ಸಾರಾಂಶ
ತೀರ್ಥಕುಮಾರಿ ವೆಂಕಟೇಶ್ । ಶಾಲಾ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಣೆಕನ್ನಡಪ್ರಭ ವಾರ್ತೆ ಬೇಲೂರು
ಮಕ್ಕಳಿಗೆ ಒಳ್ಳೆಯ ಭವಿಷ್ಯ ಕೊಟ್ಟರೆ ಮುಂದೆ ಭಾರತದ ಭವಿಷ್ಯ ಬದಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.ಕರ್ನಾಟಕ ಸರ್ಕಾರದ ನೂತನ ಕಾರ್ಯಕಮ ಶಾಲಾ ಶಿಕ್ಷಣ ಇಲಾಖೆ, ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ.ಎಂ.ಎಫ್ ಸಂಸ್ಥೆ ಸಹಭಾಗಿತ್ವದಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಿಸುವ ತಾಲೂಕು ಹಂತದ ನೂತನ ಕಾರ್ಯಕ್ರಮವನ್ನು ಪಟ್ಟಣದ ಬಿಆರ್‌ಸಿ ಕಚೇರಿ ಮುಂಭಾಗದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಒಳ್ಳೆಯ ಭವಿಷ್ಯ ಕೊಟ್ಟರೆ ಮುಂದೆ ಭಾರತದ ಭವಿಷ್ಯ ಬದಲಾಗುತ್ತದೆ ಎಂದು ಮನಗಂಡು ಸರ್ಕಾರ ವಿದ್ಯಾರ್ಥಿಗಳ ಆರೋಗ್ಯಕ್ಕೆ ಅನುಗುಣವಾಗಿ ದೈಹಿಕ ಸಾಮರ್ಥ್ಯಕ್ಕೆ ವಿಶೇಷ ಆಹಾರಗಳನ್ನು ನೀಡುತ್ತ ಬಂದಿದೆ. ಅದರಂತೆ ಪ್ರತೀ ವಾರ ಮೂರು ದಿನಗಳಿಗೆ ಒಮ್ಮೆ ರಾಗಿ ಮಾಲ್ಟ್ ಕೊಡುವ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಮೊದಲು ಬಂದಾಗ ಚಿಕ್ಕಿ ಹಾಗೂ ಬಾಳೆಹಣ್ಣು ಕೊಡುವ ವ್ಯವಸ್ಥೆ ಮಾಡಿತ್ತು. ಈಗ ಮಕ್ಕಳಿಗೆ ಅತ್ಯಂತ ಪೋಷಕಾಂಶವುಳ್ಳ ರಾಗಿ ಮಾಲ್ಟ್ ನೀಡುತ್ತಿದೆ. ಹದಿಹರೆಯದ ಮಕ್ಕಳಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶದ ಕೊರತೆ ಕಾಣುತ್ತಿದೆ. ಅದಕ್ಕಾಗಿ ರಾಗಿಯ ಉತ್ಪನ್ನ ಬಳಸಬೇಕು ಹಾಗೂ ಹಾಲಿನ ಉತ್ಪನ್ನಗಳನ್ನು ಮಕ್ಕಳು ಬಳಸಬೇಕು. ಜಂಕ್ ಪುಡ್‌ಗಳನ್ನು ತಿನ್ನುವುದರಿಂದ ಆರೋಗ್ಯದ ಸಮಸ್ಯೆ ಕಾಡುತ್ತದೆ. ಅವುಗಳನ್ನು ತ್ಯಜಿಸಿ ನಮ್ಮ ದೇಹಕ್ಕೆ ಉಪಯುಕ್ತವಾದ ಆಹಾರವನ್ನು ಮಾತ್ರ ಸೇವಿಸಿದಲ್ಲಿ ಮಾತ್ರ ಮಕ್ಕಳ ಬೆಳವಣಿಗೆ ಸಾಧ್ಯ. ಸರ್ಕಾರ ನೀಡುವ ಹತ್ತು ಹಲವು ಯೋಜನೆಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್ ಮಾತನಾಡಿ, ಶಾಲೆಯ ೧ ರಿಂದ ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಈಗಾಗಲೇ ವಾರದಲ್ಲಿ 5 ದಿನ ನೀಡುತ್ತಿರುವ ಹಾಲು ಮತ್ತು ವಾರದಲ್ಲಿ ಎರಡು ದಿನ ಮೊಟ್ಟೆ ಸೇರಿದಂತೆ ಇನ್ನು ಮುಂದೆ ವಾರಲ್ಲಿ 3 ದಿನ ರಾಗಿಮಾಲ್ಟ್ ಕೂಡ ನೀಡಲಾಗುವುದು. ರಾಗಿಮಾಲ್ಟ್ ಸ್ವಾದಿಷ್ಠವಾಗಿರುವ ಜತೆಗೆ ಮಕ್ಕಳನ್ನು ದೈಹಿಕವಾಗಿ ಸದೃಢವಾಗಿಸಲಿದೆ ಎಂದು ಹೇಳಿದರು.
ಶಾಲಾ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಹಾಗೂ ಮಕ್ಕಳ ಆರೋಗ್ಯ ಮೇಲೆ ಗಮನವಿಟ್ಟು ರಾಜ್ಯ ಸರ್ಕಾರ ಶಾಲಾ ಮಕ್ಕಳಿಗಾಗಿಯೇ ಹೊಸ ಯೋಜನೆಯೊಂದನ್ನು ಜಾರಿ ಮಾಡುತ್ತಿದ್ದು ತಾಲೂಕಿನಾದ್ಯಂತ ಇದನ್ನು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಉಷಾ ಸತೀಶ್, ಬಿಆರ್‌ಸಿ ಶಿವಮರಿಯಪ್ಪ, ಅಕ್ಷರ ದಾಸೋಹ ನಿರ್ದೇಶಕ ಜಗದೀಶ್ ನಾಯಕ್, ಶಿಕ್ಷಣ ಸಂಯೋಜಕ ಶಿವಪ್ಪ, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷ, ದೈಹಿಕ ಶಿಕ್ಷಣ ಅಧೀಕ್ಷಕ ಪಾಲಾಕ್ಷ, ಎಸ್‌ಡಿಎಂಸಿ ಅಧ್ಯಕ್ಷ ಪ್ರಸನ್ನ ಹಾಗೂ ನವೀನ್ ಸೇರಿದಂತೆ ಇತರರು ಹಾಜರಿದ್ದರು.ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಿಸುವ ನೂತನ ಕಾರ್ಯಕ್ರಮವನ್ನು ಬೇಲೂರು ಪಟ್ಟಣದ ಬಿಆರ್‌ಸಿ ಕಚೇರಿ ಮುಂಭಾಗದಲ್ಲಿ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಉದ್ಘಾಟಿಸಿದರು.