ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ಅರಕಲಗೂಡಲ್ಲಿ ರಾಮನ ಜಪ

| Published : Jan 23 2024, 01:49 AM IST

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ಅರಕಲಗೂಡಲ್ಲಿ ರಾಮನ ಜಪ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅರಕಲಗೂಡು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ರಾಮನಾಮ ಸ್ಮರಣೆ ವಿಜೃಂಭಣೆಯಿಂದ ನೆರವೇರಿತು. ವಿವಿಧ ದೇಗುಲಗಳಲ್ಲಿ ಪೂಜೆ ನೆರವೇರಿಸಿ, ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ ವಿತರಿಸಲಾಯಿತು. ಅಯೋಧ್ಯೆ ರಾಮನ ಭಿತ್ತಿಚಿತ್ರಗಳು ದೇಗುಲಗಳ ಬಳಿ ರಾರಾಜಿಸಿದವು. ಕೇವಲ ನಗರ ಪ್ರದೇಶಗಳಷ್ಟೇಯಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಭ್ರಮಿಸಲಾಯಿತು.

ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ । ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ । ಹಲವು ಗ್ರಾಮಗಳಲ್ಲಿ ರಾಮ ಮಂದಿರ ಶಿಲಾನ್ಯಾಸ । ಬೀದಿಗಳಲ್ಲಿ ರಾಮೋತ್ಸವಕನ್ನಡಪ್ರಭ ವಾರ್ತೆ ಅರಕಲಗೂಡು

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ರಾಮನಾಮ ಸ್ಮರಣೆ ವಿಜೃಂಭಣೆಯಿಂದ ನೆರವೇರಿತು.

ವಿವಿಧ ದೇಗುಲಗಳಲ್ಲಿ ಪೂಜೆ ನೆರವೇರಿಸಿ, ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ ವಿತರಿಸಲಾಯಿತು. ಅಯೋಧ್ಯೆ ರಾಮನ ಭಿತ್ತಿಚಿತ್ರಗಳು ದೇಗುಲಗಳ ಬಳಿ ರಾರಾಜಿಸಿದವು. ಕೇವಲ ನಗರ ಪ್ರದೇಶಗಳಷ್ಟೇಯಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಭ್ರಮಿಸಲಾಯಿತು.

ಕೋಟೆ ಕೋದಂಡ ರಾಮ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಬೆಳಿಗ್ಗೆ ಪಂಚಾಮೃತ ಅಭಿಷೇಕ. ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಸಾಮೂಹಿಕ ಭಜನೆ ನಡೆಸಿದರು. ಬಳಿಕ ಶ್ರೀರಾಮ, ಸೀತಾ, ಲಕ್ಷಣ, ಹನುಮಂತರ ಉತ್ಸವ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ಶ್ರೀರಾಮ ರಥೋತ್ಸವ ನಡೆಸಲಾಯಿತು. ಬಳಿಕ ಆಯೋದ್ಯೆಯಲ್ಲಿ ನಡೆದ ಪ್ರತಿಷ್ಠಾಪನಾ ಕಾರ್ಯದ ನೇರಪ್ರಸಾರವನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಬಳಿಕ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ ದೀಪೋತ್ಸವ ಹಾಗೂ ಭಜನೆ ನಡೆಯಿತು. ಪಾಳ್ಯಂ ಕೊಂಡಯ್ಯ ಶ್ರೇಷ್ಠಿ ಛತ್ರ ಮತ್ತು ದೇವಾಲಯದಲ್ಲಿ ರಾಮ ಪರಿವಾರಕ್ಕೆ ದೀಪಾರಾಧನೆ, ಪಂಚಾಮೃತ ಅಭೀಷೇಕ, ಕುಂಕುಮಾರ್ಚನೆ, ಪುಣ್ಯಾಹ, ಗಣಪತಿ ಪೂಜೆ, ನಾಂದಿ, ಭಜನೆ, ರಾಮತಾರಕ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಪ್ರಸಾದ ವಿನಿಯೋಗಗಳನ್ನು ನಡೆಸಲಾಯಿತು.

