ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕುಡಿಯುವ ನೀರು, ಕಸ ವಿಲೇವಾರಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ನಿರ್ವಹಣೆಯಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿ ವತಿಯಿಂದ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

- ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಆಕ್ರೋಶ । ರಸ್ತೆ ತಡೆಯಿಂದಾಗಿ ಕಿ.ಮೀ.ವರೆಗೆ ಸಾಲುಗಟ್ಟಿದ ವಾಹನಗಳು

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕುಡಿಯುವ ನೀರು, ಕಸ ವಿಲೇವಾರಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ನಿರ್ವಹಣೆಯಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿ ವತಿಯಿಂದ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಚನ್ನಗಿರಿ ತಾಲೂಕು ಬರದ ಪಟ್ಟಿಯಲ್ಲಿ ಸೇರಿದ್ದು, ಬರ ನಿರ್ವಹಣೆಗೆ ₹1 ಕೋಟಿ ಸರ್ಕಾರ ಮಂಜೂರು ಮಾಡಿದೆ. ಆದರೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕುಡಿಯುವ ನೀರಿಗೆ ಜನರು ಪರಿತಪ್ಪಿಸುತ್ತಿದ್ದಾರೆ. ಪುಟ್ಟಬಸಪ್ಪನ ಕೆರೆ, ದಿಗ್ಗೇನಹಳ್ಳಿ ರಸ್ತೆ, ಬುಸ್ಸೇನಹಳ್ಳಿ ರಸ್ತೆಗಳಲ್ಲಿ ಕಸದ ರಾಶಿಯೇ ತುಂಬಿಕೊಂಡಿ. ಇದರಿಂದ ಪಟ್ಟಣಕ್ಕೆ ಬರುವ ಜನರು ಮೂಗು ಮುಚ್ಚಿಕೊಂಡು ಸಂಚರಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

ಪಟ್ಟಣದ ಎಲ್ಲ ಚರಂಡಿಗಳಲ್ಲಿ ಕಸ-ಕಡ್ಡಿಗಳು ಕಟ್ಟಿಕೊಂಡು ಹೂಳು ತುಂಬಿದ್ದು, ಮಳೆನೀರು ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದರೂ, ಸೂಕ್ತ ಕ್ರಮ ಕೈಗೊಳ್ಳದೇ ಚನ್ನಗಿರಿ ಪುರಸಭೆ ನಿರ್ಲಕ್ಷ ವಹಿಸಿದೆ. ಪಟ್ಟಣದ ಜನತೆಗೆ ಮೂಲಸೌಲಭ್ಯಗಳನ್ನು ಕೊಡುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರು ಚನ್ನಗಿರಿ ಪಟ್ಟಣ ಸೇರಿದಂತೆ ಇತರೆ 80 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿದ್ದರು. ಸುಮಾರು 20 ವರ್ಷಗಳ ಹಳೆಯದಾದ ಮೋಟಾರನ್ನು ದುರಸ್ತಿಪಡಿಸಲು ಈಗಿನ ಕ್ಷೇತ್ರದ ಶಾಸಕರ ಕೈಯಲ್ಲಿ ಆಗುತ್ತಿಲ್ಲ ಮುಖ್ಯಮಂತ್ರಿ ಬಲಗೈ ಬಂಟ ಎಂದು ಹೇಳಿಕೊಂಡು ಮಾಧ್ಯಮಗಳ ಮುಂದೆ ಪ್ರಚಾರ ಪಡೆಯುವ ಬದಲು ಕ್ಷೇತ್ರದ ಜನರ ಕಷ್ಟಗಳಿಗೆ ಸ್ಫಂದಿಸಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಬರುತ್ತದೆ ಎಂದು ನಮ್ಮ ಬಗ್ಗೆ ಇಲ್ಲಸಲ್ಲದ ಅಪ ಪ್ರಚಾರಗಳನ್ನು ಮಾಡಿಕೊಂಡು ಕ್ಷೇತ್ರದಲ್ಲಿ ತಿರುಗುತ್ತಿದ್ದಾರೆ. ಕ್ಷೇತ್ರದ ಜನರಿಗೆ ಮಂಕುಬೂದಿ ಎರಚಲು ಸಾಧ್ಯವಿಲ್ಲ. ಎಲ್ಲ ಹಳ್ಳಿಗಳಲ್ಲಿ ಇಸ್ಪೀಟ್ ಅಡ್ಡಗಳು ಪ್ರಾರಂಭವಾಗಿವೆ. ಇದರಿಂದ ಯುವಜನತೆ ಕೋಟ್ಯಂತರ ರು. ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್ ಗೇಮಿಗೆ ಒಳಗಾಗಿ ಅಪ್ರಾಪ್ತ ಆತ್ಮಹತ್ಯೆ ಮಾಡಿಕೊಂಡಿದ್ದು, ಜೂಜಾಟ ಎನ್ನುವುದು ತಾಲೂಕಿನಲ್ಲಿ ಮನೆಮಾಡಿದೆ. ಇದಕ್ಕೆ ಪೊಲೀಸ್ ಇಲಾಖೆ 24 ಗಂಟೆಗಳ ಒಳಗೆ ಕಡಿವಾಳ ಹಾಕದೇ ಇದ್ದರೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕಿನ ಎರಡು ಏತನೀರಾವರಿ ಯೋಜನೆಗಳ ಸಮರ್ಪಕ ನಿರ್ವಹಣೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ತಾಲೂಕಿನ ಕೆಲ ಕೆರೆಗಳಿಗೆ ಇದುವರೆಗೂ ನೀರೇ ಬಂದಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸದೇ ವಂಚಿಸಲಾಗುತ್ತಿದೆ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್ ಎನ್.ಜೆ.ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಜೆ.ವಿ.ಮಂಜುನಾಥ್, ತಾಪಂ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್, ಸಿಪಿಐ ರವೀಶ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಲೋಹಿತ್ ಆಗಮಿಸಿ, ಮನವಿ ಆಲಿಸಿದರು. ಭರವಸೆ ಮೇರೆಗೆ ಪ್ರತಿಭಟನೆ ಕೈ ಬಿಡಲಾಯಿತು.

