ಕನ್ನಡಪ್ರಭ ವಾರ್ತೆ ದಾವಣಗೆರೆ

ಒಡಕು ಮೂಡಿರುವ ದಾವಣಗೆರೆ ಜಿಲ್ಲಾ ಬಿಜೆಪಿಯ ವಾತಾವರಣ ತಿಳಿಗೊಳಿಸಲು ಸ್ವತಃ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಗುರುವಾರ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರರನ್ನು ಭೇಟಿ ಮಾಡಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

ನಗರದ ಜಿಎಂಐಟಿ ಅತಿಥಿ ಗೃಹಕ್ಕೆ ಆಗಮಿಸಿದ್ದ ರಾಧಾಮೋಹನ ದಾಸ್ ಅಗರವಾಲ್, ಬಿ.ವೈ.ವಿಜಯೇಂದ್ರ, ಪ್ರೀತಂ ಗೌಡ ಕೊಠಡಿಯೊಂದರಲ್ಲಿ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ್‌, ಬಳ್ಳಾರಿ ಮಾಜಿ ಸಂಸದ ದೇವೇಂದ್ರಪ್ಪ, ಯಶವಂತರಾವ್ ಜಾಧವ್, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ, ಮಾಜಿ ಶಾಸಕ ಎಚ್.ಪಿ.ರಾಜೇಶ ಇತರರ ಜತೆಗೆ ಸುಮಾರು ಹೊತ್ತಿನವರೆಗೆ ರಹಸ್ಯವಾಗಿ ಚರ್ಚೆ ನಡೆಸಿ, ಭಿನ್ನಾಭಿಪ್ರಾಯ ಶಮನಕ್ಕೆ ಪ್ರಯತ್ನಿಸಿದರು.

ಮೊದಲು ಜಿಲ್ಲಾ ಪದಾಧಿಕಾರಿಗಳನ್ನು ಬದಲಾವಣೆ ಮಾಡಬೇಕು. ದಾವಣಗೆರೆ ದಕ್ಷಿಣ ಉಪಚುನಾವಣೆ ಇನ್ನೂ 2 ವರ್ಷಕ್ಕೂ ಹೆಚ್ಚು ಕಾಲವಿದ್ದರೂ ಈಗಲೇ ಹೊನ್ನಾಳಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದನ್ನು ತಕ್ಷಣ ಹಿಂಪಡೆಯಬೇಕು. ಹೀಗೆ ಅಭ್ಯರ್ಥಿ ಘೋಷಣೆ ಮಾಡುವುದು ಸರಿಯಲ್ಲ. ಇದರಿಂದ ಮುಖಂಡರು, ಕಾರ್ಯಕರ್ತರಲ್ಲೂ ಗೊಂದಲವಾಗುತ್ತದೆ ಎಂದು ಸಭೆಯಲ್ಲಿದ್ದ ಮುಖಂಡರು ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿದರು ಎನ್ನಲಾಗಿದೆ.

ಹೀಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತ, ಗುಂಪುಗಾರಿಕೆ ಮಾಡುತ್ತ ಪಕ್ಷವನ್ನೇ ಕೆಲವರು ಹಾಳುಗೆಡವುತ್ತಿದ್ದಾರೆ. ಜಿಲ್ಲಾಧ್ಯಕ್ಷ ಸಹ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಕೆಲವೇ ಕೆಲವರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಗಳೂರು, ಹರಪನಹಳ್ಳಿ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿರುವುದಕ್ಕೆ ಮುಖಂಡರು ಆಕ್ಷೇಪಿಸಿದರು ಎಂದು ಗೊತ್ತಾಗಿದೆ.


ಸದ್ಯ ದಾವಣಗೆರೆ ದಕ್ಷಿಣದ ವಾತಾವರಣ ಏನಿದೆಯೆಂಬುದಾಗಿ ಕೇಳಿದಾಗ ಆರ್ಥಿಕವಾಗಿ ಬಲಿಷ್ಟವಾಗಿರುವ ಎದುರಾಳಿಗಳಿದ್ದಾರೆಂಬುದಾಗಿ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾದ ಯಶವಂತರಾವ್‌ ಅಗರವಾಲ್ ಗಮನಕ್ಕೆ ತಂದರು. ಯಶವಂತರಾವ್ ನಾಲ್ಕು ಸಲ ಸೋತಿದ್ದೇನೆಂದಾಗ, ಅತೀ ಕನಿಷ್ಠ ಮತ್ತು ಗರಿಷ್ಠ ಮತಗಳ ಅಂತರವೆಷ್ಟು, ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು 28 ಸಾವಿರ ಮತಗಳ ಅಂತರದಿಂದ ಎಂಬೆಲ್ಲಾ ಮಾಹಿತಿಯನ್ನು ಅಗರವಾಲ್ ಕಲೆ ಹಾಕಿದರು. ನಂತರ ಜಿಎಂಐಟಿ ಗೆಸ್ಟ್‌ಹೌಸ್‌ನ ಡೈನಿಂಗ್ ಹಾಲ್‌ನಲ್ಲಿ ಊಟ ಮಾಡಿ, ಹೊರಟು ನಿಂತರು.

ಜಿಎಂಐಟಿಯಿಂದ ರಾಧಾಮೋಹನ ದಾಸ್ ಹೊರಡಲು ಸಜ್ಜಾಗುತ್ತಿದ್ದಂತೆಯೇ ಗೆಸ್ಟ್ ಹೌಸ್ ಮುಖ್ಯ ದ್ವಾರದ ಬಳಿ ಚನ್ನಗಿರಿ, ಮಾಯಕೊಂಡ ಕ್ಷೇತ್ರದ ಕಾರ್ಯಕರ್ತರು ರೇಣುಕಾಚಾರ್ಯ ಹಠಾವೋ, ಬಿಜೆಪಿ ಬಚಾವೋ ಎಂಬ ಘೋಷಣೆ ಕೂಗಿ, ಪ್ರತಿಭಟಿಸಲು ಮುಂದಾಗುತ್ತಿದ್ದಂತೆಯೇ ಗೆಸ್ಟ್ ಹೌಸ್‌ನ ಮತ್ತೊಂದು ದ್ವಾರದ ಮೂಲಕ ರಾಧಾಮೋಹನ ದಾಸ್ ವಾಹನವನ್ನೇರಿ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಿದರು ಎಂದು ತಿಳಿದು ಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯಶವಂತರಾವ್ ಜಾಧವ್, ತುಮ್ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ, ಜಿ.ಎಸ್.ಅನಿತಕುಮಾರ, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ಟಿ.ಶ್ರೀನಿವಾಸ ದಾಸಕರಿಯಪ್ಪ, ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಎಸ್.ಟಿ.ಯೋಗೇಶ್ವರ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ಜಗದೀಶ ಕುಮಾರ ಪಿಸೆ, ಅಣಬೇರು ಜೀವನಮೂರ್ತಿ ಅನೇಕರು ಇದ್ದರು.