ಸಾರಾಂಶ
ಕುಕನೂರು:
ಕೇಂದ್ರ ಸರ್ಕಾರ ಜಿಎಸ್‌ಟಿ ಸ್ಲ್ಯಾಬ್ ಬದಲಾಯಿಸುವ ಮೂಲಕ ದೇಶದ ಆರ್ಥಿಕತೆ ಬಲಪಡಿಸಲು ದಿಟ್ಟ ಹೆಜ್ಜೆ ಇಟ್ಟಿದೆ. ಇದರಿಂದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಎಸ್ಟಿ ದರ ಕಡಿತದಿಂದ ಬಡ ವರ್ಗ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದ್ದು ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಕೇಂದ್ರ ಸರ್ಕಾರದ ಜಿಎಸ್ಟಿ ಇಳಿಕೆಯನ್ನು ಖಂಡಿತ ರಾಷ್ಟ್ರದ ಜನತೆ ಸ್ವೀಕರಿಸಿದ್ದಾರೆ. ಕೆಲವು ವಸ್ತುಗಳ ಮೇಲೆ ಶೇ.28ರಿಂದ ಶೇ. 18ಕ್ಕೆ ಕಡಿತಗೊಳಿಸಿದ್ದಾರೆ. ಕೆಲವು ಸೇವೆಗಳ ಮೇಲೆ ಜಿಎಸ್ಟಿ ದರ ಕೈ ಬಿಡಲಾಗಿದೆ. ಇದರಿಂದ ಯಾವುದೇ ರೀತಿಯ ಆರ್ಥಿಕ ಹೊಡೆತ ಬೀಳದು. ಜಿಎಸ್ಟಿ ದರ ಕಡಿತದಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.
ಸ್ವಾವಲಂಬಿ ಬದುಕು ನೀಡದ ಸರ್ಕಾರ:ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ಜನರಿಗೆ ಸ್ವಾವಲಂಬಿ ಬದುಕು ನೀಡುತ್ತಿಲ್ಲ. ಯೋಜನೆಗಳು ನಿರುತ್ಪಾದಕ ಯೋಜನೆಗಳಾಗಿವೆ. ಜನರ ಕೈಗೆ ಕೆಲಸ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದರೆ ಅವರು ಸಹ ಆರ್ಥಿಕತೆವಾಗಿ ಸದೃಢರಾಗುತ್ತಾರೆ. ಆದರೆ, ಸರ್ಕಾರ ಬಡವರು ಬದುಕು ಕಟ್ಟಿಕೊಳ್ಳುವ ಯಾವುದೇ ರೀತಿ ಯೋಜನೆ ನೀಡದೆ ಇರುವುದು ಬೇಸರದ ಸಂಗತಿ. ಬಡ ಹಾಗೂ ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಭರವಸೆಯಂತೆ ಜಿಎಸ್ಟಿ ದರದಲ್ಲಿ ಕಡಿತಗೊಳಿಸಿದ್ದಾರೆ ಎಂದು ಹಾಲಪ್ಪ ಆಚಾರ್ ತಿಳಿಸಿದ್ದಾರೆ.