ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಅಕ್ಷರ ಆವಿಷ್ಕಾರ ಸಹಕಾರ

| Published : Aug 02 2024, 12:49 AM IST

ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಅಕ್ಷರ ಆವಿಷ್ಕಾರ ಸಹಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಅಕ್ಷರ ಆವಿಷ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಂಡೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಅಕ್ಷರ ಆವಿಷ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಈ ಕಾರ್ಯಕ್ರಮ ಸಹಕಾರಿಯಾಗುತ್ತದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ಸಿಂಗ್ ಹೇಳಿದರು.

ತಾಲೂಕಿನ ತೋರಣಗಲ್ಲಿನ ವಿದ್ಯಾನಗರದ ಜೆ-ಮ್ಯಾಕ್ಸ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ವಿಭಾಗ ಹಾಗೂ ಜೆಎಸ್‌ಡಬ್ಲು ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎಜುಕಾನ್-೨೦೨೪ ಎರಡು ದಿನಗಳ ಶೈಕ್ಷಣಿಕ ಸಮಾವೇಶವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ-ಕಾಲೇಜುಗಳಲ್ಲಿ ಮೂಲಸೌಕರ್ಯ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೆಕೆಆರ್‌ಡಿಬಿಯ ವಾರ್ಷಿಕ ನಿಧಿಯಲ್ಲಿ ಶೇ.೨೫ ಹಣ ವಿನಿಯೋಗಿಸಲು ನಿಗದಿಪಡಿಸಲಾಗಿದೆ ಎಂದರು.

೨೦೨೩-೨೪ರ ಆರ್ಥಿಕ ವರ್ಷದಲ್ಲಿ ೧೦೦೮ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ, ೮೭೨ ಶಾಲೆಗಳಲ್ಲಿ ದ್ವಿಭಾಷ ತರಗತಿ ಮತ್ತು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ೩೦೬ ಶಾಲೆಗಳಲ್ಲಿ ಎನ್‌ಎಸ್‌ಕ್ಯೂಎಫ್ (ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು) ತರಗತಿಗಳನ್ನು ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕದ ೯೨೪೭ ಮಾದರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಅಕ್ಷರ ಆವಿಷ್ಕಾರ ಯೋಜನೆಯಡಿ ವಾರ್ಷಿಕವಾಗಿ ಎರಡು ಸಾವಿರ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.

ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತ ಆಕಾಶ್ ಎನ್ ಅವರು ಮಾತನಾಡಿ, ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಏಳು ಜಿಲ್ಲೆಯ ೪೧ ವಿವಿಧ ಸಂಸ್ಥೆಗಳೊಂದಿಗೆ ಚರ್ಚಿಸಿ, ಮುಂದಿನ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಮಾತನಾಡಿ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಗುಣಮಟ್ಟ ಶಿಕ್ಷಣದೊಂದಿಗೆ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಹಭಾಗಿತ್ವ ಅವಶ್ಯವಾಗಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ನಾಗತಿಹಳ್ಳಿ ಜಯಪ್ರಕಾಶ ಸಾಮರ್ಥ್ಯ ಅಭಿವೃದ್ಧಿ ಮತ್ತು ನಾಯಕತ್ವ ಎಂಬ ವಿಷಯ ಕುರಿತು ಕಾರ್ಯಗಾರ ನಡೆಸಿಕೊಟ್ಟರು.

ಎಸ್ಪಿ ಡಾ.ಶೋಭಾರಾಣಿ, ಬಳ್ಳಾರಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್, ವಿಜಯನಗರ ಜಿಲ್ಲಾಧಿಕಾರಿ ಎಂ. ದಿವಾಕರ, ವಿಜಯನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ, ಜೆಎಸ್‌ಡಬ್ಲೂö್ಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಅಶ್ವಿನಿ ಸಕ್ಸೆನಾ, ವಡ್ಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕೆ.ಎಂ. ನಿಂಗಮ್ಮ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ೨೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.