ಸಾರಾಂಶ
ಚಾಮರಾಜನಗರದಲ್ಲಿ ಶಿವಪುರ ಗ್ರಾಮಸ್ಥರು ಸುದ್ದಿಗೋಷ್ಠಿ ನಡೆಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಶಿವಪುರ ಗ್ರಾಪಂನ ಘನಧ್ರವ್ಯ ತ್ಯಾಜ್ಯ ಘಟಕ ಸ್ಥಾಪನೆಗೆ ಯಡಪುರ ಬಳಿ ಗುರುತಿಸಿರುವ ಸ್ಥಳ ಬದಲಾವಣೆ ಮಾಡಬೇಕು ಎಂದು ತಾಲೂಕಿನ ಶಿವಪುರ ಗ್ರಾಮಸ್ಥ ರವಿ ಬೆಳ್ಳಯ್ಯ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಪುರ ಗ್ರಾಪಂಗೆ ಸೇರಿದ ಶಿವಪುರ ಗ್ರಾಮದ ಸರಹದ್ದಿನಲ್ಲಿ ಬರುವ ಯಡಪುರ ಗ್ರಾಮಕ್ಕೆ ಸೇರಿದ ಸ.ನಂ 64ರಲ್ಲಿ 1 ಎಕರೆ ಸರ್ಕಾರಿ ಖರಾಬು ಭೂಮಿಯನ್ನು ಶಿವಪುರ ಗ್ರಾಪಂನ ಘನ ಧ್ರವ್ಯ ತ್ಯಾಜ್ಯ ಘಟಕ ಸ್ಥಾಪನೆ ಮಂಜೂರು ಮಾಡಲಾಗಿದ್ದು, ಇದರಿಂದ ಸ್ಥಳೀಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಗ್ರಾಪಂ ವತಿಯಿಂದ ನಡವಳಿ ಮಾಡದೇ ಏಕಾಏಕಿ ಸ.ನಂ.64ರಲ್ಲಿ 1 ಎಕರೆ ಜಮೀನಿನಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಗ್ರಾಪಂ ಪಿಡಿಒ ಮುಂದಾಗಿದ್ದಾರೆ. ಗ್ರಾಮದ 500 ಮೀ. ದೂರದಲ್ಲಿಯೇ ಘಟಕ ನಿರ್ಮಾಣ ಮಾಡಲು ಮುಂದಾಗಿರುವುದರಿಂದ ಗ್ರಾಮದಲ್ಲಿ ಘಟಕ ನಿರ್ಮಾಣದಿಂದ ಕುಡಿಯುವ ನೀರಿನ ಮಾಲಿನ್ಯ ಹಾಗೂ ವಾಯು ಮಾಲಿನ್ಯ ಉಂಟಾಗಿ ಜನರಿಗೆ ರೋಗರುಜಿನಗಳು ಹಾಗೂ ಸುತ್ತಲಿನ ಜಮೀನುಗಳ ಫಸಲಿನ ಮೇಲೆ ಪರಿಣಾಮ ಬೀರಲಿದೆ. ಘಟಕ ನಿರ್ಮಾಣದ ಮೂಲಕ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ದೂರಿದರು.ಘಟಕ ಸ್ಥಾಪನೆ ಸ್ಥಗಿತಗೊಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ಗ್ರಾಮದಿಂದ ದೂರದಲ್ಲಿರುವ ಬಯಲು ಪ್ರದೇಶದಲ್ಲಿ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧವಿಲ್ಲ. ಘಟಕ ನಿರ್ಮಾಣ ಸ್ಥಗಿತಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ವಕೀಲರಾದ ಭರತ್, ಶೇಖರ್, ಮುಖಂಡರಾದ ಗಿರೀಶ್, ನಾಗರಾಜು, ಕುಮಾರ್ ಇದ್ದರು.