ವಾಹನಗಳಿಗೆ ವಿಎಲ್‌ಟಿ ಅಳವಡಿಕೆಗೆ ಬೇಕಾಬಿಟ್ಟಿ ಹಣ ವಸೂಲಿ!

| Published : Jul 04 2025, 11:47 PM IST

ವಾಹನಗಳಿಗೆ ವಿಎಲ್‌ಟಿ ಅಳವಡಿಕೆಗೆ ಬೇಕಾಬಿಟ್ಟಿ ಹಣ ವಸೂಲಿ!
Share this Article
  • FB
  • TW
  • Linkdin
  • Email

ಸಾರಾಂಶ

ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸಿದ ನಂತರವಷ್ಟೇ ವಾಹನಗ‍ಳ ನವೀಕರಣ ಮಾಡಿಸಿಕೊಳ್ಳಬೇಕು, ನವೀಕರಣ ವೇ‍ಳೆ ಹೀಗೆ ಅಳವಡಿಸಿದ ಸಾಧನಗಳ ಜಿಎಸ್‌ಟಿ ಬಿಲ್‌ಗಳ ಸಲ್ಲಿಕೆ ಕಡ್ಡಾಯವಾಗಿದೆ. ಆದರೆ, ಧಾರವಾಡದಲ್ಲಿ ಸಾಧನ ಅ‍ಳವಡಿಸುತ್ತಿರುವ ಕಂಪನಿ ವಾಹನಗ‍ಳ ಮಾಲೀಕರಿಂದ ಹೆಚ್ಚು ಹಣ ಪಡೆದು ಬಿಲ್‌ ಸಹ ನೀಡದೆ ಮೋಸ ಮಾಡುತ್ತಿದೆ.

ಮಹಮ್ಮದ ರಫೀಕ್‌ ಬಿಳಗಿ

ಹುಬ್ಬ‍ಳ್ಳಿ: ಧಾರವಾಡ ಜಿಲ್ಲೆಯಲ್ಲಿ ವೆಹಿಕಲ್ ಲೋಕೇಶನ್ ಟ್ರ್ಯಾಕಿಂಗ್ ಡಿವೈಸ್‌ಗಳ ಕಡಿಮೆ ಬೆಲೆಗೆ ಅಳವಡಿಸುವಂತೆ ಹೈಕೋರ್ಟ್‌ ನೀಡಿದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಸಾಧನಗಳನ್ನು ಅ‍‍‍‍‍ಳವಡಿಸಲು ಗುತ್ತಿಗೆ ಪಡೆದಿರುವ ಕಂಪನಿ ಹೈಕೋರ್ಟ್‌ ಆದೇಶವನ್ನೇ ಗಾ‍ಳಿಗೆ ತೂರಿ ಬಡ ವಾಹನಗಳ ಮಾಲೀಕರಿಂದ ಬೇಕಾಬಿಟ್ಟಿಯಾಗಿ ಹಣ ದೋಚಲಾಗುತ್ತಿದೆ.

ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯವು ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯ ಯೋಜನೆಯಡಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್‌ ಲೋಕೇಶನ್‌ ಟ್ರ್ಯಾಕಿಂಗ್‌ (ವಿಎಲ್‌ಟಿ) ಡಿವೈಸ್‌ ಮತ್ತು ಎಮೆರ್ಜೆನ್ಸಿ ಪ್ಯಾನಿಕ್‌ ಬಟನ್‌ ಅ‍ಳವಡಿಸುವ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ವಿಎಲ್‌ಟಿ ಮತ್ತು ಎಮೆರ್ಜೆನ್ಸಿ ಪ್ಯಾನಿಕ್‌ ಬಟನ್‌ ಸಾಧನಗಳ ಬೆಲೆ ಹೆಚ್ಚಿರುವ ಕುರಿತು ಬೆಂಗ‍ಳೂರು ಟೂರಿಸ್ಟ್ ಟ್ಯಾಕ್ಸಿ ಓನರ್ಸ್‌ ಅಸೋಸಿಯೇಶನ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಒಂದೊಂದು ವಾಹನಕ್ಕೆ ಇಂತಿಷ್ಟು ದರ ನಿಗದಿಪಡಿಸಬೇಕು ಎಂದು ಸಾರಿಗೆ ಆಯುಕ್ತರಿಗೆ ನಿರ್ದೇಶನ ನೀಡಿತ್ತು. ಬಳಿಕ ಈ ಕುರಿತಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ದರ ಸಂಧಾನ ಸಭೆಯಲ್ಲಿ ಸಾರಿಗೆ ಇಲಾಖೆಯಿಂದ ಅನುಮೋದನೆ ಪಡೆದ 12 ಕಂಪನಿಗಳೊಂದಿಗೆ ನಡೆದ ಸಭೆಯಲ್ಲಿ ಒಂದೊಂದು ವಾಹನಕ್ಕೆ ಇಂತಿಷ್ಟು ಹಣ ಪಡೆಯಬೇಕು ಎಂದು ನಿರ್ಧರಿಸಲಾಗಿತ್ತು.

ವಿಎಲ್‌ಟಿ ಸಾಧನಕ್ಕೆ ₹5424, ಒಂದು ಎಮೆರ್ಜೆನ್ಸಿ ಪ್ಯಾನಿಕ್‌ ಬಟನ್‌ಗೆ ₹325 ಮತ್ತು ಇದರ ನಿರ್ವಹಣಾ ವೆಚ್ಚವೆಂದು ವರ್ಷಕ್ಕೆ ₹1800 ನಿಗದಿ ಪಡಿಸಲಾಗಿದೆ. ಹೀಗೆ ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸಿದ ನಂತರವಷ್ಟೇ ವಾಹನಗ‍ಳ ನವೀಕರಣ ಮಾಡಿಸಿಕೊಳ್ಳಬೇಕು, ನವೀಕರಣ ವೇ‍ಳೆ ಹೀಗೆ ಅಳವಡಿಸಿದ ಸಾಧನಗಳ ಜಿಎಸ್‌ಟಿ ಬಿಲ್‌ಗಳ ಸಲ್ಲಿಕೆ ಕಡ್ಡಾಯವಾಗಿದೆ. ಆದರೆ, ಧಾರವಾಡದಲ್ಲಿ ಸಾಧನ ಅ‍ಳವಡಿಸುತ್ತಿರುವ ಕಂಪನಿ ವಾಹನಗ‍ಳ ಮಾಲೀಕರಿಂದ ಹೆಚ್ಚು ಹಣ ಪಡೆದು ಬಿಲ್‌ ಸಹ ನೀಡದೆ ಮೋಸ ಮಾಡುತ್ತಿದೆ. ವಾಹನ ಅರ್ಹತಾ ಪತ್ರ ನವೀಕರಣ ವೇಳೆ ಆರ್‌ಟಿಒ ಅಧಿಕಾರಿಗಳೂ ಈ ರಸೀದಿ ಕೇಳದೆ ವಾಹನಗಳ ಮಾಲೀಕರಿಗೆ ಬರುವ ಓಟಿಪಿ ಪಡೆದು ಅರ್ಹತಾ ಪ್ರಮಾಣ ಪತ್ರ ನೀಡುತ್ತಿದ್ದಾರೆ.

ಯಾವ ವಾಹನಕ್ಕೆ ಎಷ್ಟು ದರ?:

4+1 ಆಸನದ ವಾಹನಕ್ಕೆ ವಿಎಲ್‌ಟಿ ₹5424, ಮೂರು ಪ್ಯಾನಿಕ್‌ ಬಟನ್‌ ₹325X3=975, ಒಂದು ವರ್ಷದ ನಿರ್ವಹಣಾ ವೆಚ್ಚ ಸೇರಿ ₹8199 (ಜಿಎಸ್‌ಟಿ ಹೊರತುಪಡಿಸಿ) ನಿಗದಿ ಪಡಿಸಲಾಗಿದೆ. ಆದರೆ, ಧಾರವಾಡ ಜಿಲ್ಲೆಯಲ್ಲಿ 4+1 ಆಸನದ ವಾಹನಕ್ಕೆ ₹13500 ವಸೂಲಿ ಮಾಡಲಾಗುತ್ತಿದೆ. ವಾಹನದ ಆಸನಗಳ ಸಂಖ್ಯೆ ಹೆಚ್ಚಾದಂತೆ ಎಮೆರ್ಜೆನ್ಸಿ ಪ್ಯಾನಿಕ್‌ ಬಟನ್‌ಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಅದರಂತೆ ಹೆಚ್ಚಾದ ಪ್ಯಾನಿಕ್‌ ಬಟನ್‌ಗಳಿಗೆ ₹325 ಹೆಚ್ಚು ಪಡೆಯಬೇಕು.

