ಕೇಂದ್ರದಲ್ಲಿ ಕೇವಲ ಒಂದು ಟೇಬಲ್ ಮಾತ್ರ ಅಳವಡಿಸಿದ ಪರಿಣಾಮ ಮಧ್ಯಾಹ್ನದಿಂದ ಸರದಿಯಲ್ಲಿ ನಿಂತ ಮತದಾರರ ಸರದಿ ಬೆಳೆಯುತ್ತಾ ಹೋಯಿತು.
ಗಜೇಂದ್ರಗಡ: ಪಟ್ಟಣದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನಲೆ ಪಟ್ಟಣದ ಎಪಿಎಂಸಿ ಆವರಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ತರೆಯಲಾಗಿದ್ದ ಮತದಾನ ಕೇಂದ್ರ-೭೧ ರಲ್ಲಿನ ಅವ್ಯವಸ್ಥೆ ವಿರುದ್ಧ ಮತದಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.
ಈ ಮತದಾನ ಕೇಂದ್ರದ ವ್ಯಾಪ್ತಿಗೆ ೧೩೬೫ ಮತದಾರರು ಬರುತ್ತಾರೆ. ಆದರೆ ಕೇಂದ್ರದಲ್ಲಿ ಕೇವಲ ಒಂದು ಟೇಬಲ್ ಮಾತ್ರ ಅಳವಡಿಸಿದ ಪರಿಣಾಮ ಮಧ್ಯಾಹ್ನದಿಂದ ಸರದಿಯಲ್ಲಿ ನಿಂತ ಮತದಾರರ ಸರದಿ ಬೆಳೆಯುತ್ತಾ ಹೋಯಿತು. ಮತದಾನ ಮಾಡಲು ಜನರು ಬಹಳ ಹೊತ್ತು ಕಾಯಬೇಕಾಯಿತುೂ. ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಸರತಿ ಸಾಲಿನಲ್ಲಿ ಇರುವುದನ್ನು ಗಮನಿಸಿದ ಅಧಿಕಾರಿಗಳು ಸಂಜೆಯ ವೇಳೆಗೆ ಎರಡು ಕಂಪಾರ್ಟಮೆಂಟ್ಗಳನ್ನು ಮಾಡುವ ಮೂಲಕ ಮತದಾನಕ್ಕೆ ವೇಗ ನೀಡಿದರು.ಜಿಟಿಜಿಟಿ ಮಳೆ, ತಪ್ಪಿದ ಸರದಿ ಸಾಲು; ಸಂಜೆಯ ಹೊತ್ತಿಗೆ 200ಕ್ಕೂ ಅಧಿಕ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದರು. ಆಗ ಜಿಟಿಜಿಟಿ ಮಳೆ ಆರಂಭವಾಯಿತು. ಜನರು ಬೇಗನೆ ಮತಗಟ್ಟೆಯ ಒಳಗೆ ಹೋಗಲು ಮುಗಿಬಿದ್ದರು. ಪೊಲೀಸರು ಅವರನ್ನು ತಡೆದು, ಸರದಿ ಸಾಲಿನಲ್ಲಿ ಬರುವಂತೆ ವ್ಯವಸ್ಥೆ ಮಾಡಿದರು. ಮತಗಟ್ಟೆ ಒಳಹೋಗಲು, ಹೊರ ಬರಲು ಒಂದೇ ಮಾರ್ಗ ಇರುವುದರಿಂದ ಮಹಿಳೆಯರು, ವಿಶೇಷ ಚೇತನರು ಪರದಾಡುವಂತಾಗಿತ್ತು. ಇತ್ತ ಕೊಡಗಾನೂರ ಗ್ರಾಮದಿಂದ ಮತದಾನಕ್ಕೆ ಆಗಮಿಸಿದ ವಿಶೇಷ ಚೇತನರಿಗೆ ವೀಲ್ ಚೇರ್ ಇಲ್ಲದ ಪರಿಣಾಮ ಶರಣಯ್ಯ ಅಂಗಡಿ ಅವರನ್ನು ಎತ್ತಿಕೊಂಡು ಮತಗಟ್ಟೆಯೊಳಗೆ ಕರೆದುಕೊಂಡು ಹೋದರು.
ಪಟ್ಟಣದ ಮತಗಟ್ಟೆ ಕೇಂದ್ರಕ್ಕೆ ರೋಣ ಕಾಂಗ್ರೆಸ್ ಮುಖಂಡ ಮಿಥುನ ಜಿ.ಪಾಟೀಲ ಹಾಗೂ ಸ್ಥಳೀಯ ಮುಖಂಡರು ಪರಿಶೀಲನೆಗಾಗಿ ಆಗಮಿಸಿದ ವೇಳೆಯೇ ಸ್ಥಳೀಯ ಬಿಜೆಪಿ ಮುಖಂಡರು ಸಹ ಆಗಮಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತಾದರೂ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಭಾಯಿಸಲಾಯಿತು.