ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವೀರ ರಾಣಿ ಕಿತ್ತೂರು ಚನ್ನಮ್ಮ ಇತಿಹಾಸದ ಪುಟಗಳಲ್ಲಿ ಶೌರ್ಯದ ಪ್ರತೀಕವಾಗಿ ಗುರುತಿಸಲ್ಪಟ್ಟಿರುವ ವೀರ ಮಹಿಳೆ. ಬ್ರಿಟೀಷರ ವಿರುದ್ಧ ಸಮರಸಾರಿ ಇಡೀ ದೇಶವೇ ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕುವಂತೆ ಪ್ರೇರಣೆ ನೀಡಿದ ರಾಣಿ ಚನ್ನಮ್ಮಳ ಇತಿಹಾಸ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ವಿಜಯಪುರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ನಡೆದ ಕಿತ್ತೂರ ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆ ವಿರುದ್ಧ ಹೋರಾಡಿ, ಸಹಾಯಕ ಸೈನ್ಯ ಪದ್ಧತಿಯನ್ನು ತಿರಸ್ಕರಿಸಿದ ಚನ್ನಮ್ಮಳ ಧೈರ್ಯವನ್ನು ಇಂದಿನ ಹೆಣ್ಣುಮಕ್ಕಳು ಅರಿಯಬೇಕು ಎಂದರು.ಇತಿಹಾಸ ಅರಿತವರು ಇತಿಹಾಸ ನಿರ್ಮಿಸುತ್ತಾರೆ ಎಂಬಂತೆ ಇಂದಿನ ಪೀಳಿಗೆಗೆ ಚನ್ನಮ್ಮಳ ಇತಿಹಾಸದ ಪರಿಚಯ ಮಾಡಿಸುವುದು ಅತ್ಯವಶ್ಯಕವಾಗಿದೆ. ಚನ್ನಮ್ಮ ಸಂಸ್ಥಾನದ ಅಭಿವೃದ್ಧಿ ಜೊತೆಗೆ ಜನರ ಕಷ್ಟಕಾರ್ಪಣ್ಯ ದೂರಮಾಡಲು ಶ್ರಮಿಸಿದರು. ಅನೇಕ ಜನಪದ ಲಾವಣಿಗಳಲ್ಲಿ ಚನ್ನಮ್ಮಳ ಸಾಹಸಗಾಥೆ, ಜೀವನ ಚರಿತ್ರೆ ಇಂದಿಗೂ ಜನಮಾನಸದಲ್ಲಿ ನೆಲೆನಿಂತಿವೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಬಾಲ್ಯದಲ್ಲಿಯೇ ಬಿಲ್ಲುಬಾಣ, ಕುದುರೆ ಸವಾರಿ, ಕತ್ತಿ ವರಸೆಯಂತಹ ಯುದ್ಧಕಲೆ ಕಲಿತ ಚನ್ನಮ್ಮ ತಾಯ್ನಾಡಿನ ರಕ್ಷಣೆಗೆ ಬ್ರಿಟಿಷರು ನೀಡಿದ ಸಂಕಷ್ಟದ ಸರಮಾಲೆಗಳನ್ನು ದಿಟ್ಟತನದಿಂದ ಎದುರಿಸಿದ ಧೀರ ಮಹಿಳೆ. ಅವರ ಆದರ್ಶಗಳನ್ನು ನಾವೆಲ್ಲ ಪಾಲಿಸಬೇಕು ಎಂದು ಹೇಳಿದರು.ಅಂಜುಮನ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಉಜ್ವಲ ಸರನಾಡಗೌಡ ಉಪನ್ಯಾಸ ನೀಡಿದರು.ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುಖಂಡ ಬಿ.ಎಂ.ಪಾಟೀಲ ಉಪಸ್ಥಿತರಿದ್ದರು.
ಅದ್ಧೂರಿ ಮೆರವಣಿಗೆ:ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಚನ್ನಮ್ಮ ಭಾವಚಿತ್ರದ ಮೆರವಣಿಗೆಗೆ ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿಗಳ ಸಾನಿಧ್ಯದಲ್ಲಿ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ ನೀಡಿದರು. ವಿವಿಧ ವಾಧ್ಯಮೇಳ ಕಲಾತಂಡಗಳ ಜೊತೆಗೆ ಮೆರವಣಿಯೂ ನಗರದ ಲಾಲ್ ಬಹದ್ದೂರ ಶಾಸ್ತ್ರಿ ಮಾರುಕಟ್ಟೆ ರಸ್ತೆಯ ಮಾರ್ಗವಾಗಿ, ಕನಕದಾಸ ವೃತ್ತದ ಮೂಲಕ ರಂಗಮಂದಿರ ತಲುಪಿತು.
ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರಾದ ಗೀತಾಂಜಲಿ ಪಾಟೀಲ, ಡಾ.ಸುರೇಶ ಬಿರಾದಾರ, ಡಾ.ಮಿನಾಕ್ಷಿ ಪಾಟೀಲ, ವಿದ್ಯಾರಾಣಿ ತುಂಗಳ, ಗುರುಶಾಂತ ನಿಡೋಣಿ, ವಿದ್ಯಾವತಿ ಅಂಕಲಗಿ, ಈರಣ್ಣ ಹಿಪ್ಪರಗಿ, ಎಸ್.ಐ.ಬಿರಾದಾರ, ಆರ್.ಡಿ.ಸಾರವಾಡ, ಎಸ್.ವಿ.ಪಾಟೀಲ, ಆರ್.ಡಿ.ದೇಸಾಯಿ, ಎಂ.ಎಸ್.ಹಾಲಹಳ್ಳಿ, ನಿಂಗಪ್ಪ ಸಂಗಾಪೂರ, ಮಹಾದೇವಿ, ಲಲಿತಾ ಬಿರಾದಾರ, ಶೋಭಾ ಬಿರಾದಾರ, ಗಂಗೂ ಬಿರಾದಾರ, ಜ್ಯೋತಿ ಪಾಗದ, ಬಸಮ್ಮ ಗುಜರಿ, ಎಂ.ಎ.ಪಾಟೀಲ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗೆ, ದೇವೆಂದ್ರ ಮೆರೆಕಾರ ಉಪಸ್ಥಿತರಿದ್ದರು.ಅಶ್ವಿನಿ ಹಿರೇಮಠ ತಂಡದಿಂದ ಸುಗಮ ಸಂಗೀತ ನಡೆಯಿತು. ಎಚ್.ಎ.ಮಮದಾಪೂರ ನಿರೂಪಿಸಿದರು.