ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ ಅವರು ಜಾತಿ ವ್ಯವಸ್ಥೆಯನ್ನು ಹೊಗಲಾಡಿಸಲು ಕನಸು ಕಂಡು ಸಮಸಮಾಜ ನಿರ್ಮಾಣಕ್ಕೆ ಹಲವು ನೋವುಗಳನ್ನು ಅನುಭವಿಸಿದ ಮಹಾನ ಚಿಂತಕರು ಎಂದು ಬಾಲ ವಿಕಾಸ ಅಕ್ಯಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ನಗರದ ಬಂಜಾರ ವೃತ್ತದ ಬಳಿಯ ಡಾ.ಬಾಬು ಜಗಜೀವನ ರಾಮ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಡಾ.ಜಗಜೀವನ ರಾಮ್ ಅವರ ೧೧೮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಬಾಬಾಸಾಹೇಬ ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನ ರಾಮ ಶೋಷಿತ ವರ್ಗ, ಹಿಂದುಳಿದ ವರ್ಗಗಳ ಬದುಕು ಹಸನಾಗಿಸಿ, ಸಮ ಸಮಾಜವನ್ನು ನಿರ್ಮಿಸಲು ಕಂಡ ಕನಸನ್ನು ನನಸಾಗಿಸಲು, ನಮ್ಮ ಮನಸ್ಥಿಗಳನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ. ಅಂದಾಗ ಸಮಾಜದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಹಿಂದುಳಿದ ವರ್ಗಗಳ ಸಮಸ್ಯೆಗಳ, ಅನ್ಯಾಯಗಳ ವಿರುದ್ಧ ಹಾಗೂ ಸಮ ಸಮಾಜಕ್ಕಾಗಿ ಹೋರಾಡಿದ ಡಾ.ಬಾಬಾಸಾಹೇಬ ಅಂಬೇಡ್ಕರ ಹಾಗೂ ಜಗಜೀವನ ರಾಮ ಅವರು ದೇಶದ ಎರಡು ಕಣ್ಣುಗಳಿದ್ದಂತೆ. ನಾವೆಲ್ಲರೂ ಒಂದೇ ಎಂಬ ವಿಚಾರಗಳನ್ನು ಮಂಡಿಸುತ್ತಿದ್ದರು. ಜಗಜೀವನ ರಾಮ ಅವರು ಉಪ ಪ್ರಧಾನಿಯಾಗಿದ್ದಾಗ ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದಾರೆ. ರಕ್ಷಣಾ ಮಂತ್ರಿಗಳಾಗಿ ದೇಶದ ರಕ್ಷಣೆಗೆ ಮಹತ್ವದ ಕಾಯಿದೆಗಳನ್ನು ಜಾರಿಗೆ ತಂದರು. ಕೃಷಿ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದು ಆಹಾರ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಮಾಡುವಂತೆ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಿ, ದೇಶದ ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬಿ ಹಸಿರು ಕ್ರಾಂತಿಯ ಯಶಸ್ವಿ ಕಾರಣೀಭೂತರಾದ ಮಹಾನ ವ್ಯಕ್ತಿಗಳಾಗಿದರು. ಇವರ ಚಿಂತನೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಡಾ.ಬಾಬು ಜಗಜೀವನರಾಮ ಅವರು ಮಹಾತ್ಮ ಗಾಂಧೀಜಿಯವರೊಂದಿಗೆ ಸ್ವಾತಂತ್ರದ ಹೋರಾಟದಲ್ಲಿ ಭಾಗವಹಿಸಿದ್ದರು. ದೇಶದ ಪ್ರಥಮ ಉಪ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದವರು. ಕಾರ್ಮಿಕ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿ ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಮಾಡಿದರು. ದಲಿತ ಹಾಗೂ ಬಡವರಿಗಾಗಿ ಆರ್ಥಿಕವಾಗಿ ಬದಲಾವಣೆ ತಂದರು. ಅವರು ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಎಸ್ಪಿ ಲಕ್ಷಣ ನಿಂಬರಗಿ ಮಾತನಾಡಿ, ಡಾ.ಬಾಬು ಜಗಜೀವನರಾಮ ಅವರು ಜಾತಿ ವ್ಯವಸ್ಥೆಗಳಲ್ಲಿರುವ ನೋವು ನಲಿವುಗಳನ್ನು ಅರಿತು ಸಾಕಷ್ಟು ಸುಧಾರಣೆ ಮಾಡಿದರು. ಕ್ವಿಟ್ ಇಂಡಿಯಾಗಳಂತಹ ಚಳುವಳಿಗಳಲ್ಲಿ ಭಾಗವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಯದ ನಿರ್ದೇಶಕಿ ಪ್ರೋ.ಲಕ್ಷ್ಮೀದೇವಿ.ವೈ ಉಪನ್ಯಾಸ ನೀಡಿದರು. ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ, ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಸತಿ ನಿಲಯದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂವಿಧಾನದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ನಗರದ ಸೆಟ್‌ಲೈಟ್ ಬಸ್ ನಿಲ್ಧಾಣ ಬಳಿ ಡಾ.ಬಾಬು ಜಗಜೀವನ ರಾಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.