಮರ ಆಶಯಗಳ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಹೊಣೆಗಾರಿಕೆ ಕೂಡ ಹೆಚ್ಚಿದೆ ಎಂದು ಮನವರಿಕೆ ಮಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಸದ್ಯ ರಾಜ್ಯದಲ್ಲಿ ಮನುವಾದ, ಕೋಮುವಾದ ಹಾಗೂ ಜಾತಿವಾದ ವಿರುದ್ಧ ಮಾತನಾಡುವ ಲೇಖಕರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತಿ ಷಡ್ಯಂತ್ರ ನಡೆದಿದ್ದಾಗಿ ತಿಳಿಸಿದರು. ಇದಲ್ಲದೇ, ಸಾಹಿತ್ಯ ಅಕಾಡೆಮಿ ದುರ್ಬಲಗೊಳಿಸುವ ಕೆಲಸವೂ ನಡೆಯಿತು. ಆದರೆ, ಸಿದ್ದರಾಮಯ್ಯ ಸರ್ಕಾರ ಅಕಾಡೆಮಿ ಪುನಶ್ಚೇತನಗೊಳಿಸುವ ಕೆಲಸ ಮಾಡಿದೆ. ಬರುವ ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡಲು ಕೋರುವುದಾಗಿ ತಿಳಿಸಿದರು.ಬೌದ್ಧ ಮಹಾಸಭಾ ಅಧ್ಯಕ್ಷ ದರ್ಶನ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಅರ್ಜುನ ಗೊಳಸಂಗಿ, ಬೌದ್ಧ ಸಾಹಿತಿ ಬಿ.ಆರ್. ಕೃಷ್ಣಯ್ಯ, ಸಿದ್ದರಾಮ ಹಿಪ್ಪರಗಿ, ಲಕ್ಷ್ಮಣ ಬಕ್ಕಾಯಿ, ಗಿರೀಶ ಕಾಂಬಳೆ ಇದ್ದರು. ಅಕ್ಕಮಹಾದೇವಿ ನಿರೂಪಿಸಿದರು.