ಸಾರಾಂಶ
- ಅಭಿವೃದ್ಧಿಗೆ ಗಮನಹರಿಸಲು ಶಾಸಕ ಬಸವರಾಜಗೆ ಅಣ್ಣ ಶ್ರೀನಿವಾಸ ಶಿವಗಂಗಾ ತಾಕೀತು
- - - ಕನ್ನಡಪ್ರಭ ವಾರ್ತೆ ದಾವಣಗೆರೆಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಬಗ್ಗೆ ಪತ್ರ ಬರೆಯುವುದನ್ನು ಬಿಟ್ಟು, ನಿಮ್ಮ ಕ್ಷೇತ್ರ ಅಭಿವೃದ್ಧಿ ಕಾರ್ಯಗಳ ಕಡೆಗೆ ಮೊದಲು ಗಮನಹರಿಸುವಂತೆ ಶಾಸಕ ಶಿವಗಂಗಾ ವಿ.ಬಸವರಾಜ ಅವರಿಗೆ ಹಿರಿಯಣ್ಣ, ಯುವ ಉದ್ಯಮಿ ಶ್ರೀನಿವಾಸ ವಿ. ಶಿವಗಂಗಾ ಬುದ್ಧಿಮಾತು ಹೇಳಿದ್ದಾರೆ.
ದೊಡ್ಡವರ ಬಗ್ಗೆ ಗೌರವದಿಂದ ವರ್ತಿಸುವುದನ್ನು ಮೊದಲು ಕಲಿಯಬೇಕು. ಅದನ್ನು ಬಿಟ್ಟು ಸಚಿವ ಮಲ್ಲಿಕಾರ್ಜುನರ ಬಗ್ಗೆ ಹೈಕಮಾಂಡ್‌ಗೆ ಪತ್ರ ಬರೆದರೆ, ನೀವೇನೂ ದೊಡ್ಡವರಾಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಶಾಮನೂರು ಶಿವಶಂಕರಪ್ಪ ಕುಟುಂಬದವರು ಎಷ್ಟು ಸೇವೆ ಸಲ್ಲಿಸಿದ್ದಾರೆಂಬುದೂ ಗೊತ್ತಿದೆ ಎಂದು ಸಹೋದರ ಬಸವರಾಜಗೆ ಪಾಠ ಮಾಡಿದ್ದಾರೆ.ಚನ್ನಗಿರಿ ಕ್ಷೇತ್ರದ ಮತದಾರರು ಕರೆ ಮಾಡಿದರೆ ಕರೆ ಸ್ವೀಕರಿಸಿ, ಜನರ ಸಮಸ್ಯೆಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ನಾಲ್ಕು ದಿನ ಬೆಂಗಳೂರು, 2 ದಿನ ಟ್ರಿಪ್ ಅಂತಾ ಸುತ್ತಾಡುವುದನ್ನು ಬಿಡಿ. 24*7 ಕ್ಷೇತ್ರದ ಜನರ ಜೊತೆ ಇರುವುದನ್ನು ರೂಢಿಸಿಕೊಳ್ಳಿ. ಸಚಿವ ಮಲ್ಲಿಕಾರ್ಜುನರ ಜೊತೆ ಮುಕ್ತವಾಗಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಹರಿಸಿ. ಚುನಾವಣೆ ವೇಳೆ ಕ್ಷೇತ್ರದ ಜನರಿಗೆ ನೀಡಿದ ಮಾತನ್ನ ಉಳಿಸಿಕೊಳ್ಳಿ. ಸಚಿವರ ಬಗ್ಗೆ ಹಗುರ ಮಾತನಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನೀವು ರಾಜಕೀಯಕ್ಕೆ ಪ್ರವೇಶಿಸಲು ನಾನೇ ಕಾರಣ ಅನ್ನೋದನ್ನೂ ಶಾಸಕರು ಮರೆಯಬಾರದು. ಈ ಹಿಂದೆ ದಾವಣಗೆರೆ ಪಾಲಿಕೆ ಚುನಾವಣೆಗೆ ನಿಮಗೆ ಟಿಕೆಟ್ ತಂದವರು ಯಾರು? ಇದೇ ಎಸ್.ಎಸ್. ಮಲ್ಲಿಕಾರ್ಜುನ ಅವರ ಬಳಿ ಅಂಗಲಾಚಿ ಟಿಕೆಟ್ ಕೊಡಿಸಿದ್ದು ನಾನು. ನಿಮ್ಮ ಗೆಲುವಿಗೆ ಸಚಿವರು, ನಾನೂ ಶ್ರಮ ಪಟ್ಟಿದ್ದೇವೆ. ಇದನ್ನೆಲ್ಲಾ ಮರೆತು ಶಾಸಕರಾದ ನಂತರ ಸಚಿವರ ಬಗ್ಗೆಯೇ ಹಗುರ ಮಾತು ಸರಿಯಲ್ಲ. ಈ ಹಿಂದೆಯೂ ಎಸ್ಸೆಸ್ಸೆಂ ಅವರ ಬಗ್ಗೆ ಹಗುರ ಮಾತನಾಡಿದ್ದು, ಆಗಲೇ ನಾವು ಎಚ್ಚರಿಸಿದ್ದೇವೆ ಎಂದಿದ್ದಾರೆ.ಎಸ್.ಎಸ್. ಮಲ್ಲಿಕಾರ್ಜುನ ನಮ್ಮ ಹುಡುಗರೇ ಅಂತಲೇ ನಿಮ್ಮ ತಪ್ಪನ್ನು ಸಹ ಕ್ಷಮಿಸಿದ್ದರು. ಆದರೆ, ಯಾರದ್ದೋ ಕುಮ್ಮಕ್ಕಿನಿಂದ ಪದೇಪದೇ ಸಚಿವರ ಬಗ್ಗೆ ಮಾತನಾಡಿ, ನಮ್ಮ ಮತ್ತು ಸಚಿವರ ಮಧ್ಯೆ ಇರುವ ಸಹೋದರ ಬಾಂಧವ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಚನ್ನಗಿರಿ ಶಾಸಕರಾಗಿ ಮಾಡುತ್ತಿರುವುದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ. ನಿಮ್ಮ ವರ್ತನೆ ತಿದ್ದಿಕೊಂಡು, ಮಾತುಗಳ ಮೇಲೆ ಹಿಡಿತ ಹೊಂದುವಂತೆ ಚನ್ನಗಿರಿ ಶಾಸಕ ಬಸವರಾಜಗೆ ಅಣ್ಣ ಶ್ರೀನಿವಾಸ ಸಲಹೆ ನೀಡಿದ್ದಾರೆ.
- - - -20ಕೆಡಿವಿಜಿ7: ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ-20ಕೆಡಿವಿಜಿ8: ಶ್ರೀನಿವಾಸ ಶಿವಗಂಗಾ