ಸಾರಾಂಶ
- ಭೂತರಾಯ ದೇಗುಲ, ಯತ್ನಶಾಲೆ ಅಭಿವೃದ್ಧಿಗೆ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಅಡ್ಡಿ । ಕೋಟೆ ಪ್ರದೇಶ ಒತ್ತುವರಿ
- - - ಬಾ.ರಾ.ಮಹೇಶ್, ಚನ್ನಗಿರಿಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಇತಿಹಾಸ ಪ್ರಸಿದ್ಧ ಕೆಳದಿ ರಾಣಿ ಚನ್ನಮ್ಮ ಆಳಿದ ಕೋಟೆಯಲ್ಲಿ ನೆಲೆಸಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಅಧೀನಕ್ಕೆ ಒಳಪಟ್ಟ ಭೂತರಾಯನ ದೇವಾಲಯ, ಯಜ್ಞಶಾಲೆ, ರಥರ ಮನೆ ಶಿಥಿಲಗೊಂಡು ಬೀಳುವ ಹಂತದಲ್ಲಿದೆ. ಈ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದರೂ ಅಭಿವೃದ್ಧಿ ವಂಚಿತವಾಗಿದೆ.ಈ ಕೋಟೆ ಪ್ರಾಚ್ಯವಸ್ತು ಪುರಾತತ್ವ ಇಲಾಖೆಗೆ ಸೇರಿದ್ದರೆ, ಕೋಟೆಯ ದೇವಾಲಯ ರಾಜ್ಯ ಮುಜರಾಯಿ ಇಲಾಖೆಗೆ ಸೇರಿದೆ. ಈ ಎರಡೂ ಇಲಾಖೆಗಳ ಸಮನ್ವಯತೆ ಕೊರತೆ ಹಿನ್ನೆಲೆ ಕೋಟೆ ಮತ್ತು ದೇವಾಲಯಗಳು ಶಿಥಿಲಗೊಳ್ಳುತ್ತಿದ್ದು, ಸಂರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕಾಗಿದೆ.
ಕೋಟೆಯಲ್ಲಿ ಶ್ರೀ ರಂಗನಾಥ, ಶ್ರೀಭೂತರಾಯನ ದೇವಾಲಯವಿದೆ. ಭೂತರಾಯನ ದೇವಾಲಯದ ಮೇಲ್ಚಾವಣಿ ಶಿಥಿಲಗೊಂಡು ಗಾರೆಯ ಚಕ್ಕಳ ಬೀಳುತ್ತಿದೆ. ರಂಗನಾಥ ದೇವಾಲಯ ಪಕ್ಕದಲ್ಲಿಯೇ ಯಜ್ಞಶಾಲೆ ಇದೆ. ದೇವಾಲಯದ ಎಲ್ಲ ಧಾರ್ಮಿಕ ಕಾರ್ಯಗಳು ಇದೇ ಯಜ್ಞಶಾಲೆಯಲ್ಲಿ ನಡೆಯುತ್ತವೆ. ಈ ಯಜ್ಞಶಾಲೆಯ ಮಹಡಿ ಗೋಡೆ ಬಿದ್ದುಹೋಗಿದ್ದು, ಮೇಲ್ಚಾವಣಿ ಹಂಚುಗಳೆಲ್ಲಾ ಹೊಡೆದುಹೋಗಿ, ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಡುತ್ತಿದೆ.ದೇವಾಲಯದ ಭಕ್ತಾಧಿಗಳೇ ಒಂದು ಸಮಿತಿ ರಚಿಸಿಕೊಂಡಿದ್ದಾರೆ. ದೇವಾಲಯ ಅಭಿವೃದ್ಧಿ ಮತ್ತು ದೇವಾಲಯದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೋಟೆಯ ಶ್ರೀ ಭೂತರಾಯನ ದೇವಾಲಯ ಮತ್ತು ಯಜ್ಞಶಾಲೆ ಅಭಿವೃದ್ಧಿಗೆ ಭಕ್ತರಿಂದಲೇ ವಂತಿಕೆ ಸಂಗ್ರಹಿಸಿ, ಅಭಿವೃದ್ಧಿಪಡಿಸಲು ಮುಂದಾದರೆ ಅದು ಫಲ ನೀಡುತ್ತಿಲ್ಲ. ಕೋಟೆಯಲ್ಲಿರುವ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಕಾವಲು ಸಿಬ್ಬಂದಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಚಿತ್ರದುರ್ಗದ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಕಂಡು ಅಧಿಕಾರಿಯಿಂದ ದೇವಾಲಯ ದುರಸ್ತಿಪಡಿಸಲು ಅನುಮತಿ ಪತ್ರ ತೆಗೆದುಕೊಂಡು ಬಂದರೂ ಪುರಾತತ್ವ ಇಲಾಖೆ ಸಿಬ್ಬಂದಿ ಕಾಮಗಾರಿ ನಡೆಸಲು ಬಿಡುತ್ತಿಲ್ಲ ಎಂಬುದು ಭಕ್ತ ರಾಜಣ್ಣ ಅವರ ದೂರು.
