ಸಾರಾಂಶ
ರಾಜ್ಯದ ಸುಮಾರು 400ಕ್ಕೂ ಹೆಚ್ಚು ಮಠಮಂದಿರ, ವಿದ್ಯಾಪೀಠ, ಸಂಘ ಸಂಸ್ಥೆಗಳಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ, ಶಿವ ಪಂಚಾಕ್ಷರಿ ಜಪ ನಡೆದಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ ಸುಲಿಗೆ, ಗೋಹಿಂಸೆಯ ಪರಿಹಾರಕ್ಕೆ ದೇವರಿಗೆ ಮೊರೆ ಇಡುವಂತೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕರೆಗೆ ನಾಡಿನಾದ್ಯಂತ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಸುಮಾರು 400ಕ್ಕೂ ಹೆಚ್ಚು ಮಠಮಂದಿರ, ವಿದ್ಯಾಪೀಠ, ಸಂಘಸಂಸ್ಥೆಗಳಲ್ಲಿ ಗುರುವಾರ ಸಾಮೂಹಿಕ ವಿಷ್ಣು ಸಹಸ್ರನಾಮ, ಶಿವಪಂಚಾಕ್ಷರಿ ಜಪ ನಡೆದಿದೆ.ಪೇಜಾವರ ಶ್ರೀಗಳು ಗುರುವಾರದಿಂದ ಒಂದು ವಾರ ಕಾಲ ಈ ಅಭಿಯಾನ ನಡೆಸುವಂತೆ ಮನವಿ ಮಾಡಿದ್ದು, ಉಡುಪಿಯ ಕೃಷ್ಣಮಠದಲ್ಲಿ, ಪೇಜಾವರ ಮಠದ ಎಲ್ಲಾ ಶಾಖೆಗಳಲ್ಲಿ ಮತ್ತು ನಾಡಿನ ಅನೇಕ ಮಠಗಳಲ್ಲಿ ಈ ಅಭಿಯಾನ ನಡೆಯಿತು.
ಸ್ವತಃ ಪೇಜಾವರ ಶ್ರೀಗಳು ಬೆಂಗಳೂರಿನ ವಿದ್ಯಾಪೀಠದಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ನೆರವೇರಿಸಿ, ನೂರಾರು ಮಂದಿ ವಿದ್ಯಾರ್ಥಿಗಳೊಂದಿಗೆ ಪಾರಾಯಣಕ್ಕೆ ಚಾಲನೆ ನೀಡಿದರು.ಉಡುಪಿ ಶ್ರೀ ಕೃಷ್ಣಮಠದಲ್ಲಿ ಒಂದು ವಾರ ಕಾಲ ವಿಶೇಷ ವಿಷ್ಣು ಸಹಸ್ರನಾಮ ಪಾರಾಯಣ, ಶಿವಪಂಚಾಕ್ಷರಿ ಜಪ ಮತ್ತು ತತ್ಸಂಬಂಧಿ ಹೋಮಗಳು, ಮಾತೆಯರಿಂದ ಗೀತಾ ಪಾರಾಯಣ ನಡೆಯಲಿದ್ದು, ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಂದು ಪೇಜಾವರ ಶ್ರೀ ಮಹಾಕುಂಭ ಮೇಳಕ್ಕೆಉತ್ತರಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಇಂದು ( ಶುಕ್ರವಾರ) ಭೇಟಿ ನೀಡಿ ಪವಿತ್ರ ನದಿ ಸ್ನಾನಗೈಯುವರು.
ಇದೇ ಸಂದರ್ಭದಲ್ಲಿ ಅಲ್ಲಿ ವಿಶ್ವ ಹಿಂದು ಪರಿಷತ್ ಕೇಂದ್ರೀಯ ಮಂಡಳಿ ಆಶ್ರಯದಲ್ಲಿ ನಡೆಯುವ ಅಖಿಲ ಭಾರತ ಸಂತರ ಸಭೆಯಲ್ಲೂ ಭಾಗವಹಿಸಲಿರುವರು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ .