ಮಹಿಳೆಯರಿಗೆ ರವೆ ಉಂಡೆ ಹಾಗೂ ಕೋಡು ಬಳೆ ಉಡುವ ಅಡುಗೆ ಸ್ಪರ್ಧೆ ನಡೆಯಿತು. 20ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಟಿ.ಶೆಟ್ಟಿಗೇರಿಯಲ್ಲಿ ಎರಡನೆ ದಿನದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದಲ್ಲಿ ಗೋಣಿಕೊಪ್ಪದ ಜನನಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಪ್ರಾಯೋಜಕತ್ವದಲ್ಲಿ ಮಹಿಳೆಯರಿಗೆ ರವೆ ಉಂಡೆ ಹಾಗೂ ಕೋಡು ಬಳೆ ಮಾಡುವ ಅಡುಗೆ ಸ್ಪರ್ಧೆ ನಡೆಯಿತು.

20ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಅಡುಗೆ ಸ್ಪರ್ಧೆಯ ರವೆ ಉಂಡೆ ಮಾಡುವ ಸ್ಪರ್ಧೆಯಲ್ಲಿ ಮಾಯಣಮಾಡ ಭಾಗ್ಯ ಪ್ರಥಮ, ಕಟ್ಟೇರ ಸುನಿತ ದ್ವಿತೀಯ, ಕೋಟ್ರಮಡ ರೇಷ್ಮ ತೃತೀಯ, ಕೋಡುಬಳೆ ಮಾಡುವ ಸ್ಪರ್ಧೆಯಲ್ಲಿ ಮುಕ್ಕಾಟಿರ ಉಷ ಪ್ರಥಮ, ಮಲ್ಲಮಡ ಶ್ಯಾಮಲ ದ್ವಿತೀಯ, ಕೊಣಿಯಂಡ ಆಶ ತೃತೀಯ ಬಹುಮಾನ ಪಡೆದುಕೊಂಡರು. ಇವರಿಗೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಬಹುಮಾನ ನೀಡಿದರು. ಕೋಟ್ರಮಡ ರಾಣಿ ದೇವಯ್ಯ ಹಾಗೂ ಬೊಜ್ಜಂಗಡ ಮೀನ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಸಂಜೆ ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟ ಸದಸ್ಯರ ಸಾಂಸ್ಕೃತಿಕ ಪ್ರದರ್ಶನ ಜನೋತ್ಸವಕ್ಕೆ ರಂಗೇರಿಸಿತ್ತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಹಿಂದಿನ ಕಾಲದ ಕೊಡವರಿಗೆ ಕೊಡವ ಪದ್ದತಿ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಸಂಪೂರ್ಣ ಅರಿವು ಹಾಗೂ ಅಭಿಮಾನವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಅರಿವಿನ ಕೊರತೆ ಇದೆ. ಪೋಷಕರು ಮಕ್ಕಳಿಗೆ ಸಮರ್ಪಕ ಮಾಹಿತಿ ಮಾರ್ಗದರ್ಶನ ನೀಡಿರುವುದರಿಂದ ಹಿನ್ನಡೆಯಾಗಿದೆ ಎಂದರು.

ಕೊಡವ ಯುವ ಜನಾಂಗವು ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅತೀವ ಅಭಿಮಾನವಿರಿಸಿಕೊಂಡಿದ್ದು, ಅವರಿಗೆ ಪೋಷಕರಿಂದ ಸಿಗದ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಸಲುವಾಗಿ ನಾವು ಕೊಡವ ಸಮಾಜದಿಂದ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಯುವ ಜನಾಂಗ ಇದರ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಕಿವಿ ಮಾತು ಹೇಳಿದರು.

ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಮಾತನಾಡಿ ಒಂದು ದಿನದ ಕಾರ್ಯಕ್ರಮ ಆಯೋಜಿಸುವುದೇ ಬಹಳ ಕಷ್ಟವಿದೆ. ಅಂತಹದರಲ್ಲಿ ಎಂಟು ವರ್ಷಗಳಿಂದ ಹತ್ತು ದಿವಸ ಜನೋತ್ಸವದ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸುತ್ತಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಪ್ರಯತ್ನ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ಮುಕ್ಕಾಟಿರ ವೇಣು ಮಾತನಾಡಿ, ಎಲೆಮರೆಯ ಕಾಯಿಯಂತಿದ್ದ ಹಲವರ ಪ್ರತಿಭೆಯ ಅನಾವರಣಕ್ಕೆ ಈ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿದೆ. ನಾಡಿನ ಸರ್ವರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಆಂಡಮಾಡ ಸತೀಶ್ ವಿಶ್ವನಾಥ್ ಮಾತನಾಡಿ, ಹತ್ತು ದಿನಗಳ ನಮ್ಮ ಈ ಕಾರ್ಯಕ್ರಮಕ್ಕೆ ಹಲವರು ವಿವಿಧ ರೀತಿಯ ಬೆಂಬಲ ನೀಡುತ್ತಿದ್ದು, ಇದು ಅವರಿಗೆ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯ ಮೇಲೆ ಇರುವ ಅಭಿಮಾನವನ್ನು ತೋರಿಸುತ್ತದೆ. ಅವರಿಗೆ ಅಭಿನಂದನೆ ಸಲ್ಲಿಸುವುದರೊಂದಿಗೆ ಅದೇ ರೀತಿಯ ಪ್ರೋತ್ಸಾಹವನ್ನು ಸರ್ವರಿಂದ ನಿರೀಕ್ಷಿಸುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಕೇಳಿಕೊಂಡರು. ವೇದಿಕೆಯಲ್ಲಿ ಅತಿಥಿ ಗಣ್ಯರಾದ ಕೋಟ್ರಮಡ ರಾಜ ದೇವಯ್ಯ, ಶಾಂತೆಯಂಡ ಟೀನ ಮಧು ಹಾಗೂ ಚೊಟ್ಟೆಯಾಂಡಮಾಡ ಜಯಶ್ರಿ ಅಪ್ಪಣ್ಣ ಇದ್ದರು.

ಕೊಡವ ಸಮಾಜದ ಸದಸ್ಯೆ ಮುಕ್ಕಾಟಿರ ಉಷ ಪ್ರಾರ್ಥಿಸಿ, ಕಾರ್ಯದರ್ಶಿ ಕೋಟ್ರಮಡ ಸುಮಂತ್ ಸ್ವಾಗತಿಸಿ, ನಿರ್ದೇಶಕರಾದ ಚಂಗುಲಂಡ ಅಶ್ವಿನಿ ಸತೀಶ್ ನಿರೂಪಿಸಿ, ಬಾದುಮಂಡ ವಿಷ್ಣು ವಂದಿಸಿದರು. ಕೊಡವ ಸಮಾಜದ ಖಜಾಂಚಿ ಚಂಗುಲಂಡ ಸತೀಶ್ ಹಾಗೂ ನಿರ್ದೇಶಕಿ ತೀತೀರ ಅನಿತ ಸುಬ್ಬಯ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.