ಇನ್ನು ಈ ಕೋಟೆ ಸುತ್ತಲಿನ ಪ್ರದೇಶ ಒತ್ತುವರಿ ಆಗುತ್ತಿದೆ. ಕೋಟೆಗೆ ಹಾಕಿರುವ ರಕ್ಷಣಾ ತಡೆಬೇಲಿಯ ಒಳಗಡೆಯೇ ಮನೆಗಳನ್ನು ಮತ್ತು ಹಂದಿಗಳನ್ನು ಸಾಕಣೆ ಮಾಡುವ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಕೋಟೆಯ ಸುತ್ತಲೂ 300 ಮೀಟರ್ ಅಂತರದಲ್ಲಿ ಯಾವುದೇ ಮನೆಗಳನ್ನು ಮತ್ತು ಬಹು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಬಾರದು ಎಂಬ ನಿಯಮಗಳಿವೆ. ಆದರೆ, ಈ ನಿಯಮಗಳು ಕಡತಕ್ಕೆ ಮಾತ್ರ ಸೀಮಿತವಾಗಿವೆ. ಇಲ್ಲಿರುವ ಸಿಬ್ಬಂದಿ ಜನರಿಂದ ಹಣ ಪಡೆದು ಕೋಟೆಯ ಜಾಗ ಒತ್ತುವರಿ ಮಾಡಿಕೊಳ್ಳಲು ಬಿಡುತ್ತಿದ್ದಾರೆ ಎಂಬುದು ಭಕ್ತರಾದ ಬುಳ್ಳಿ ನಾಗರಾಜ್, ನಟರಾಜ್, ರಾಜಣ್ಣ, ಸಿ.ಆರ್. ಸೋಮಶೇಖರ್ ಆರೋಪಿಸುತ್ತಾರೆ.ಚನ್ನಗಿರಿ ಕೋಟೆಯ ಸುತ್ತಲೂ ಸ್ವಚ್ಛತೆ ಮರೀಚಿಕೆಯಾಗಿದೆ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಕವರುಗಳು ಎಸೆದಿರುವುದು ಕಾಣುತ್ತದೆ. ಭಕ್ತರು ಹೇಳುವಂತೆ ಈ ದೇವಾಲಯಕ್ಕೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಭಕ್ತರು ಬರುತ್ತಾರೆ. ಕೋಟೆಯ ಕಾವಲುಗಾರರು ಸಂಜೆ 6 ಗಂಟೆಗೆ ಕೋಟೆ ಮುಖ್ಯದ್ವಾರಗಳಿಗೆ ಬೀಗ ಹಾಕಿಕೊಂಡು ಹೋಗುತ್ತಾರೆ. ಇದರಿಂದ ದೇವಾಲಯದ ಅರ್ಚಕರಾಗಲಿ, ಭಕ್ತರಿಗಾಗಲಿ ಸಂಜೆ ಹೊತ್ತು ಕೋಟೆಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಪ್ರಾಚ್ಯವಸ್ತು ಪುರಾತತ್ವ ಇಲಾಖೆಯವರು ಕೋಟೆ ಕಾಯುವ ನೆಪದಲ್ಲಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪಗಳಿವೆ.
- - -(ಕೋಟ್)
ದೇವಾಲಯ ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಶಿಥಿಲ ದೇವಾಲಯ ದುರಸ್ತಿಪಡಿಸುವ ಬಗ್ಗೆ ತಾಲೂಕು ಮುಜರಾಯಿ ಇಲಾಖೆ ಅಧಿಕಾರಿಯೂ ಆಗಿರುವ ತಹಸೀಲ್ದಾರ್ ಅವರಿಗೆ ಮನವಿ ಮಾಡಿ, 2 ವರ್ಷಗಳೇ ಕಳೆಯುತ್ತಿವೆ. ಆದರೆ, ಇದುವರೆಗೂ ಸರ್ಕಾರ ಗಮನಹರಿಸಿಲ್ಲ.- ಜಿ.ಎ.ನಟರಾಜ್, ಮಾಜಿ ಸದಸ್ಯ, ಪುರಸಭೆ
- - --14ಕೆಸಿಎನ್‌ಜಿ1: ಚನ್ನಗಿರಿ ಕೋಟೆಯಲ್ಲಿರುವ ಭೂತರಾಯ ದೇವಾಲಯ ಮೇಲ್ಚಾವಣಿ ಶಿಥಿಲಗೊಂಡಿರುವುದು.-14ಕೆಸಿಎನ್‌ಜಿ2, 3: ಪಾಳುಬಿದ್ದಿರುವ ಯಜ್ಞಶಾಲೆ.
-14ಕೆಸಿಎನ್‌ಜಿ4: ಕೋಟೆಯ ರಕ್ಷಣಾ ಬೇಲಿ ಒಳಭಾಗದಲ್ಲಿ ನಿರ್ಮಿಸಿರುವ ಮನೆಗಳು, ಹಂದಿ ಸಾಕಾಣಿಕೆಯ ಶೆಡ್‌ಗಳು.-14ಕೆಸಿಎನ್‌ಜಿ5: ಕೋಟೆಯಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ.