ಸಾರಾಂಶ
ರೈತರು ನೆಮ್ಮದಿಯಿಂದ ಇದ್ದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಬಹುದು. ಯಂತ್ರಗಳಿಂದ ಅನ್ನವನ್ನು ಉತ್ಪಾದಿಸಲಾಗದು.
ಯಲ್ಲಾಪುರ: ಇತ್ತೀಚೆಗೆ ಕೃಷಿ ಕ್ಷೇತ್ರವು ಹಾನಿದಾಯಕ ಎನ್ನುವ ಆತಂಕದಲ್ಲಿ ಇದ್ದೇವೆ. ಆಧುನಿಕತೆಯ ಸಂದರ್ಭದಲ್ಲಿ ಸಂಪನ್ಮೂಲ ಬಳಸಿಕೊಂಡು
ನಮ್ಮಲ್ಲಿರುವ ಕೃಷಿ ಕ್ಷೇತ್ರವು ಲಾಭದಾಯಕವಾಗಿ ಮಾಡುವಲ್ಲಿ ಮಹತ್ವದ ಹೆಜ್ಜೆ ಇಡಬೇಕು ಎಂದು ಪಂಚಾಯತ್ ರಾಜ್ ವಿಕೇಂದ್ರೀಕರಣ ವ್ಯವಸ್ಥೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.ತಾಲೂಕಿನ ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯ ಹೊನ್ನಗದ್ದೆ ಯ ವೀರಭದ್ರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶ್ರೀದೇವಿ ರೈತ ಉತ್ಪಾದಕ ಕಂಪನಿ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಯಲ್ಲಾಪುರದ ತೋಟಗಾರಿಕೆ ಇಲಾಖೆ ಸ್ಕೊಡ್‌ವೆಸ್ ಸಂಸ್ಥೆ ಶಿರಸಿ ಇವರ ಸಹಯೋಗದಲ್ಲಿ ರೈತೋತ್ಸವ, ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ನೆಮ್ಮದಿಯಿಂದ ಇದ್ದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಬಹುದು. ಯಂತ್ರಗಳಿಂದ ಅನ್ನವನ್ನು ಉತ್ಪಾದಿಸಲಾಗದು. ಅನ್ನ ಬೆಳೆಯುವ ರೈತ ಮಣ್ಣಿನ ಕಣ ಕಣದಲ್ಲೂ ಬೆವರು ಹರಿಸಿದಾಗ ಕಾರ್ಪೊರೇಟ್ ಜಗತ್ತು ಉಣ್ಣಲು ಸಾಧ್ಯ. ಕೃಷಿ ರೈತರ ಮನೆಗಳ ಹೊಸ ತಲೆಮಾರು ನಗರಮುಖಿಯಾಗುತ್ತಿರುವವರಿಗೆ ತಿಳಿವಳಿಕೆ ನೀಡುವ ಜವಾಬ್ದಾರಿ ಇದೆ. ಜಗತ್ತಿನ ಬದಲಾವಣೆಯನ್ನು ಸ್ವೀಕರಿಸಿ ಸವಾಲುಗಳನ್ನು ಎದುರಿಸಲು ಸಿದ್ಧರಾಗುವ ಜಾಣ್ಮೆ ನಮ್ಮದಾಗಬೇಕು. ಹಸಿರು ಕ್ರಾಂತಿ ನಮ್ಮ ನೆಲದ ರೈತ ಸಂಘಟನೆಗಳಿಂದ ಆರಂಭವಾಗಲಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀದೇವಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸುಬ್ರಹ್ಮಣ್ಯ ಗಾಂವ್ಕರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ, ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ, ಪ್ರಮುಖರಾದ ಡಾ. ವೆಂಕಟೇಶ್ ನಾಯಕ, ಮಾವಿನಮನೆ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಕುಟೇಗಾಳಿ, ಜೈರಾಂ ಹೆಗಡೆ, ಪ್ರಗತಿ ಪರ ಕೃಷಿಕರಾದ ಗುರುಪ್ರಸಾದ್ ಭಟ್ಟ, ಶ್ರೀಕೃಷ್ಣ ಭಟ್ಟ, ವಿಜ್ಞಾನ ಕೇಂದ್ರದ ರೂಪಾ ಎಸ್. ಪಾಟೀಲ, ಯಲ್ಲಾಪುರ ಹಾಗೂ ಶಿರಸಿಯ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕರಾದ ಸತೀಶ ಹೆಗಡೆ ಪತ್ರಕರ್ತೆ ವಿನುತಾ ಹೆಗಡೆ ಕಾನಗೋಡು ಉಪಸ್ಥಿತರಿದ್ದರು. ಉಮೇಶ ಬೀಗಾರ ತಂಡದವರು ಪ್ರಾರ್ಥಿಸಿದರು. ರೈತ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಜಾನನ ಭಟ್ಟ ಸ್ವಾಗತಿಸಿದರು. ಆರ್.ಪಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ಕೃಷಿಯಲ್ಲಿ ರೋಗ ಮತ್ತು ಅಂತರ ಬೆಳೆಗಳ ಕುರಿತು ವಿಚಾರಸಂಕಿರಣ ನಡೆಯಿತು. ಕೃಷಿ ತಜ್ಞರು ಮಾಹಿತಿ ನೀಡಿ ಸಂವಾದದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ನಾಗರಾಜ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡ ರೈತ ಸದಸ್ಯರಿಗೆ ಪರಿಕರ ಹಾಗೂ ರೈತ ಸದಸ್ಯರಿಗೆ ಉಚಿತವಾಗಿ ಕಾಫಿ ಗಿಡಗಳ ವಿತರಿಸಲಾಯಿತು.