ಸಾರಾಂಶ
ನಾನು ಕಾಂಗ್ರೆಸ್ ಶಾಸಕನಾಗಿದ್ದೇನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಅಂತ ಹೇಳಿಲ್ಲ. ನಾವು ಪಕ್ಷದ ಪರ. ನಮ್ಮಲ್ಲಿ ನಾಯಕತ್ವದ ವಿಚಾರವಾಗಿ ಯಾವುದೇ ಕಾಂಪಿಟೇಷನ್ ಇಲ್ಲ. ಯಾರ ಪರವೂ ನಿಂತಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಪಕ್ಷ ಏನು ಹೇಳುತ್ತದೆ ಪ್ರಕಾರ ಇರುತ್ತೇವೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮುಖ್ಯಮಂತ್ರಿ ಸ್ಥಾನ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟಿದ್ದು, ಇದರ ಬಗ್ಗೆ ವಿಪಕ್ಷಗಳು ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಕಿಡಿಕಾರಿದರು.ತಾಲೂಕಿನ ಸೋಮನಹಳ್ಳಿ ಸಮೀಪದ ಖಾಸಗಿ ಹೋಟೆಲ್ ವೊಂದರಲ್ಲಿ ಉದ್ಯಮಿ ಸಿ.ಟಿ.ಶಂಕರ್ ನೇತೃತ್ವದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಆತಗೂರು ಹೋಬಳಿ ಮಾಚಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋವಿಂದ ಮತ್ತು ಅವರ ಬೆಂಬಲಿಗರನ್ನು ಅಭಿನಂದಿಸಿದರು.
ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ನಾವಾಗಲಿ, ಶಾಸಕರಾಗಲಿ ಅಥವಾ ಪಕ್ಷದವರಾಗಲಿ ಮಾತನಾಡುತ್ತಿಲ್ಲ. ನಮ್ಮ ಪಕ್ಷದ ವಿಚಾರವಾಗಿ ಮಾತನಾಡಲು ಬಿಜೆಪಿ- ಜೆಡಿಎಸ್ ನಾಯಕರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.ಪಕ್ಷ ಮತ್ತು ಸರ್ಕಾರದಲ್ಲಿ ಏನೇ ಬೆಳವಣಿಗೆಯಾದರೂ ಅದನ್ನು ಹೈಕಮಾಂಡ್ ಮಾಡುತ್ತದೆ. ಸಿಎಂ ಬದಲಾಗುತ್ತಾರೆ, ಇವರಿಗೆ ಸಿಎಂ ಹುದ್ದೆ ಸಿಗಲ್ಲ ಎಂದು ದಾರಿಯಲ್ಲಿ ಹೋಗುವವರೆಲ್ಲ ಚರ್ಚೆ ಮಾಡಿದರೆ ಅದಕ್ಕೆ ಉತ್ತರಿಸುವ ಅಗತ್ಯವಿಲ್ಲ ಎಂದು ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.
ನಾನು ಕಾಂಗ್ರೆಸ್ ಶಾಸಕನಾಗಿದ್ದೇನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಅಂತ ಹೇಳಿಲ್ಲ. ನಾವು ಪಕ್ಷದ ಪರ. ನಮ್ಮಲ್ಲಿ ನಾಯಕತ್ವದ ವಿಚಾರವಾಗಿ ಯಾವುದೇ ಕಾಂಪಿಟೇಷನ್ ಇಲ್ಲ. ಯಾರ ಪರವೂ ನಿಂತಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಪಕ್ಷ ಏನು ಹೇಳುತ್ತದೆ ಪ್ರಕಾರ ಇರುತ್ತೇವೆ ಎಂದರು.ಸರ್ಕಾರದ ಸಚಿವರ ಕಾರ್ಯ ಸಾಧನೆ ಬಗ್ಗೆ ಮೌಲ್ಯಮಾಪನ ನಡೆಯುತ್ತಿರುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಇದೇ ವೇಳೆ ಆತಗೂರು ಗ್ರಾಮದ ಜೆಡಿಎಸ್ ಮುಖಂಡರಾದ ಉಮೇಶ್, ವೆಂಕಟೇಶ್, ಪುಟ್ಟಸ್ವಾಮಿ, ಚನ್ನೇಗೌಡ, ಪುಟ್ಟರಾಜು, ಸುರೇಶ್ ಹಾಗೂ ಮಹೇಶ್ ಅವರು ಕಾಂಗ್ರೆಸ್ ಸೇರ್ಪಡೆಯಾದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಹಾಜರಿದ್ದರು.