ದೇವಾಲಯಗಳಲ್ಲಿ ವಿವಿಧ ಸೇವೆ:

ಪೇಟೆ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಮಂತ್ರಾಕ್ಷತೆಯಿಂದ ಲಕ್ಷಾರ್ಚನೆ, ಸಾಮೂಹಿಕ ಭಜನೆ, ಶ್ರೀರಾಮತಾರಕ ಹೋಮ, ಪೂರ್ಣಾಹುತಿ ನೆರವೇರಿಸಲಾಯಿತು. ಭಕ್ತರಿಗೆ ಅನ್ನದಾನ ನಡೆಸಲಾಯಿತು. ರಾತ್ರಿ ಶ್ರೀರಾಮ ಭಜನೆ, ದೀಪಾರಾಧನೆ ನಡೆಯಿತು. ಯಲಗತವಳ್ಳಿಯಲ್ಲಿ ರಾಮನ ಭಕ್ತರು ಸರ್ಕಲ್ ನಲ್ಲಿ ಶ್ರೀರಾಮನ ಭಾವಚಿತ್ರವನ್ನಿರಿಸಿ ಪೂಜೆ ನೆರವೇರಿಸಿ ಬಳಿಕ ಪಾನಕ ವಿತರಿಸಲಾಯಿತು. ಹೀಗೆ ಹಲವು ದೇಗುಲಗಳಲ್ಲಿ ಬೆಳಿಗ್ಗೆಯೇ ದೇವರಿಗೆ ಅಲಂಕಾರ ಮಾಡಿ ವಿಶೇಷ ಪೂಜೆಗಳು ನೆರವೇರಿದವು.

ಪಟ್ಟಣದ ರಾಜ್ ಕಮಲ್ ಜ್ಯುಯೆಲರ್ಸ ವತಿಯಿಂದ ಆಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯದ ನೇರಪ್ರಸಾರ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು. ಸಾಲಗೇರಿ ಬಡಾವಣೆಯ ಆಂಜನೇಯ ದೇವಾಲಯದಲ್ಲಿ ರಾಮ ತಾರಕ ಹೋಮ ನಡೆಸಲಾಯಿತು. ಬಳಿಕ ಶ್ರೀರಾಮನ ಭಾವ ಚಿತ್ರದ ಮೆರವಣಿಗೆ ನಡೆಲಾಯಿತು. ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಮುಖ್ಯರಸ್ತೆಗೆ ಬಂದಾಗ ಪೊಲೀಸರು ತಡೆದು ಮೆರವಣಿಗೆ ನಡೆಸಲು ಅವಕಾಶವಿಲ್ಲವೆಂದು ವಾಪಸ್ ಕಳುಹಿಸಿದರು. ಕೆಇಬಿ ರಸ್ತೆ ಶಕ್ತಿಗಣಪತಿ ದೇವಾಲಯ, ಗ್ರಾಮ ದೇವತೆ ದೊಡ್ಡಮ್ಮ ದೇವಾಲಯ, ಶನಿದೇವರ ದೇವಾಲಯ, ಸೇರಿದಂತೆ ಪಟ್ಟಣದ ವಿವಿಧ ದೇವಾಲಯಗಳು ಹಾಗೂ ಬಡಾವಣೆಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪಾನಕ ಪನಿವಾರಗಳನ್ನು ವಿತರಿಸಲಾಯಿತು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನರಿಗೆ ಪಾನಕ ವಿತರಣೆ ಮಾಡಲಾಯಿತು. ನ್ಯಾಯಾಧೀಶರು ಹಾಗೂ ವಕೀಲರ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಪಟ್ಟಣ ವ್ಯಾಪ್ತಿಯ ಪೇಟೆ ಮಾಚಗೌಡನಹಳ್ಳಿ ಗ್ರಾಮದಲ್ಲಿ ಶ್ರೀರಾಮನ ಭಾವಚಿತ್ರದ ಮೆರವಣಿಗೆ ನಡೆಸಿ ಅನ್ನದಾಸೋಹ ನಡೆಸಲಾಯಿತು

ರಾರಾಜಿಸಿದ ಭಿತ್ತಿಪಟ್ರಗಳು:

ರಾಮಭಕ್ತರು, ಯುವಬಳಗ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ದೇಗುಲಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಪಾನಕ, ಪ್ರಸಾದ ವಿತರಿಸಿ ಹಬ್ಬದ ಆಚರಣೆಯಂತೆ ಸಂಭ್ರಮಿಸಿದರು. ಜೈ ಶ್ರೀರಾಮ್ ಘೋಷಣೆಗಳು ಮುಗಿಲು ಮುಟ್ಟಿದ್ದವು. ಬಹುತೇಕ ದೇಗುಲಗಳು, ಪ್ರಮುಖ ವೃತ್ತಗಳಲ್ಲಿ ರಾಮದೇವರ ದೊಡ್ಡ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿತ್ತು.ಬೇಲೂರಲ್ಲಿ ಶ್ರೀರಾಮನ ಭಾವ ಚಿತ್ರದ ಮೆರವಣಿಗೆ ನಡೆಲಾಯಿತು.