ಸದ್ಯ ಸಿಎಂ ಬದಲಾವಣೆ ಅಪ್ರಸ್ತುತ

| Published : Jun 29 2024, 12:32 AM IST

ಸಾರಾಂಶ

ಸದ್ಯ ರಾಜ್ಯದಲ್ಲಿ ಯಾವುದೇ ಸಿಎಂ ಬದಲಾವಣೆಯೂ ಇಲ್ಲ. ಈ ಬಗ್ಗೆ ಯಾವ ಚರ್ಚೆಯೂ ಇಲ್ಲ. ಸಿಎಂ ಬದಲಾವಣೆ ವಿಚಾರವೇ ಈಗ ಅಪ್ರಸ್ತುತ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸದ್ಯ ರಾಜ್ಯದಲ್ಲಿ ಯಾವುದೇ ಸಿಎಂ ಬದಲಾವಣೆಯೂ ಇಲ್ಲ. ಈ ಬಗ್ಗೆ ಯಾವ ಚರ್ಚೆಯೂ ಇಲ್ಲ. ಸಿಎಂ ಬದಲಾವಣೆ ವಿಚಾರವೇ ಈಗ ಅಪ್ರಸ್ತುತ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.ಗರದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಕೆಲವರು ಮಾತನಾಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಉಳಿದವರು ಏನೇ ಹೇಳಬಹುದು ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಹೇಳುತ್ತಿರುವುದು ಕಾಂಗ್ರೆಸ್ ಪಕ್ಷದ ವಿಚಾರ. ಉಳಿದವರು ಅವರ ವೈಯಕ್ತಿಕ ವಿಚಾರ ಹೇಳಿದ್ದಾರೆ. ಸ್ವಾಮೀಜಿ ಮಾತನಾಡಿದ್ದು ಅದು ಅವರ ವೈಯಕ್ತಿಕ ಅಭಿಪ್ರಾಯ. ಬೇರೆಯವರು ಮಾತನಾಡಿದ್ದರೆ ಅದರ ಬಗ್ಗೆ ನಾನು ಏನೂ ಹೇಳೋಕಾಗಲ್ಲ ಎಂದರು.

ಒಪ್ಪಂದವಿಲ್ಲ:

ಎರಡುವರೆ ವರ್ಷಕ್ಕೆ ಒಪ್ಪಂದ ‌ವಿಚಾರ ಎಂಬುವುದಕ್ಕೆ ತಿರುಗೇಟು ನೀಡಿದ ಅವರು, ಇದೆಲ್ಲ ಯಾರು ಹೇಳಿದ್ದು? ಆ ರೀತಿ ಯಾವುದು ಇಲ್ಲ. ಸಾರ್ವಜನಿಕವಾಗಿ ಚರ್ಚೆ ಮಾಡಿದರೆ ನಾವೇನೂ ಮಾಡೋಕಾಗಲ್ಲ. ಇದು ಸಾರ್ವಜನಿಕವಾಗಿ ಚರ್ಚೆ ಆಗೋ ವಿಚಾರವೂ ಅಲ್ಲ. ಸಿದ್ದರಾಮಯ್ಯ ನಮ್ಮ ಸಿಎಂ ಇದ್ದಾರೆ. ಒಳ್ಳೆಯ ಆಡಳಿತಗಾರದ್ದಾರೆ. ಈಗಾಗಲೇ ಒಬ್ಬರು ಸಿಎಂ ಇದ್ದಾಗ ಬದಲಾವಣೆ ಬಗ್ಗೆ ಪ್ರಶ್ನೆಯೇ ಇಲ್ಲ. ಬದಲಾವಣೆ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.

ರಾಜಣ್ಣ ವೈಯಕ್ತಿಕ ಅಭಿಪ್ರಾಯ:

ಹೆಚ್ಚುವರಿ ಡಿಸಿಎಂ ಬೇಡಿಕೆ, ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ವಿಚಾರಗಳಿಗೆ ಉತ್ತರಿಸಿ, ಯಾವುದೇ ಬಣ ರಾಜಕೀಯ ಇಲ್ಲ. ಕೆಲವರು ಅವರವರ ಅಭಿಪ್ರಾಯ ಹೇಳಿದ್ದಾರೆ. ಕೆ.ಎನ್.ರಾಜಣ್ಣ ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯ. ರಾಜಣ್ಣ ಸಿದ್ದರಾಮಯ್ಯ ಅಭಿಮಾನಿ, ಅದಕ್ಕೆ ಹೇಳಿದ್ದಾರೆ, ನಾವೇನು ಮಾಡೋಕಾಗಲ್ಲ. ಸಿಎಂ ಬದಲಾವಣೆ ಯಾಕೇ ಮಾಡಬೇಕು, ಅವರೇನು ಜನಪ್ರಿಯ ನಾಯಕರಲ್ಲವಾ ಎಂದರು.

