ಸಾರಾಂಶ
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಯಾವುದೇ ಸಾಧನೆ ಮಾಡಿರಲಿಲ್ಲ. ಹೀಗಾಗಿ, ಅವರು ಸಾಧನಾ ಸಮಾವೇಶ ಮಾಡಿರಲಿಲ್ಲ
ಹುಬ್ಬಳ್ಳಿ: 5ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪವರ್ ಶೇರಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಬಹಿರಂಗವಾಗಿ ಮಾತನಾಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು.ಸುರ್ಜೇವಾಲಾ ಅವರಿಗೆ ಶಾಸಕರು ದೂರು ನೀಡಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕರು ತಮ್ಮ ಕ್ಷೇತ್ರದ ಕುರಿತಂತೆ ಬೇಡಿಕೆ ಸಲ್ಲಿಸಿದ್ದಾರೆ. ಕೆಲವರು ನಮ್ಮ ಇಲಾಖೆಯ ಕುರಿತಂತೆ ತಮ್ಮ ಕ್ಷೇತ್ರಕ್ಕೆ ಬಸ್‌ಗಳ ಬೇಡಿಕೆ ಇಟ್ಟಿದ್ದಾರೆ. ಅದೆಲ್ಲ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಾಧನೆ ಮಾಡಿದ್ದಕ್ಕೆ ಸಮಾವೇಶ: ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಯಾವುದೇ ಸಾಧನೆ ಮಾಡಿರಲಿಲ್ಲ. ಹೀಗಾಗಿ, ಅವರು ಸಾಧನಾ ಸಮಾವೇಶ ಮಾಡಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಸಾಧನೆ ಮಾಡಿದ್ದೇವೆ. ಹೀಗಾಗಿ ಸಾಧನಾ ಸಮಾವೇಶ ಮಾಡುತ್ತಿದ್ದೇವೆ. ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಹೇಳಿಕೊಳ್ಳಲಿ. ಅವರು ಅಧಿಕಾರದಲ್ಲಿದ್ದಾಗ ಎಲ್ಲ ಇಲಾಖೆಗಳಿಗೆ ಸಾಲದ ಹೊರೆ ಹೇರಿದ್ದಾರೆ. ಅಧಿಕಾರದಿಂದ ಕೆಳಗಿಳಿಯುವ ವೇಳೆ ಅನುದಾನವಿಲ್ಲದಿದ್ದರೂ ಹಲವಾರು ಯೋಜನೆ ಜಾರಿ ಮಾಡಿದ್ದಾರೆ ಎಂದರು.ಸುಳ್ಳು ಪ್ರಚಾರ:
ಮುಜರಾಯಿ ಇಲಾಖೆಯಲ್ಲಿ ದೇವಸ್ಥಾನದ ಹಣ ಇತರೇ ಧರ್ಮದ ಯಾತ್ರಾತ್ರಿಗಳಿಗೆ ನೀಡಲಾಗುತ್ತಿದೆ ಎಂಬ ಬಿಜೆಪಿಯವರ ಆರೋಪ ನಿರಾಧಾರ ಎಂದ ಅವರು, ದೇವಸ್ಥಾನದ ಹಣ ಸರ್ಕಾರದ ಖಜಾನೆಗೆ ಬರುವುದಿಲ್ಲ. ಒಂದು ದೇವಸ್ಥಾನದ ಹಣ ಮತ್ತೊಂದು ದೇವಸ್ಥಾನಕ್ಕೆ ನೀಡಲು ಬರುವುದಿಲ್ಲ, ಹೀಗಿರುವಾಗ ಇತರ ಧರ್ಮೀಯರಿಗೆ ಕೊಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಕೆಲವರು ಇಂತಹ ವಿಷಯಗಳ ಕುರಿತಂತೆ ಸಮಾಜದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಜನ ಇಂತಹ ಮಾತುಗಳಿಗೆ ಕಿವಿಕೊಡಬಾರದು ಎಂದರು.
ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ₹150 ಹಾಗೂ ಕೇಂದ್ರದ ₹100 ಕೋಟಿ ಸೇರಿ ಒಟ್ಟು ₹250 ಕೋಟಿ ಯೋಜನೆ ರೂಪಿಸಲಾಗಿದೆ. ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಅದೇ ರೀತಿ ಹುಲಿಗೆಮ್ಮ, ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ, ಮೈಸೂರು ಚಾಮುಂಡೇಶ್ವರಿ ಸೇರಿದಂತೆ ವಿವಿಧ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.