ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವೀರ ರಾಣಿ ಕಿತ್ತೂರು ಚನ್ನಮ್ಮಾಜಿ ಬ್ರಿಟಿಷರೊಡನೆ ರಾಜಿ ಮಾಡಿಕೊಳ್ಳದೆ ಕೆಚ್ಚೆದೆಯ ಹೋರಾಟ ಮಾಡಿರುವುದು ಅವರ ದೇಶ ಪ್ರೇಮ, ನಿಷ್ಠೆ, ತ್ಯಾಗ, ಬಲಿದಾನ, ಶೌರ್ಯ, ಸಾಹಸದ ಪ್ರತೀಕವಾಗಿದೆ. ಈ ಹೋರಾಟದ ಪ್ರೇರಣೆಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮಾ ಸಮಾಧಿ ರಸ್ತೆಯಲ್ಲಿ ರಾಣಿ ಚನ್ಮಮ್ಮಾಜಿ 200ನೇ ವರ್ಷದ ವಿಜಯೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಬೈಲಹೊಂಗಲ ಉತ್ಸವ-2024 ಉದ್ಘಾಟಿಸಿ ಮಾತನಾಡಿದ ಅವರು,ಪ್ರತಿವರ್ಷ ಕಿತ್ತೂರು ರಾಣಿ ಚನ್ನಮ್ಮಾಜಿ ಗೆಲುವಿನ ಸವಿನೆನಪಿಗಾಗಿ ಚನ್ನಮ್ಮನ ಕಿತ್ತೂರಿನಲ್ಲಿ ಕಿತ್ತೂರು ಉತ್ಸವ, ಕಾಕತಿಯಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗಿತ್ತು. ಈ ವರ್ಷ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಮುಖಂಡರ ಬೇಡಿಕೆಯಂತೆ ಬೈಲಹೊಂಗಲದಲ್ಲಿಯೂ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು, ಕಿತ್ತೂರಲ್ಲಿ ನಡೆದ ಉತ್ಸವದಲ್ಲಿ 8 ಲಕ್ಷ ಜನ ಭಾಗಿಯಾಗಿದ್ದು ವಿಶೇಷವಾಗಿದೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಚನ್ನಮ್ಮಾಜಿಯ ಸಮಾಧಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಈಗಾಗಲೇ ₹3 ಕೋಟಿ ವೆಚ್ಚದಲ್ಲಿ ಇಂದಿನ ಪೀಳಿಗೆಗೆ ಚನ್ನಮ್ಮಾಜಿಯ ಹುಟ್ಟಿನಿಂದ ಬಲಿದಾನದವರೆಗೆ ಇತಿಹಾಸ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಮಕ್ಕಳಲ್ಲಿ ದೇಶಪ್ರೇಮ, ದೇಶಾಭಿಮಾನ ಮೂಡಿಲಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬರುವ ದಿನಗಳಲ್ಲಿ ಈ ಕ್ಷೇತ್ರವನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿದರು. ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಬ್ರಹ್ಮಕುಮಾರಿ ಪ್ರಭಾ ಅಕ್ಕನವರು ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು.
ಶಾಸಕ ಬಾಬಾಸಾಹೇಬ ಪಾಟೀಲ, ಜಿಪಂ ಸಿಇಒ ರಾಹುಲ್ ಶಿಂಧೆ, ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ, ಡಿವೈಎಸ್ಪಿ ರವಿ ನಾಯಕ, ಗ್ರೇಡ್-2 ತಹಸೀಲ್ದಾರ ಚಿಕ್ಕಪ್ಪನಾಯಕ, ಪುರಸಭೆ ಅಧ್ಯಕ್ಷ ವಿಜಯ ಬೋಳಣ್ಣವರ ವೇದಿಕೆ ಮೇಲೆ ಇದ್ದರು.ತಹಸೀಲ್ದಾರ ಹನುಮಂತ ಶೀರಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕುಮಾರ ಕಡೇಮನಿ ನಾಡಗೀತೆ ಹಾಡಿದರು.ಚನ್ಮಮ್ಮಾಜಿಯ ಐಕ್ಯ ಸ್ಥಳದಲ್ಲಿ ೨೦೦ನೇ ವರ್ಷದ ವಿಜಯೋತ್ಸವ ಸಂಭ್ರಮ ಆಯೋಜಿಸಿದ್ದರಿಂದ ಚನ್ಮಮ್ಮಾಭಿಮಾನಿಗಳ ಕನಸು ನನಸಾಗಿದೆ. ಬ್ರಿಟಿಷರಿಗೆ ಮೊದಲ ಸೋಲುಣಿಸಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ಮಮ್ಮನ ಪುತ್ಥಳಿಯನ್ನು ಸಂಸತ್ ಭವನದ ಮುಂದೆ ಪ್ರತಿಷ್ಠಾಪಿಸಲಾಗಿದೆ. ಚನ್ನಮ್ಮ ರಾಣಿಯಾಗಿ ಉಳಿಯದೆ ವೀರರಾಣಿಯಾಗಿ ಇತಿಹಾಸ ನಿರ್ಮಿಸಿದ್ದು, ಸೂರ್ಯ ಚಂದ್ರರಿರುವರೆಗೂ ಅಜರಾಮರವಾಗಿದ್ದಾರೆ.. ಪ್ರತಿವರ್ಷ ಬೈಲಹೊಂಗಲದಲ್ಲೂ ಉತ್ಸವವಾಗಬೇಕು. ಚನ್ನಮ್ಮಾಜಿ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವಾಗಬೇಕು.
- ಬಸವಜಯಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