ಕನ್ನಡಪ್ರಭ ವಾರ್ತೆ ಆಲೂರು
ಗೃಹಬಳಕೆ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ಹಾಗೂ ಸಾರ್ವಜನಿಕರ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಶನಿವಾರ ಖುದ್ದಾಗಿ ಪಟ್ಟಣದಲ್ಲಿರುವ ವಿಜಯಲಕ್ಷ್ಮೀ ಭಾರತ್ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.ಹಲವು ದಿನಗಳಿಂದ ಸಿಲಿಂಡರ್ ದೊರೆಯದೇ ಗ್ರಾಹಕರು ಸಂಕಷ್ಟ ಅನುಭವಿಸುತ್ತಿರುವ ಕುರಿತು ಜನರಿಂದ ನೇರವಾಗಿ ಅಹವಾಲು ಸ್ವೀಕರಿಸಿದ ಅವರು, ಸ್ಥಳದಲ್ಲೇ ಅಧಿಕಾರಿಗಳು ಹಾಗೂ ಏಜೆನ್ಸಿ ನಿರ್ವಹಣೆಯೊಂದಿಗೆ ಸಭೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಳೆದ ಕೆಲವು ದಿನಗಳಿಂದ ತಾಂತ್ರಿಕ ಲೋಪದೋಷಗಳು, ಸರಬರಾಜಿನ ವಿಳಂಬ ಹಾಗೂ ವಿತರಣಾ ವ್ಯವಸ್ಥೆಯ ಗೊಂದಲದಿಂದ ಆಲೂರು ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಪರದಾಡುತ್ತಿದ್ದರು. ಮಹಿಳೆಯರು ಸೇರಿ ನೂರಾರು ಮಂದಿ ಬೆಳಗ್ಗಿನಿಂದಲೇ ಸಾಲಿನಲ್ಲಿ ನಿಂತು ಗ್ಯಾಸ್ ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿರುವ ದೃಶ್ಯ ಕಂಡು ಬಂದಿದ್ದು, ಇದನ್ನು ಕಂಡ ಶಾಸಕ ಸಿಮೆಂಟ್ ಮಂಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ ಮಂಜು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತಕ್ಷಣವೇ ಹೆಚ್ಚುವರಿ ಸಿಲಿಂಡರ್ ಪೂರೈಕೆ ಮಾಡುವಂತೆ ಸೂಚಿಸಿದರು. ಅದರಂತೆ ಮೂರು ಲಾರಿಗಳಲ್ಲಿ ಗ್ಯಾಸ್ ಸಿಲಿಂಡರ್ ತರಿಸಲಾಗಿದ್ದು, ಶೀಘ್ರ ಹಾಗೂ ಪಾರದರ್ಶಕವಾಗಿ ವಿತರಣೆ ನಡೆಸುವಂತೆ ನಿರ್ದೇಶನ ನೀಡಲಾಯಿತು. ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಆದ್ಯತೆ ನೀಡುವಂತೆ ಕೂಡ ಸೂಚನೆ ನೀಡಿದರು.ಜನರು ಗೃಹಬಳಕೆ ಗ್ಯಾಸ್‌ಗಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಬಾರದು. ವಿತರಣಾ ವ್ಯವಸ್ಥೆಯಲ್ಲಿ ಏನೇ ತಾಂತ್ರಿಕ ಸಮಸ್ಯೆಗಳಿದ್ದರೂ ಅದನ್ನು ಕೂಡಲೇ ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಮರುಕಳಿಸದಂತೆ ಸಮರ್ಪಕ ವ್ಯವಸ್ಥೆ ರೂಪಿಸಬೇಕು ಎಂದು ಶಾಸಕ ಮಂಜು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಈ ಕುರಿತಾಗಿ ನಿನ್ನೆ ಕೂಡ ಅಧಿಕಾರಿಗಳು, ಗ್ಯಾಸ್ ಏಜೆನ್ಸಿ ಪ್ರತಿನಿಧಿಗಳು ಹಾಗೂ ವಿತರಣಾ ಕಂಪನಿಗಳ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿರುವುದಾಗಿ ತಿಳಿಸಿದ ಅವರು, ಗ್ಯಾಸ್ ಅಭಾವದ ಮೂಲ ಕಾರಣ ಪತ್ತೆಹಚ್ಚಿ ಶಾಶ್ವತ ಪರಿಹಾರ ಕಂಡುಹಿಡಿಯಲು ಸೂಚನೆ ನೀಡಿರುವುದಾಗಿ ಹೇಳಿದರು. ಇದೇ ವೇಳೆ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದ ಶಾಸಕ ಮಂಜು ಗ್ರಾಹಕರ ಮೊಬೈಲ್‌ಗೆ ಬರುವ ಓಟಿಪಿ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಕೆಲವು ತಾಂತ್ರಿಕ ಸಮಸ್ಯೆಗಳು ಹಾಗೂ ಓಟಿಪಿ ದುರುಪಯೋಗದಿಂದ ವಿತರಣೆಯಲ್ಲಿ ಗೊಂದಲ ಉಂಟಾಗಿರುವ ಮಾಹಿತಿ ಲಭ್ಯವಾಗಿದೆ. ಸಾರ್ವಜನಿಕರು ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಆಲೂರು ತಾಲೂಕಿನ ಯಾವುದೇ ಕುಟುಂಬಕ್ಕೂ ಗೃಹಬಳಕೆ ಗ್ಯಾಸ್ ಸಿಲಿಂಡರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಧಿಕಾರಿಗಳು ಹಾಗೂ ಏಜೆನ್ಸಿ ನಿರ್ವಹಣೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.