ಪ್ರಸ್ತುತ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲ ರಚನೆಗೆ ಧಕ್ಕೆಯಾಗುವಂತಹ ಬದಲಾವಣೆಗಳಾಗುತ್ತಿವೆ ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ಪ್ರಸ್ತುತ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲ ರಚನೆಗೆ ಧಕ್ಕೆಯಾಗುವಂತಹ ಬದಲಾವಣೆಗಳಾಗುತ್ತಿವೆ ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ವಕೀಲರ ಸಂಘಕ್ಕೆ ಮಂಗಳವಾರ ಭೇಟಿ ನೀಡಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಮತ ಯಾಚನೆ ಮಾಡಿ ಮಾತನಾಡಿದರು.

ಮೊಬೈಲ್ ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ತಂತ್ರಜ್ಞಾನವು ಇಡೀ ದೇಶದ ಜನಪ್ರತಿನಿಧಿಗಳನ್ನು ಅಥವಾ ದೇಶದ ಪ್ರಜಾಪ್ರಭುತ್ವವನ್ನು ಮೀರಿ ಬೆಳೆದು ನಿಂತಿದೆ. ನಮ್ಮ ಪ್ರಜಾಪ್ರಭುತ್ವವು ಪಕ್ಷ ಆಧಾರಿತ ವ್ಯವಸ್ಥೆಯನ್ನು ಹೊಂದಿದೆ. ಎಲ್ಲಾ ಪದವೀಧರರು ಮತ್ತು ಬುದ್ಧಿವಂತರು ತಮ್ಮ ಪ್ರತಿನಿಧಿಯನ್ನು ಸ್ವತಂತ್ರವಾಗಿ ಆಯ್ಕೆ ಮಾಡುತ್ತಾರೆ. ಇಂದಿನ ಯುವಕರಲ್ಲಿ ಅತ್ಯಂತ ಉತ್ಸಾಹ ಮತ್ತು ಬಿಸಿ ರಕ್ತವಿರುವುದರಿಂದ, ಕೆಲವೊಮ್ಮೆ ಅವರು ಪರೀಕ್ಷೆಗೆ ಒಳಪಡುವ ಮುಂಚೆಯೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಭಾವಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ದೇಶದ ಕಾನೂನು ತಜ್ಞರು, ನ್ಯಾಯವಾದಿಗಳು, ಕೋರ್ಟಗಳು ಹಾಗೂ ಬುದ್ಧಿವಂತರು ದೇಶಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ಜವಾಬ್ದಾರಿ ಹೊಂದಿರುತ್ತಾರೆ ಎಂದರು.

ಎಸ್. ವಿ. ಸಂಕನೂರ ಒಬ್ಬ ಸದೃಢ ರಾಜಕಾರಣಿಯಾಗಿದ್ದು ಸುಮಾರು 25-30 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನ ಅಭಿವೃದ್ಧಿಗೆ ಹಾಗೂ ಕರ್ನಾಟಕ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾಗಿ ಅವರು ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಸಾರ್ವಜನಿಕರು ಹಾಗೂ ವಕೀಲರು ಇಂತಹ ನಾಯಕರಿಗೆ ಪ್ರಥಮ ಆದ್ಯತೆಯ ಮತ ನೀಡಿ ಬೆಂಬಲಿಸಬೇಕು ಎಂದು ವಿನಂತಿ ಮಾಡಿಕೊಂಡರು.

ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ, ಎಸ್.ಎಸ್. ಶಿರಗಂಬಿ, ಕೆ. ಶಿವಲಿಂಗಪ್ಪ, ಎಸ್.ಎಸ್. ರಾಮಲಿಂಗಣ್ಣವರ, ಡಾ. ಬಸವರಾಜ ಕೇಲಗಾರ, ಎಚ್. ಎಚ್. ತಿಮ್ಮೇನಹಳ್ಳಿ, ಶಿವಕುಮಾರ ಮುದ್ದಪ್ಪನವರ, ಭೋಜರಾಜ ಕರೂದಿ, ಮಂಜುನಾಥ ಕಾಟೆ, ಸಿದ್ದು ಚಿಕ್ಕಬಿದರಿ ಹಾಗೂ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.