ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ಚೆನ್ನನಕೆರೆ ಗ್ರಾಮದ ಪರಿಶಿಷ್ಟ ಸಮುದಾಯಕ್ಕೆ ಮೀಸಲಿರುವ ಸರ್ವೇ ನಂಬರ್ 78 ರಲ್ಲಿರುವ ಸ್ಮಶಾನದ ಜಾಗವನ್ನು ವ್ಯಕ್ತಿಯೊಬ್ಬ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಕೋಟ್ಯಂತರ ರು. ವಂಚಿಸುತ್ತಿದ್ದಾನೆ ಎಂದು ಆರೋಪಿಸಿ ಗುರುವಾರ ನಗರದಲ್ಲಿ ಚೆನ್ನನಕೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಗ್ರಾಮದಿಂದ ನಗರಕ್ಕೆ ಆಗಮಿಸಿದ ಮುಖಂಡರು, ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ಎದುರು ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಿದರು. ಜಕ್ಕನಹಳ್ಳಿಯ ಜೆ.ಆರ್.ಬಾಲಕೃಷ್ಣ ಎಂಬಾತನ ವಿರುದ್ಧ ಕ್ರಮ ಕೈಗೊಂಡು ತಮಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.
ಚೆನ್ನನಕೆರೆ ಗ್ರಾಮದ ಪರಿಶಿಷ್ಟ ಸಮುದಾಯದವರಿಗೆ ಅನುಕೂಲವಾಗಲೆಂದು ಸರ್ಕಾರ 1997-98ನೇ ಸಾಲಿನಲ್ಲಿ ಸರ್ವೇ ನಂಬರ್ 78 ರಲ್ಲಿ ಒಂದು ಎಕರೆ 19 ಗುಂಟೆ ಜಾಗವನ್ನು ಸ್ಮಶಾನಕ್ಕೆಂದು ಮಂಜೂರು ಮಾಡಿತ್ತು. ಆದರೆ, ಈ ಪ್ರದೇಶದ ಪಕ್ಕದಲ್ಲಿ ಜಕ್ಕನಹಳ್ಳಿ ಗ್ರಾಮದ ಜೆ.ಆರ್.ಬಾಲಕೃಷ್ಣರಿಗೆ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆಯಿಂದ ಸರ್ವೇ ನಂಬರ್ 78ರಲ್ಲಿ ಗಣಿಗಾರಿಕೆ ಮಾಡಲು SY.NO-78,QL333,&QL605 ಪರವಾನಗಿ ನೀಡಲಾಗಿತ್ತು. ಈತ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿಯಾಗಿ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ದೂರಿದರು.ಪರಿಶಿಷ್ಟ ಸಮುದಾಯಕ್ಕೆಂದು ಮೀಸಲಾಗಿರುವ ಸ್ಮಶಾನ ಜಾಗವನ್ನು ಯಾವುದೇ ನಿರ್ಭೀತಿಯಿಲ್ಲದೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಯಾವುದೇ ಲೈಸೆನ್ಸ್ ಇಲ್ಲದೇ ಸರ್ಕಾರಕ್ಕೆ ಸೇರಿದ 4 ರಿಂದ 5 ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈತ ಅನಧಿಕೃತ ಗಣಿಗಾರಿಕೆ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೇಸ್ ದಾಖಲು ಮಾಡಿದ್ದಾರೆ. ಆದಾಗ್ಯೂ ಜೆ.ಆರ್.ಬಾಲಕೃಷ್ಣ ಯಾವುದೇ ಹಿಂಜರಿಕೆಯಿಲ್ಲದೆ ಎಗ್ಗಿಲ್ಲದೆ ಗಣಗಾರಿಕೆ ಮಾಡುವ ಮೂಲಕ ಸರ್ಕಾರಕ್ಕೆ ಸೇರಬೇಕಾಗಿದ್ದ ಕೋಟ್ಯಂತರ ರು. ನಷ್ಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಚೆನ್ನನಕೆರೆ ಗ್ರಾಮದ ಡಾ.ಬಿ.ಅರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಂಗರಾಜ್ ಹಾಗೂ ಗ್ರಾಮಸ್ಥರು ಪ್ರಶ್ನಿಸಲು ಹೋದಾಗ ಸಾರ್ವಜನಿಕವಾಗಿ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಜೆ.ಆರ್.ಬಾಲಕೃಷ್ಣ ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಂಡು ಪರಿಶಿಷ್ಟ ಸಮುದಾಯಕ್ಕೆ ಸೇರಿದ 1.19 ಎಕರೆ ಸ್ಮಶಾನದ ಜಾಗವನ್ನು ಬಿಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ತುರ್ತಾಗಿ ಕ್ರಮ ವಹಿಸದಿದ್ದರೆ ಸಿಎಂ, ರಾಜ್ಯಪಾಲರು ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ಮಾತ್ರವಲ್ಲದೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಲಿಂಗರಾಜ್, ಆರ್.ಮಹದೇವ್, ಮದನ್, ಭರತ್, ಪ್ರಜ್ವಲ್, ಸಿ.ಎಲ್.ಕೃಷ್ಣ, ಸಿ.ಕೆ.ನಿಂಗರಾಜ್, ಮಹದೇವು, ಸಂತೋಷ್ ಸೇರಿದಂತೆ ಗ್ರಾಮಸ್ಥರು ಇದ್ದರು.