ಗಾಂಧಿ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ, 1 ಕಿ.ಮೀ.ಗೂ ಹೆಚ್ಚು ದೂರದವರೆಗೆ ವಾಹನಗಳು ನಿಂತಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಯಿತು.

ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ.ಕುಮಾರಸ್ವಾಮಿ, ಪಕ್ಷದ ಮುಖಂಡರಾದ ಪಿ.ಬಿ.ನಾಯಕ, ಕಾಯಿ ಮಂಜುನಾಥ್, ಕುಬೇಂದ್ರೋಜಿ ರಾವ್, ಗೌ.ಹಾಲೇಶ್, ಬುಳ್ಳಿ ನಾಗರಾಜ್, ಮಾಲತೇಶ್, ಸಿ.ಎಂ.ಗುರುಸಿದ್ದಯ್ಯ, ತರಕಾರಿ ಮಂಜು, ಪಟ್ಲಿ ನಾಗರಾಜ್, ಮೊಟ್ಟೆ ಚಿಕ್ಕಣ್ಣ, ಪಾರಿ ಪರಮೇಶ್, ನಾಗರಾಜ್, ಶಶಿಕಲಾ ನಾಗರಾಜ್, ದೇವರಹಳ್ಳಿ ಎ.ಎಸ್. ಬಸವರಾಜ್, ಕಿರಣ್ ಕೋರಿ ಪ್ರಸಾದ್, ದೇವರಹಳ್ಳಿ ರಾಕೇಶ್, ಮರಡಿ ರಮೇಶ್, ತೋಟದ ಮನೆ ಮಂಜಣ್ಣ, ಎಲ್.ಎಂ.ರೇಣುಕಪ್ಪ, ಉಮಾರಾಜಣ್ಣ, ಹನುಮಂತ್ ಮಡಿವಾಳ್, ಜೆ.ದರ್ಶನ್, ಮಾಚನಾಯ್ಕನಹಳ್ಳಿ ಪುನೀತ್, ರಾಘವೇಂದ್ರ ಶೆಟ್ರು, ಜಯಣ್ಣ, ಕೆ.ಪಿ.ಎಂ. ಲತಾ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

- - -

(ಬಾಕ್ಸ್‌)

* ಸಮಸ್ಯೆಗಳ ಸರಿಪಡಿಸಲು ಅಗತ್ಯ ಕ್ರಮ: ಎಸಿ ಭರವಸೆ

ಉಪವಿಭಾಗಾಧಿಕಾರಿ ಚನ್ನಪ್ಪ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸ್ವಚ್ಛತೆ, ಕುಡಿಯುವ ನೀರಿನ ನಿರ್ವಹಣೆ ಬಗ್ಗೆ ಸರಿಪಡಿಸುವಂತೆ ಈ ದಿನವೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಿದ್ದೇವೆ. ಅಕ್ರಮ ಜೂಜಾಟದ ಬಗ್ಗೆ. ಸಮರ್ಪಕ ವಿದ್ಯುತ್ ವಿತರಣೆಯ ಬಗ್ಗೆ ಶೀಘ್ರ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಕುಡಿಯುವ ನೀರು ಸಮರ್ಪಕ ವಿತರಣೆಯಲ್ಲಿ ಆಗಿರುವ ತಾಂತ್ರಿಕ ತೊಂದರೆ ಸರಿಪಡಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸರ್ಕಾರದಿಂದ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

- - -

-22ಕೆಸಿಎನ್ಜಿ1: ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮೂಲಸೌಲಭ್ಯ ಕಲ್ಪಿಸದ ತಾಲೂಕು ಆಡಳಿತ ವಿರುದ್ಧ ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

-22ಕೆಸಿಎನ್ಜಿ2: ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಎಸಿ ಚನ್ನಪ್ಪ, ತಹಸೀಲ್ದಾರ್ ಎನ್.ಜೆ.ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಜೆ.ವಿ.ಮಂಜುನಾಥ್, ತಾಪಂ ಇಒ ಪ್ರಕಾಶ್, ಸಿಪಿಐ ರವೀಶ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಲೋಹಿತ್ ಆಗಮಿಸಿ ಅಹವಾಲು ಸ್ವೀಕರಿಸಿದರು.