ಹರಿಹರ ನಗರದ ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ನಿತ್ಯ ಹಲವಾರು ರೋಗಿಗಳು ಡಯಾಲಿಸಿಸ್‌ ಚಿಕಿತ್ಸೆಗೆ ಆಗಮಿಸುತ್ತಾರೆ. 100 ಬೆಡ್‌ಗಳ ಈ ಆಸ್ಪತ್ರೆಯಲ್ಲಿ ಮೂರು ಡಯಾಲಿಸಿಸ್‌ ಯಂತ್ರಗಳು ಇವೆ. ಆದರೆ, ಡಯಾಲಿಸಿಸ್‌ ಯಂತ್ರಗಳಿಗೆ ವಿದ್ಯುತ್‌ ನಿಯಂತ್ರಿಸುವ ಸ್ಟೆಬಿಲೈಜರ್‌ ಕಳೆದ 3 ತಿಂಗಳಿಂದ ಹಾಳಾಗಿದೆ. ಈ ಅವ್ಯವಸ್ಥೆ ಸರಿಪಡಿಸಬೇಕಾದ ನೆಪ್ರೋಪ್ಲಸ್‌ ಕಂಪನಿ ಗುತ್ತಿಗೆದಾರರ ಬೇಜವಾಬ್ದಾಯಿಂದ ಬಡ ಡಯಾಲಿಸಿಸ್‌ ರೋಗಿಗಳು ನೋವು ಅನುಭವಿಸುವಂತಾಗಿದೆ.

- ಹರಿಹರ ಆಸ್ಪತ್ರೆಯಲ್ಲಿ ಸ್ಟೆಬಿಲೈಜರ್‌ ದುರಸ್ತಿಪಡಿಸದೇ ನಿರ್ಲಕ್ಷ್ಯ । ನೆಪ್ರೋಪ್ಲಸ್‌ ಕಂಪನಿ ಬೇಜವಾಬ್ದಾರಿಗೆ ಅಸಮಾಧಾನ

- - -

- ಆಸ್ಪತ್ರೆಯಿಂದ ಸೋಮವಾರ ರಾತ್ರೋರಾತ್ರಿ ದಾವಣಗೆರೆಗೆ ಯಂತ್ರಗಳ ಸಾಗಣೆ

- ಮಂಗಳವಾರ ಮಧ್ಯಾಹ್ನ ಮತ್ತೆ ಆಸ್ಪತ್ರೆಯಲ್ಲಿ ಪ್ರತ್ಯಕ್ಷ, ಹೊಸ ಸ್ಟೆಬಿಲೈಜರ್‌ ಅಳವಡಿಕೆ - - -

ಕನ್ನಡಪ್ರಭ ವಾರ್ತೆ ಹರಿಹರ

ನಗರದ ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ನಿತ್ಯ ಹಲವಾರು ರೋಗಿಗಳು ಡಯಾಲಿಸಿಸ್‌ ಚಿಕಿತ್ಸೆಗೆ ಆಗಮಿಸುತ್ತಾರೆ. 100 ಬೆಡ್‌ಗಳ ಈ ಆಸ್ಪತ್ರೆಯಲ್ಲಿ ಮೂರು ಡಯಾಲಿಸಿಸ್‌ ಯಂತ್ರಗಳು ಇವೆ. ಆದರೆ, ಡಯಾಲಿಸಿಸ್‌ ಯಂತ್ರಗಳಿಗೆ ವಿದ್ಯುತ್‌ ನಿಯಂತ್ರಿಸುವ ಸ್ಟೆಬಿಲೈಜರ್‌ ಕಳೆದ 3 ತಿಂಗಳಿಂದ ಹಾಳಾಗಿದೆ. ಈ ಅವ್ಯವಸ್ಥೆ ಸರಿಪಡಿಸಬೇಕಾದ ನೆಪ್ರೋಪ್ಲಸ್‌ ಕಂಪನಿ ಗುತ್ತಿಗೆದಾರರ ಬೇಜವಾಬ್ದಾಯಿಂದ ಬಡ ಡಯಾಲಿಸಿಸ್‌ ರೋಗಿಗಳು ನೋವು ಅನುಭವಿಸುವಂತಾಗಿದೆ.

