ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಿಳೆಯರ ಸಂರಕ್ಷಣೆಗೆ ಸರ್ಕಾರ ಹಲವಾರು ಕಾನುನು ಜಾರಿಗೆ ತಂದಿದೆ. ಇವೆಲ್ಲವೂ ಮಹಿಳೆ ಮತ್ತು ಹೆಣ್ಣುಮಕ್ಕಳ ಸುರಕ್ಷತೆಗಾಗಿ ರಚಿಸಲ್ಪಟ್ಟವುಗಳು. ಭ್ರೂಣದಿಂದ ಹಿಡಿದು ಸಾವಿನವರೆಗೂ ಕಾನೂನುಗಳಿದ್ದರೂ ಸಹ ಅವುಗಳ ಅರಿವು ಮತ್ತು ಪ್ರಾಮಾಣಿಕ ಅನುಷ್ಠಾನದಿಂದ ಮಾತ್ರ ಅದರ ಫಲ ಅನುಭವಿಸಲು ಸಾಧ್ಯ ಎಂದು ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಅಭಿಪ್ರಾಯಪಟ್ಟರು.ಕರ್ನಾಟಕ ಸಂಘ ಮತ್ತು ಕಮಲಾನೆಹರೂ ಕಾಲೇಜು ಜಂಟಿಯಾಗಿ ಏರ್ಪಡಿಸಿದ್ದ ‘ಮಹಿಳೆ ಮತ್ತು ಕಾನೂನು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕಾನೂನುಗಳ ದುರ್ಬಳಕೆಯಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ತಡೆಗಟ್ಟಲು ಕಾನೂನಿನ ಅರಿವಿನಿಂದ ಮಾತ್ರ ಸಾಧ್ಯ ಎಂದು ಹೇಳಿದರಲ್ಲದೆ, ಜೊತೆಗೆ ಪೋಕ್ಸೋ ಕಾಯಿದೆ ಬಗ್ಗೆಯೂ ಸಹ ತಿಳಿದುಕೊಳ್ಳಬೇಕು ಎಂದು ಆಶಿಸಿದರು.
ಸರ್ಕಾರ ರಚಿಸಿರುವ ಕಾನೂನು ಸೇವಾ ಪ್ರಾಧಿಕಾರದ ನೆರವನ್ನು ಉಚಿತವಾಗಿ ಪಡೆಯಬಹುದಾಗಿದೆ. ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಲದಲ್ಲಾಗಲೀ, ಅಪರಿಚಿತರೊಂದಿಗಾಗಲೀ ಖಾಸಗಿ ವಿಚಾರ ಹಂಚಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ ರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣುಮಕ್ಕಳ ಸುರಕ್ಷತೆಗೆ ಇಷ್ಟೆಲ್ಲಾ ಕಾನೂನುಗಳಿದ್ದರೂ ಸಹ ವರ್ಷದಿಂದ ವರ್ಷಕ್ಕೆ ಅಪರಾಧಗಳ ಸಂಖ್ಯೆ ಏರುಮುಖವಾಗಿರುವುದು ಕಳವಳಕಾರಿ. ಅಲ್ಲದೆ ರಾಷ್ಟ್ರೀಯ ಅಪರಾಧ ಸಂಶೋಧನಾ ಸಂಸ್ಥೆ ಒಂದು ವರದಿಯಂತೆ 2021ರಲ್ಲಿ 4,28,650 ಮಹಿಳಾ ದೌರ್ಜನ್ಯ ವರದಿಯಾಗಿದೆ. ಅಂದರೆ ಹಿಂದಿನ ವರ್ಷಕ್ಕಿಂತ ಶೇ. 87 ಹೆಚ್ಚು, ಇದನ್ನು ತಡೆಯಬೇಕಾದರೆ ಯುವಕರಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಹೆಚ್ಚು ಕಾನೂನು ಅರಿವು ಇರುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕಮಲಾನೆಹರೂ ಪ್ರಾಚಾರ್ಯ ಡಾ. ಎಂ. ಆರ್. ಜಗದೀಶ್, ಡಾ. ಓಂಕಾರಪ್ಪ ಮತ್ತು ಪ್ರೊ. ಎಂ. ಆಶಾಲತಾ ಇದ್ದರು. ಹೆಚ್. ಡಿ. ಮೋಹನ್ ಶಾಸ್ತ್ರಿ, ಪ್ರೊ. ಹೆಚ್. ಆರ್. ಶಂಕರನಾರಾಯಣ ಶಾಸ್ತ್ರಿ, ಡಾ. ನಾಗಮಣಿ, ಎಸ್. ಜಿ. ಆನಂದ್, ಅಶ್ವತ್ಥ ನಾರಾಯಣ ಶೆಟ್ಟಿ ಮತ್ತು ಬಸವರಾಜ್ ಕಂದಗಲ್ ಉಪಸ್ಥಿತರಿದ್ದರು.ಕು. ತೃಪ್ತಿ ಭಟ್ ಪ್ರಾರ್ಥಿಸಿದರು. ಕು. ದಿವ್ಯ ಅವರಿಂದ ಸ್ವಾಗತ, ಕು. ಕಾವ್ಯ ಅವರು ವಂದಿಸಿದರು. ಕು. ಸುಚಿತ್ರಾ ಕಾರ್ಯಕ್ರಮ ನಿರ್ವಹಿಸಿದರು.
;Resize=(128,128))
;Resize=(128,128))
;Resize=(128,128))