ರಾಷ್ಟ್ರೀಯ ಏಕತೆ, ಸಾಮರಸ್ಯ ಹಾಗೂ ಭದ್ರತೆಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಎಸ್‌ಕೆಎಸ್‌ಎಸ್‌ಎಫ್ (ಸಮಸ್ತ ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್) ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡ ನಯೀಮ್ ಫೈಝಿ ಅಲ್ ಮಬರಿ ಹೇಳಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ಈ ಸಂವಿಧಾನ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವಾಗಿದ್ದು, ಸಮಾನತೆ, ಸಹೋದರತ್ವ, ಧರ್ಮನಿರಪೇಕ್ಷತೆ ಹಾಗೂ ಸಾಮಾಜಿಕ ನ್ಯಾಯವನ್ನು ಒತ್ತಿಹೇಳುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ರಾಷ್ಟ್ರೀಯ ಏಕತೆ, ಸಾಮರಸ್ಯ ಹಾಗೂ ಭದ್ರತೆಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಎಸ್‌ಕೆಎಸ್‌ಎಸ್‌ಎಫ್ (ಸಮಸ್ತ ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್) ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡ ನಯೀಮ್ ಫೈಝಿ ಅಲ್ ಮಬರಿ ಹೇಳಿದರು.ಪಟ್ಟಣದ ಪುರಭವನದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಂವಿಧಾನವು ದೇಶದ ಭೌಗೋಳಿಕ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಲ್ಲದೆ, ದೇಶವು ಹೇಗೆ ಮುನ್ನಡೆಯಬೇಕು ಎಂಬ ದಿಕ್ಕು ನೀಡುವ ಶ್ರೇಷ್ಠ ದಾಖಲೆ ಎಂದು ಹೇಳಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ಈ ಸಂವಿಧಾನ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವಾಗಿದ್ದು, ಸಮಾನತೆ, ಸಹೋದರತ್ವ, ಧರ್ಮನಿರಪೇಕ್ಷತೆ ಹಾಗೂ ಸಾಮಾಜಿಕ ನ್ಯಾಯವನ್ನು ಒತ್ತಿಹೇಳುತ್ತದೆ ಎಂದರು.ಭಾರತವು “ವೈವಿಧ್ಯತೆಯಲ್ಲಿ ಏಕತೆ” ಎಂಬ ಸಂದೇಶವನ್ನು ಜಗತ್ತಿಗೆ ನೀಡಿದ ರಾಷ್ಟ್ರವಾಗಿದೆ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಆಹಾರ ಪದ್ಧತಿ ಹಾಗೂ ಆಚಾರ-ವಿಚಾರಗಳ ವೈವಿಧ್ಯತೆ ಭಾರತದಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮ, ಭಾಷೆ ಹಾಗೂ ವೇಷಭೂಷಣಗಳ ಹೆಸರಿನಲ್ಲಿ ನಡೆಯುತ್ತಿರುವ ಅಸಹಿಷ್ಣು ಘಟನೆಗಳು ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸಂವಿಧಾನ ಉಳಿದರೆ ಮಾತ್ರ ಭಾರತ ಉಳಿಯುತ್ತದೆ; ಅದಕ್ಕಾಗಿ ಸಂವಿಧಾನದ ಮೂಲಭೂತ ಮೌಲ್ಯಗಳಾದ ಧರ್ಮನಿರಪೇಕ್ಷತೆ ಮತ್ತು ಸಹೋದರತ್ವವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಆನೆಮಹಲ್ ಮೊಹಿದ್ದೀನ್ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ, ಎಸ್‌ಕೆಎಸ್‌ಎಸ್‌ಎಫ್ ಒಂದು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಸಂಘಟನೆಯಾಗಿದ್ದು, ವಿಜ್ಞಾನ, ವಿನಯ ಹಾಗೂ ಸೇವೆ ಎಂಬ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದೆ ಎಂದರು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ದೇಶಕ್ಕೆ ಸ್ವಾತಂತ್ರ್ಯ ತಂದರೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಬದುಕಿಗೆ ಸಂವಿಧಾನವನ್ನು ನೀಡಿದರು. ಆ ಸಂವಿಧಾನವನ್ನು ಕಾಪಾಡುವ ಹೊಣೆ ಪ್ರತಿಯೊಬ್ಬ ನಾಗರಿಕರದ್ದೇ ಆಗಿದೆ ಎಂದು ಹೇಳಿದರು.ಮಾನವ ಸರಪಳಿ ನಿರ್ಮಿಸಿ, ಪರಸ್ಪರ ಕೈ ಹಿಡಿದು ದೇಶದ ಐಕ್ಯತೆ ಮತ್ತು ಏಕತೆಯನ್ನು ಕಾಪಾಡುವ ಪ್ರತಿಜ್ಞೆಯನ್ನುಮಾಡಿದರು. ಈ ಸಂದರ್ಭದಲ್ಲಿ ಗುಲಗಳಲೆ ಮೊಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಖಾಸಿಂ ಜಿ.ಎಂ, ಆನೆಮಹಲ್ ಮಸೀದಿಯ ಖತೀಬ್ ಮೊಯಿದು ಪೈಝಿ, ಅಬೂಬಕ್ಕರ್ ಸುಂಡೆಕೆರೆ, ಷರೀಫ್ ಅರ್ಷದಿ, ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಸವಾದ್, ಸುಂಡೆಕೆರೆ ನಿಸಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.