ಈ ಮಧ್ಯೆ ಸೋಮವಾರ, ಮಂಗಳವಾರ ಆಸ್ಪತ್ರೆಯಲ್ಲಿ ಹೈಡ್ರಾಮ ನಡೆದಿದೆ. ಸ್ಟೆಬಿಲೈಜರ್‌ ಸಮಸ್ಯೆಯಿಂದ ಸೋಮವಾರ ಒಂದೇ ಒಂದು ಡಯಾಲಿಸಿಸ್‌ ಸಹ ಮಾಡಲಾಗಿಲ್ಲ. ಆದರೆ, ರಾತ್ರಿ ಇದ್ದಕ್ಕಿದ್ದಂತೆ ಆಗಮಿಸಿದ ಗುತ್ತಿಗೆದಾರರ ಕಡೆಯವರು ಎರಡೂ ಡಯಾಲಿಸಿಸ್‌ ಯಂತ್ರಗಳನ್ನು ಯಾರಿಗೂ ಹೇಳದೇ ಕೇಳದೇ ದಾವಣಗೆರೆಗೆ ಸಾಗಿಸಿದ್ದಾರೆ. ಬೆಳಗ್ಗೆ ಡಯಾಲಿಸಿಸ್‌ ರೋಗಿಗಳಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿಯೇ ಡಯಾಲಿಸಿಸ್‌ ಮಾಡಲಾಗುವುದು ಎಂದೂ ತಿಳಿಸಿದ್ದಾರೆ. ವೈದ್ಯಾಧಿಕಾರಿಯ ಅನುಮತಿ ಇಲ್ಲದೇ ಅಕ್ರಮವಾಗಿ ಡಯಾಲಿಸಿಸ್‌ ಯಂತ್ರಗಳ ಸಾಗಣೆಯ ಹೈಡ್ರಾಮ ಪತ್ರಕರ್ತರು, ಮಾಧ್ಯಮದವರಿಗೆ ಗೊತ್ತಾಗುತ್ತಿದ್ದಂತೆ ತಕ್ಷಣ ತುರಾತುರಿಯಲ್ಲಿ ಡಯಾಲಿಸಿಸ್‌ ಯಂತ್ರಗಳನ್ನು ಹರಿಹರದ ಆಸ್ಪತ್ರೆಗೆ ಮತ್ತೆ ವರ್ಗಾಯಿಸಿದ್ದಾರೆ.

ಕಿಡ್ನಿ ಹಾಳಾಗಿ ಡಯಾಲಿಸಿಸ್‌ ಚಿಕಿತ್ಸೆ ಮಾಡಿಸುವ ಬಡಜನರಿಗಾಗಿ ಹರಿಹರ ತಾಲೂಕಿನ ಆಸ್ಪತ್ರೆಗೊಂದು ಡಯಾಲಿಸಿಸ್‌ ಯಂತ್ರ ಬೇಕು ಎಂದು ಕ್ಷೇತ್ರದ ಜನಪ್ರತಿನಿಧಿಗಳ ಒತ್ತಾಸೆ ಫಲವಾಗಿ 2017ರಲ್ಲಿ ಹರಿಹರದ ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಯಂತ್ರಗಳು ಕಾರ್ಯಾರಂಭ ಮಾಡಿದ್ದವು.

