ಚನ್ನಬಸವಣ್ಣರ ಬೇರು ಗಾಂಧಿ, ಬಸವ, ಲೋಹಿಯಾ ಮೂಲದ್ದು

| Published : May 05 2025, 12:48 AM IST

ಸಾರಾಂಶ

ಸಿ. ಚನ್ನಬಸವಣ್ಣ ಅವರ ಬೇರುಗಳು ಗಾಂಧಿ, ಬಸವ ಮತ್ತು ಲೋಹಿಯಾ ಮೂಲದ್ದು. ಅವರು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದ ಪುಸ್ತಕಗಳು ನಾಡಿನಲ್ಲಿ ಜ್ಞಾನ ವಿಸ್ತರಿಸಿವೆ.

‘ಚುಂಬಕ ಗಾಳಿ’ ಪುಸ್ತಕ ಲೋಕಾರ್ಪಣೆಗೊಳಿಸಿದ ಲೇಖಕಿ ಸವಿತಾ ನಾಗಭೂಷಣಕನ್ನಡಪ್ರಭ ವಾರ್ತೆ ಬಳ್ಳಾರಿ

ಸಿ. ಚನ್ನಬಸವಣ್ಣ ಅವರ ಬೇರುಗಳು ಗಾಂಧಿ, ಬಸವ ಮತ್ತು ಲೋಹಿಯಾ ಮೂಲದ್ದು. ಅವರು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದ ಪುಸ್ತಕಗಳು ನಾಡಿನಲ್ಲಿ ಜ್ಞಾನ ವಿಸ್ತರಿಸಿವೆ ಎಂದು ಲೇಖಕಿ ಸವಿತಾ ನಾಗಭೂಷಣ ಹೇಳಿದರು.

ಪ್ರಕಾಶಕ ಚನ್ನಬಸವಣ್ಣ ಅವರ ಗುಣವಿಶೇಷಗಳನ್ನು ಆಧರಿಸಿದ ಲೇಖನಗಳ ‘ಚುಂಬಕ ಗಾಳಿ’ ಪುಸ್ತಕವನ್ನು ಭಾನುವಾರ ನಗರದ ರಾಘವ ಕಲಾ ಮಂದಿರದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪ್ರಕಾಶಕ ಚನ್ನಬಸವಣ್ಣ ಅವರು ತಮ್ಮ ಲೋಹಿಯಾ ಪ್ರಕಾಶನದ ಮೂಲಕ ಲೇಖಕರನ್ನು ಮೆರೆಸಿದವರು. ಲೇಖಕರನ್ನು ಅವರಂತೆ ಗೌರವಯುತವಾಗಿ ನಡೆಸಿಕೊಂಡ ಪ್ರಕಾಶಕರೇ ಇಲ್ಲ. ಚನ್ನಬಸವಣ್ಣ ಅವರ ವೈಚಾರಿಕ ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು, ಲೋಹಿಯಾ ಹಾಗೂ ಗಾಂಧೀವಾದವನ್ನು ಮೈಗೂಡಿಸಿಕೊಂಡಿರುವ ಚನ್ನಬಸವಣ್ಣನವರು ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಬಸವಣ್ಣನವರ ಆಶಯದಂತೆಯೇ ಬದುಕು ಕಟ್ಟಿಕೊಂಡ ಮಹನೀಯರು. ಲಿಂಗಮೆಚ್ಚಿ ಅಹುದಹುದು ಎನುವಂಥ ವ್ಯಕ್ತಿತ್ವದ ಚನ್ನಬಸವಣ್ಣವರ ಅವರ ಬಗ್ಗೆ ನಾಡಿನ ಅನೇಕ ಖ್ಯಾತ ಲೇಖಕರು ಬರೆದ ಲೇಖನಗಳು ಚುಂಬಕ ಗಾಳಿ ಕೃತಿಯಲ್ಲಿವೆ. ಅವರು ತಮ್ಮ ಒಡನಾಟವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸದಸ್ಯ ಡಾ. ಚಿದಾನಂದ ಸಾಲಿ ಮಾತನಾಡಿ, ಬೆಂಗಳೂರು ಹೊರತಾದ ಬಳ್ಳಾರಿ ಕೇಂದ್ರಿತ ಪ್ರಕಾಶನವನ್ನು ಅವರು ಕಟ್ಟಿದರು. ಪ್ರಕಾಶಕರಾಗಿ ಅವರು ಮಾಡಿದ ಸಾಧನೆಯನ್ನು ಕನ್ನಡ ನಾಡು ಮರೆಯುವಂತಿಲ್ಲ‌. ಓದುಗ ಸ್ನೇಹಿ ಪ್ರಕಾಶಕರು ಚನ್ನಬಸವಣ್ಣ. ‌ಮಾರುಕಟ್ಟೆಯೇ ಇಲ್ಲ ಎಂಬಂತವರ ಲೇಖನಗಳನ್ನು ಅವರು ಪ್ರಕಟಿಸಿದರು. ಹಲವರು ಲೇಖಕರಾಗಿ ಬೆಳೆಯುವುದರ ಹಿಂದೆ ಅವರ ಕೊಡುಗೆ ಇದೆ ಎಂದು ಹೇಳಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ. ಜಾಜಿ ದೇವೇಂದ್ರಪ್ಪ ಮಾತನಾಡಿ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ವಕ್ತಾರರಂತೆಯೇ ಕಂಡು ಬರುವ ಚನ್ನಬಸವಣ್ಣನವರ ಜತೆಗಿನ ಒಡನಾಟ ನಮಗೆ ಅನನ್ಯ ತಿಳಿಹು ನೀಡಿದೆ ಎಂದು ತಿಳಿಸಿದರು.