ನಿರ್ಮಲಾ ಸೀತಾರಾಮ್ ವಿರುದ್ಧ ವಾಗ್ದಾಳಿ:

ನಿರ್ಮಲಾ ಸೀತಾರಾಮನ್ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಜಿಎಸ್‌ಟಿ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನಾವು ಕೇಂದ್ರಕ್ಕೆ ಕೊಟ್ಟಿದ್ದೇವೆ. ಆದ ನಷ್ಟದ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳಿಗೆ ಹಣ ಕೊಡುತ್ತಿಲ್ಲ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯ ಕರ್ನಾಟಕವಾಗಿದೆ. ಅವರು ನಮ್ಮ ರಾಜ್ಯಸಭಾ ಸದಸ್ಯರಾಗಿ ನಮ್ಮ ಸಮಸ್ಯೆಗೆ ಸ್ಪಂದಿಸಬೇಕಿತ್ತು. ನಿರ್ಮಲಾ ಸೀತಾರಾಮನ್ ಅವರ ಅಂಹಕಾರ ಈ ಮೊದಲು ನೋಡಿದ್ದೇವೆ. ಅವರ ಮಾತುಗಳು ಅಹಂಕಾರದ ಪರಮಾವಧಿ. ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದ್ದಾರೆ. ನನ್ನ ಮೀರಿಸೋರು ಯಾರು ಇಲ್ಲ ಎಂದು ತಿಳಿದುಕೊಂಡಿದ್ದಾರೆ. ಈ ಸ್ವಭಾವ ಒಳ್ಳೆಯದಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸದಿಂದ ಕೆಲಸ ಮಾಡಬೇಕು. ನಮ್ಮ ಅನ್ಯಾಯಕ್ಕೆ ಕಿವಿ ಕೊಡದೆ ಇದ್ದಾಗ ಬೀದಿಗೆ ಇಳಿಯಬೇಕಾಯಿತು. ಮೂರು ವರ್ಷದಿಂದ ಕೇಳ್ತಿದ್ದೇವೆ, ಜಿಎಸ್‌ಟಿ ವಿಚಾರ ಬಗೆಹರಿಸಬೇಕು ಎಂದರು.

---

ಬಾಕ್ಸ್

ಜಿಲ್ಲಾಸ್ಪತ್ರೆಗೆ ಭೇಟಿ ಪರಿಶೀಲನೆ

ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ವಾರ್ಡ್ ಗಳಿಗೆ ತೆರಳಿ ವೀಕ್ಷಣೆ ಮಾಡಿ, ರೋಗಿಗಳ ಆರೋಗ್ಯ ವಿಚಾರಿಸಿದರು.

ಅಲ್ಲದೇ ಜಿಲ್ಲಾಸ್ಪತ್ರೆಯಲ್ಲಿನ ಚಿಕಿತ್ಸೆ ಹಾಗೂ ಇತರೆ ಸೌಕರ್ಯಗಳ ಕುರಿತು ರೋಗಿಗಳಿಂದ ಮಾಹಿತಿ ಪಡೆದರು. ಬಳಿಕ ನೂತನವಾಗಿ ನಿರ್ಮಾಣವಾಗಿರುವ ಕಣ್ಣಿನ ಆಸ್ಪತ್ರೆಗೂ ಭೇಟಿ ನೀಡಿದರು. ನಂತರ ಎನ್‌ಸಿಡಿ ಕ್ಲಿನಿಕ್‌ನಲ್ಲಿ ಇಕೋ ಯಂತ್ರ ವೀಕ್ಷಣೆ ಮಾಡಿದರು. ಬಳಿಕ ಜಿಲ್ಲಾಸ್ಪತ್ರೆಯಲ್ಲಿರುವ ಶ್ರೀ ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರ್ ಅಸ್ಥಿ ಚಿಕಿತ್ಸಾ ಕೇಂದ್ರಕ್ಕೆ ಹಾಗೂ ನೂರು ಹಾಸಿಗೆಗಳ ನೂತನ ಆಸ್ಪತ್ರೆ ಕಟ್ಟಡ ವೀಕ್ಷಣೆ ಮಾಡಿ, ವಿವಿಧ ಮಾಹಿತಿ ಪಡೆದರು. ಈ ವೇಳೆ ಜಿಲ್ಲಾ ಶಾಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ, ಆರ್‌ಎಂಓ ಚಂದ್ರು ರಾಠೋಡ, ಡಾ.ಆದಪ್ಪಗೌಡ ಬಿರಾದಾರ, ಡಾ.ಗುಂಡಪ್ಪ ಹಾಗೂ ಇತರು ಸಚಿವರಿಗೆ ಸ್ವಾಗತಿಸಿದರು. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ, ಇಲಾಖೆಯ ಆಯುಕ್ತ ಡಿ.ರಂದೀಪ್, ಜಿಲ್ಲಾಧಿಕಾರಿ ಟಿ.ಭೂಬಾಲನ್, ಡಾ.ಅನಂತ ದೇಸಾಯಿ ಸೇರಿದಂತೆ ಇತರೇ ವೈದ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.