ಡಯಾಲಿಸಿಸ್‌ ಯಂತ್ರ ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸುವ ಮೊದಲು ಬಡಜನತೆ ವಾಹನವನ್ನು ಗೊತ್ತುಪಡಿಸಿಕೊಂಡು ಜಿಲ್ಲಾ ಕೇಂದ್ರ ದಾವಣಗೆರೆ ಆಸ್ಪತ್ರೆಗಳಿಗೆ ತೆರಳಿ ₹2ರಿಂದ ₹3 ಸಾವಿರ ಖರ್ಚು ಮಾಡುತ್ತಿದ್ದರು. ವಾರಕ್ಕೆ 2, 3 ಸಲ ಎಂದರೆ ತಿಂಗಳಿಗೆ ₹20 ರಿಂದ ₹30 ಸಾವಿರ ಖರ್ಚು ಮಾಡಬೇಕಿತ್ತು. ಅನಂತರ ಉಚಿತ ಡಯಾಲಿಸಿಸ್ ಚಿಕಿತ್ಸೆ ಬಹುತೇಕ ಹರಿಹರದಲ್ಲಿಯೇ ಸಿಗುತ್ತೆ, ಇದರಿಂದ ಹಣ, ಸಮಯ ಉಳಿಯುತ್ತದೆ ಎಂಬ ಕಾರಣಕ್ಕೆ ಹರಿಹರ ತಾಲೂಕು ಮಾತ್ರವಲ್ಲದೇ, ಸುತ್ತಮುತ್ತಲಿನ ತಾಲೂಕುಗಳಿಂದಲೂ ರೋಗಿಗಳು ಡಯಾಲಿಸಿಸ್‌ ಮಾಡಿಸಲು ಹರಿಹರದ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.

ಆದರೆ ಕಳೆದ ಕೆಲ ತಿಂಗಳಿಂದ ಆಸ್ಪತ್ರೆಯಲ್ಲಿನ ಮೂರೂ ಡಯಾಲಿಸಿಸ್‌ ಯಂತ್ರಗಳಿಗೆ ವಿದ್ಯುತ್‌ ನಿಯಂತ್ರಿಸುವ ಸ್ಟೆಬಿಲೈಜರ್‌ ಹಾಳಾಗಿದೆ. ಒಬ್ಬ ರೋಗಿಗೆ ಡಯಾಲಿಸಿಸ್‌ ಮಾಡಲು ಕನಿಷ್ಠ 4 ಗಂಟೆಗಳು ಬೇಕು. ಆದರೆ, ಡಯಾಲಿಸಿಸ್‌ ಮಾಡುವಾಗ ಪ್ರಾರಂಭದಲ್ಲಿ ಅಥವಾ ಇನ್ನೇನು ಸಂಪೂರ್ಣ ಮುಗಿಯುತ್ತಿದೆ ಎಂದಾಗ ತಕ್ಷಣ ಡಯಾಲಿಸಿಸ್‌ ಯಂತ್ರ ಸ್ಥಬ್ಧವಾಗುತ್ತಿದೆ. ಇದರಿಂದ ರೋಗಿಗಳ ಪರಿಸ್ಥಿತಿ ಹೇಳತೀರದಾಗುತ್ತಿದೆ. ಜನಸೇವೆಯ ಸರ್ಕಾರದ ಉದ್ದೇಶಕ್ಕೂ ಹಿನ್ನಡೆಯಾಗುತ್ತಿದೆ.

ಪ್ರಾರಂಭದಲ್ಲಿ ಗುತ್ತಿಗೆ ಆಧಾರಿತ ಬಿಆರ್‌ಎಸ್‌ ನಂತರ ಸಂಜೀವಿನಿ ಕಂಪನಿಗಳು ಡಯಾಲಿಸಿಸ್‌ ಹೊಣೆ ಹೊತ್ತಿದ್ದವು. ಅನಂತರ ಸರ್ಕಾರಿ ಸಾಮ್ಯದ ಎನ್‌ಆರ್‌ಎಚ್‌ಎಂ 2024 ರವರೆಗೆ ಕಾರ್ಯನಿರ್ವಹಿಸಿತ್ತು. ಅನಂತರ ನೆಪ್ರೋಪ್ಲಸ್‌ ಕಂಪನಿ ಡಯಾಲಿಸಿಸ್‌ ಗುತ್ತಿಗೆ ಹೊಣೆ ಹೊತ್ತಿದೆ. ಕಂಪನಿಯ ಇಬ್ಬರು ಟೆಕ್ನಿಷಿಯನ್‌, ಇಬ್ಬರು ಹೌಸ್‌ ಕೀಪಿಂಗ್‌ ವರ್ಕರ್‌ಗಳು ದಿನ ಬೆಳಗಾದರೆ 6 ಗಂಟೆಗೆ ಬಂದು ಸಂಜೆ 7-8 ಗಂಟೆಯವರೆಗೆ ಇದ್ದು ರೋಗಿಗಳಿಗೆ ಚಿಕಿತ್ಸೆ ಮಾಡುತ್ತಿದ್ದಾರೆ. ಆದರೆ, ದಿನಕ್ಕೆ 9 ರೋಗಿಗಳ ಡಯಾಲಿಸಿಸ್‌ ಮಾಡಬೇಕಾದ ಯಂತ್ರಗಳು ಸಮಸ್ಯೆಯ ಕಾರಣ 6-7 ರೋಗಿಗಳಿಗೆ ಡಯಾಲಿಸಿಸ್‌ ಮಾಡಿದರೆ ಹೆಚ್ಚು ಎಂಬಂಥ ಪರಿಸ್ಥಿತಿ ಇಲ್ಲಿದೆ. ಜ.4ರಂದು ಭಾನುವಾರ ರಜೆ. ರಜೆಯ ಅವಧಿ ಮುಗಿದು ಜ.5ರಂದು ಸೋಮವಾರ ಒಂದೇ ಒಂದು ಡಯಾಲಿಸಿಸ್‌ ನಡೆದಿಲ್ಲ ಎಂಬುದು ಚಿಕಿತ್ಸೆಗೆ ಆಗಮಿಸಿದ್ದವುರ ದೂರುತ್ತಿದ್ದಾರೆ.