ಅಂಕಣಕಾರ ಚಂದ್ರಕಾಂತ ವಡ್ಡು ಮಾತನಾಡಿ, ಪುಸ್ತಕ ಸಿದ್ಧತೆ ಆರಂಭವಾಗಿದ್ದು ವರ್ಷದ ಹಿಂದೆ‌. ಪುಸ್ತಕ ಇಷ್ಟು ಪ್ರಚಾರ ಪಡೆದುಕೊಳ್ಳುವುದರ ಹಿಂದೆ ಚನ್ನಬಸವಣ್ಣ ಅವರ ವ್ಯಕ್ತಿತ್ವ ಕಾಣುತ್ತದೆ. ಇದು ಅಭಿನಂದನಾ ಗ್ರಂಥ ಅಲ್ಲ ಕೃತಜ್ಞತಾ ಪುಸ್ತಕ ಎಂದರು.

ಇದೇ ವೇಳೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಪರಿಸರ ಮೇಲಾಗುತ್ತಿರುವ ದಾಳಿಗಳ ಕುರಿತು ಪ್ರಸ್ತಾಪಿಸಿದ ಲೇಖಕ ವಡ್ಡು, ಪುಸ್ತಕದ ಓದಿನ ಜತೆಗೆ, ಪರಿಸರ ಕಾಳಜಿ ಹೆಚ್ಚಾಗಬೇಕು. ಬಳ್ಳಾರಿ, ಕೊಪ್ಪಳದಲ್ಲಿ ಪರಿಸರಕ್ಕೆ ಸಂಬಂಧಿಸಿದ ಹಲವು ಸವಾಲುಗಳಿವೆ. ಇಲ್ಲಿನ ಜನರಿಗೆ ಪರಿಸರ ಕಾಳಜಿ ಇದೆ. ಇಲ್ಲಿ ಆಗುತ್ತಿರುವ ಪರಿಸರ ಹಾನಿ ಬಗ್ಗೆ ಎಲ್ಲರೂ ಹೋರಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸಂಡೂರು ವಿರಕ್ತಮಠದ ಶ್ರೀಪ್ರಭುಸ್ವಾಮಿ ಮಾತನಾಡಿದರು. ಪತ್ರಕರ್ತ ಕೆ.ಎಂ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ ಮೇಟಿ ಹಾಗೂ ಲೇಖಕಿ ಎನ್.ಡಿ. ವೆಂಕಮ್ಮ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಗಾಂಧಿಭವನದಲ್ಲಿ ಗಾಂಧೀಜಿ ಅವರ ಸಮಾಧಿಗೆ ಪುಷ್ಪಾರ್ಪಣೆ ಮಾಡಿದ ನಗರದ ಹಿರಿಯರು, ಲೇಖಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಾರ್ಯಕ್ರಮ ಜರುಗುವ ರಾಘವ ಕಲಾ ಮಂದಿರದ ವರೆಗೆ ಲೋಹಿಯಾ ಪ್ರಕಾಶನದ ಪುಸ್ತಕಗಳನ್ನು ಹೊತ್ತು ಮೆರವಣಿಗೆಯಲ್ಲಿ ಬಂದರು.

ಹಿರಿಯ ಲೇಖಕ ಗಂಗಾಧರ ಪತ್ತಾರ, ಹಿರಿಯ ವಕೀಲ ಉಡೇದ ಬಸವರಾಜ, ಚೋರನೂರು ಕೊಟ್ರಪ್ಪ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಯಶ್ವಂತರಾಜ್ ನಾಗಿರೆಡ್ಡಿ, ಲೇಖಕ ಡಾ. ಅರವಿಂದ ಪಾಟೀಲ್, ವೀರೇಂದ್ರ ರಾವಿಹಾಳ್, ಅಜಯ್ ಬಣಕಾರ, ಸಿದ್ಧರಾಮ ಕಲ್ಮಠ, ಪ್ರಭುದೇವ ಕಪ್ಪಗಲ್ಲು, ಕಲ್ಲುಕಂಬ ಪಂಪಾಪತಿ, ಸಂಡೂರು ವಿರಕ್ತಮಠದ ಪ್ರಭುಸ್ವಾಮಿ, ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ, ಎಂ.ಜಿ. ಗೌಡ, ರಮಣಪ್ಪ ಭಜಂತ್ರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.