ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ರಾಮನ ಜಪದಿಂದ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಶಿಕ್ಷಣ, ನಿರುದ್ಯೋಗ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ದೇಶದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಮುಗ್ದ ಜನರನ್ನು ಒಗ್ಗೂಡಿಸುವ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡೋದನ್ನು ಇನ್ನಾದರೂ ಬಿಡಬೇಕು ಎಂದು ಸಮಾಜ ಚಿಂತಕ ಟಿ.ರಾಜಪ್ಪ ಮಾಸ್ತರ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಸೋಮವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ರೈತವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುಂತೆ ಮತ್ತು ಬಗರ್‌ಹುಕುಂ ರೈತರಿಗೆ ನೋಟಿಸ್ ನೀಡಿ, ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ, ಹಮ್ಮಿಕೊಂಡಿದ್ದ ಎರಡು ದಿನಗಳ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.ರೈತಸಮೂಹಕ್ಕೆ ಪ್ರಕೃತಿಯೇ ದೇವರು. ಅನಾದಿ ಕಾಲದಿಂದಲೂ ಪ್ರಕೃತಿದತ್ತವಾಗಿ ಸಿಗುವ ನೀರು ಮತ್ತು ಇತರೆ ರೈತ ಪರಿಕರಗಳನ್ನು ಅನ್ನ ನೀಡುವ ದೈವವೆಂದು ಆರಾಧಿಸುತ್ತಾರೆ. ಇಂಥ ಭಾವಜೀವಿಗಳಾದ ರೈತರ ಮೇಲೆ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ಪ್ರದರ್ಶಿಸುತ್ತಿದೆ. ರೈತರ ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮಾಡುತ್ತಿದೆ. ರಾಷ್ಟ್ರದಲ್ಲಿರುವ ಒಟ್ಟು ರೈತರು ತಿರುಗಿಬಿದ್ದರೆ, ಸರ್ಕಾರವನ್ನೇ ಬುಡಮೇಲು ಮಾಡಬಲ್ಲರು. ರೈತರನ್ನು ರೈತತನದಿಂದ ಹೊರದಬ್ಬುವ ನೀಚತನ ಬಿಡಬೇಕು. ರೈತವಿರೋಧಿ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆದು, ರೈತರ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಆಗ್ರಹಿಸಿದರು.
ದೇಶದ ಬಹುದೊಡ್ಡ ಕಾರ್ಪೊರೇಟ್ ಕಂಪನಿಗಳ ಹಿತಕಾಯುವ ನಿಟ್ಟಿನಲ್ಲಿ ನಮ್ಮನ್ನಾಳುವ ಸರ್ಕಾರಗಳು ರೈತರು ಮತ್ತು ಜನಸಾಮಾನ್ಯರನ್ನು ವಂಚಿಸಿ, ದೇಶದ ಆರ್ಥಿಕ ಬೊಕ್ಕಸಕ್ಕೆ ಅನ್ಯಾಯ ಎಸಗುತ್ತಿವೆ. ಈಗಾಗಲೇ ಕೇಂದ್ರದಲ್ಲಿ ರೈತರು ತಮಗಾದ ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಮನವಿ ನೀಡಲು ಅವಕಾಶ ನೀಡದೇ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ ಎಂದು ಹೇಳಿದರು.ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್ ಮಾತನಾಡಿ, ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಬೇಕೆಂದರೆ ₹2 ಲಕ್ಷದವರೆಗೆ ವೆಚ್ಚ ಭರಿಸಬೇಕಾಗಿದೆ. ಅಲ್ಲದೇ, ರೈತರಿಗೆ ಕೊಳವೆಬಾವಿ ಕೊರೆಸಲು ಒಂದೂವರೆ ಲಕ್ಷ, ವಿದ್ಯುತ್ ಮೋಟಾರ್ ಪಂಪ್, ಪೈಪ್, ಕೇಬಲ್‌ಗೆ ₹1೧ ಲಕ್ಷ, ವಿದ್ಯುತ್ ಸಂಪರ್ಕ ಪಡೆಯಲು ₹2 ಲಕ್ಷ ವಿನಿಯೋಗಿಸಬೇಕಿದೆ. ಒಟ್ಟಾರೆ ಒಂದು ಕೊಳವೆಬಾವಿ ಕೊರೆಸಿ ಸಂಪರ್ಕ ಪಡೆಯಲು ₹4 ರಿಂದ ₹5 ಲಕ್ಷ ಖರ್ಚಾಗುವ ಮೂಲಕ ರೈತರಿಗೆ ಹೊರೆಯಾಗಿ ಪರಿಣಮಿಸಿದೆ ಎಂದರು.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ. ಮಂಜುನಾಥಗೌಡ ನಿಸರಾಣಿ ಉಪಸ್ಥಿತರಿದ್ದು ಮಾತನಾಡಿದರು. ಉಪವಾಸ ಸತ್ಯಾಗ್ರಹದಲ್ಲಿ ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಮುಖಂಡರಾದ ಮಂಜುನಾಥ ಆರೇಕೊಪ್ಪ, ಮೇಘರಾಜ್, ಶಿವಪ್ಪ ಹುಣಸವಳ್ಳಿ, ಹುಚ್ಚಪ್ಪ ತಳೇಬೈಲು, ಪರಮೇಶ ಉಳವಿ, ಬಾಷಾ ಸಾಬ್, ಹನುಮಂತಪ್ಪ ಬಾವಿಕಟ್ಟೆ, ಯೋಗೇಶ್ ಕುಂದಗಸವಿ, ಡಾ| ಜ್ಞಾನೇಶ್ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.- - - ಪ್ರಮುಖ ಬೇಡಿಕೆಗಳು - ಸರ್ಕಾರ ಅರಣ್ಯ ಭೂಮಿ ಸಾಗುವಳಿಗೆ ಮರು ಸೇರ್ಪಡೆ ಅವಕಾಶ ನೀಡಿ ಹಕ್ಕುಪತ್ರ ನೀಡಬೇಕು
- ಅರಣ್ಯ ಇಲಾಖೆ ಸಾಗುವಳಿದಾರರ ಮೇಲೆ ಹಾಕಿದ ಪೊಲೀಸ್ ಮೊಕದ್ದಮೆ ವಾಪಸ್ ಪಡೆಯಬೇಕು- ರೈತರ ವಿದ್ಯುತ್ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸುವ ನೀತಿಯನ್ನು ಕೈಬಿಡಬೇಕು
- ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತ್ರಿ ಫೇಸ್ ವಿದ್ಯುತ್ ೧೨ ಗಂಟೆ ಹಗಲು ವೇಳೆಯಲ್ಲಿ ನೀಡಬೇಕು- - - -೨೬ಕೆಪಿಸೊರಬ೦೧:
ಸೊರಬ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ರೈತವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುಂತೆ ಒತ್ತಾಯಿಸಿ, ರೈತ ಮುಖಂಡರು ಪ್ರತಿಭಟನೆ ನಡೆಸಿ, ಉಪವಾಸ ಸತ್ಯಾಗ್ರಹ ನಡೆಸಿದರು.