ಯಂತ್ರಗಳ ಸಮಸ್ಯೆ ಇದ್ದರೆ ನೆಪ್ರೋಪ್ಲಸ್‌ ಕಂಪನಿಯ 2 ಯಂತ್ರಗಳಲ್ಲಿ ಮಾತ್ರ ಮತ್ತೊಂದು ಸರ್ಕಾರಿ ಅಸ್ಪತ್ರೆಗೆ ಸೇರಿದ್ದು, 3 ಯಂತ್ರಗಳಲ್ಲೂ ಯಥಾ ಸಮಸ್ಯೆ ಇದೆ ಅಂದರೆ, ಅದು ಸ್ಟೆಬಿಲೈಜರ್‌ ಸಮಸ್ಯೆ ಆಗಿರುವ ಸಾಧ್ಯತೆ ಹೆಚ್ಚು. ಸ್ಟೆಬಿಲೈಜರ್‌ ಬದಲಾಯಿಸದೇ ಅಥವಾ ತಕ್ಷಣ ಸರಿಪಡಿಸದೇ ಡಯಾಲಿಸಿಸ್‌ ಯಂತ್ರಗಳನ್ನು ಮಾತ್ರ ದಾವಣಗೆರೆಗೆ ಸಾಗಿಸುವ ಅಗತ್ಯವೇನಿತ್ತು ಎಂಬುದು ರೋಗಿಗಳ ಅಸಮಾಧಾನದ ಪ್ರಶ್ನೆ.

ಅದೇನೆ ಇರಲಿ, ಡಯಾಲಿಸಿಸ್‌ ಚಿಕಿತ್ಸೆಯೇ ಅತ್ಯಂತ ನೋವುದಾಯಕ. ರೋಗಿಗೆ ಈ ಚಿಕಿತ್ಸೆ ತಕ್ಷಣ ಸಿಗದಿದ್ದಲ್ಲಿ ಆಗುವ ನೋವು ಇನ್ನೂ ಭಯಾನಕ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ರೋಗಿಗಳು ಮೃತಪಟ್ಟ ಸಾಕಷ್ಟು ಉದಾಹರಣೆಗಳೂ ಇಲ್ಲದಿಲ್ಲ. ಆದರೆ, ಅಂಥ ಅವಘಡಗಳು ಇಲ್ಲಿ ಆಗಿಲ್ಲ. ಡಯಾಲಿಸಿಸ್‌ ರೋಗಿಗಳಿಗೆ ತೊಂದರೆಯಾಗುವ ಮುನ್ನವೇ ಸಂಬಂಧಪಟ್ಟವರು ಎಚ್ಚತ್ತುಕೊಳ್ಳಬೇಕಿದೆ.

- - -

(ಕೋಟ್ಸ್‌) ಕಳೆದೊಂದು ತಿಂಗಳಿಂದ ಇಲ್ಲಿಗೆ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಬರುತ್ತಿದ್ದೇನೆ. ಹಲವೊಮ್ಮೆ ಡಯಾಲಿಸಿಸ್‌ ಯಂತ್ರ ಟ್ರಿಪ್‌ ಆಗಿದೆ ಎಂಬ ಕಾರಣಕ್ಕೆ ಗಂಟೆಗಟ್ಟಲೇ ಕಾಯಬೇಕಿತ್ತು. ಕೆಲವೊಮ್ಮೆ ಇದ್ದಕ್ಕಿದಂತೆ ಅರ್ಧಕ್ಕೆ ಸ್ಟಾಪ್‌ ಆಗಿಬಿಡುತ್ತಿತ್ತು. ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಲೇ ಬೇಕು. ಇಲ್ಲದಿದ್ದಲ್ಲಿ ಉಸಿರಾಟದಲ್ಲಿ ತೊಂದರೆ, ಬಿ.ಪಿ. ಹೆಚ್ಚಾಗುವುದು, ಕಾಲು ಊದಿಕೊಳ್ಳುವುದು, ಊಟ ಸೇರಲ್ಲ ತಲೆಚಕ್ರ, ನಿಶಕ್ತಿ ಉಂಟಾಗಿ ಬಿಡುತ್ತದೆ.

- ಅಶ್ರಫ್‌ ಉಲ್ಲಾ, ರಾಜನಹಳ್ಳಿ

(06HRR2A)

- - -

ನಮ್ಮ ತಂದೆಯವರನ್ನು ಡಯಾಲಿಸಿಸ್‌ ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ಕರೆತಂದಿದ್ದೆ. ಡಯಾಲಿಸಿಸ್‌ 4 ಗಂಟೆಗೆ ಪ್ರಾರಂಭವಾಯಿತು. ಆದರೆ 6 ಗಂಟೆ ಸುಮಾರಿಗೆ ಸ್ಟೆಬಿಲೈಜರ್‌ ಟ್ರಿಪ್‌ ಆದ ಕಾರಣ ಚಿಕಿತ್ಸೆ ಸ್ಥಬ್ಧವಾಯಿತು. ಬಳಿಕ ತಂದೆಯವರಿಗೆ ಉಸಿರಾಟದಲ್ಲಿ ತೊಂದರೆ ಉಂಟಾದ ಕಾರಣ ದಾವಣಗೆರೆ ಆಸ್ಪತ್ರೆಗೆ ಕರೆದ್ಯೊಯಬೇಕಾಯಿತು. - ಜೀವನ್‌, ಹರಿಹರ.

(06HRR02B) - - - ಸೋಮವಾರ ಬೆಳಗ್ಗೆ ಮೀಟಿಂಗ್‌ ಇತ್ತು. ಮಧ್ಯಾಹ್ನದಿಂದ ಸಂಜೆ 6.45 ಗಂಟೆವರೆಗೆ ಆಸ್ಪತ್ರೆಯಲ್ಲಿಯೇ ಇದ್ದೆ. ಅನಂತರ ಕಂಪನಿಯವರು ಇದ್ದಕ್ಕಿದ್ದಂತೆ ಆಗಮಿಸಿ ಡಯಾಲಿಸಿಸ್‌ ಯಂತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನನ್ನ ಅನುಮತಿ ಇಲ್ಲದೇ ಇಲ್ಲಿನ ಯಾವುದೇ ವಸ್ತುಗಳು ಸ್ಥಳಾಂತರ ಆಗಬಾರದು. ಹಾಗಾಗಿ, ನೆಪ್ರೊಪ್ಲಸ್‌ ಕಂಪನಿಯವರಿಗೆ ನೋಟಿಸ್‌ ನೀಡಿದ್ದೇನೆ. - ಡಾ. ಲತಾದೇವಿ, ಆಸ್ಪತ್ರೆ ವೈದ್ಯಾಧಿಕಾರಿ.

- - -

-06HRR02.ಜೆಪಿಜಿ: ಹರಿಹರದ ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆ.

-02 HRR.02D: ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿ ದುರಸ್ತಿಯಾಗದ ಸ್ಟೆಬಿಲೈಜರ್.