ಅದೇ 7+1 ಆಸನದ ವಾಹನಕ್ಕೆ ಎರಡು ವರ್ಷದ ನಿರ್ವಹಣಾ ವೆಚ್ಚ ಸೇರಿ ₹10649 ಪಡೆಯುವ ಬದಲು ₹14,500, 44 ಆಸನದ ವಾಹನಕ್ಕೆ ₹11,124 ನಿಗದಿ ಮಾಡಿದ್ದು, ಇಲ್ಲಿ ₹18,500 ವಸೂಲಿ ಮಾಡಲಾಗುತ್ತಿದೆ. 12+1 ಆಸನದ ವಾಹನಕ್ಕೆ ₹9174 ನಿಗದಿ ಮಾಡಿದ್ದು, ಇಲ್ಲಿ ₹12,600 ವಸೂಲಿ ಮಾಡಲಾಗುತ್ತಿದೆ.

ಅದು ನಗದು ನೀಡಿದರೆ ಮಾತ್ರ ಡಿವೈಸ್‌ ಅ‍ಳವಡಿಸಲಾಗುತ್ತದೆ. ಫೋನ್‌ಪೇ, ಆನ್‌ಲೈನ್‌ ಪೇಮೆಂಟ್‌ ಮಾಡುವಂತಿಲ್ಲ. ರಸೀದಿ ಕೇಳಿದರೆ ಅದರ ಅವಶ್ಯಕತೆ ಇಲ್ಲ. ನಿಮಗೆ ಓಟಿಪಿ ಬಂದಿದೆ. ಅದನ್ನೇ ಆರ್‌ಟಿಒ ಅಧಿಕಾರಿಗಳಿಗೆ ನೀಡಿ ಅರ್ಹತಾ ಪ್ರಮಾಣ ಪತ್ರ ಪಡೆಯುವಂತೆ ಹೇಳುತ್ತಾರೆ.

ಈ ಕುರಿತಂತೆ ಆರ್‌ಟಿಒ ಅಧಿಕಾರಿಗಳನ್ನು ಕೇಳಿದರೆ, ವಾಹನ ಮಾಲೀಕರು ಕಡ್ಡಾಯವಾಗಿ ರಸೀದಿ ಪಡೆಯಬೇಕು. ಹೆಚ್ಚಿಗೆ ಹಣ ಪಡೆದರೆ ದೂರು ನೀಡಬೇಕು. ಆನ್‌ಲೈನ್‌ ಪೇಮೆಂಟ್ ಮಾಡುವಂತೆ ಹೇಳುತ್ತಾರೆ. ಆದರೆ, ರಸೀದಿ ಇಲ್ಲದೇ ಕೇವಲ ಓಟಿಪಿ ನೋಡಿ ಅರ್ಹತಾ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಹೀಗಾಗಿ, ಈ ಅಕ್ರಮದಲ್ಲಿ ಯಾರು ಪಾಲುದಾರರು ಎನ್ನುವುದು ತಿಳಿಯದಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗ‍ಳು ಇತ್ತ ಗಮನಹರಿಸಿ ಬಡ ವಾಹನಗಳ ಮಾಲೀಕರಿಂದ ಬೇಕಾಬಿಟ್ಟಿಯಾಗಿ ಹಣ ದೋಚುತ್ತಿರುವವರಿಗೆ ಕಡಿವಾಣ ಹಾಕಬೇಕಿದೆ.

5+1 ಆಸನ ಸಾಮರ್ಥ್ಯದ ವಾಹನವಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿಯಿಂದ 5+1 ಆಸನದ ವಾಹನಕ್ಕೆ 3 ಪ್ಯಾನಿಕ್‌ ಬಟನ್‌ಗಳು, ವಿಎಲ್‌ಟಿ ಮತ್ತು ಒಂದು ವರ್ಷಕ್ಕೆ ನಿರ್ವಹಣಾ ವೆಚ್ಚವೆಂದು ₹1800 ಸೇರಿ ಒಟ್ಟು 8199 ಪಡೆಯಲು ಸ್ಪಷ್ಟ ನಿರ್ದೇಶನವಿದೆ. ಆದರೂ ಇಲ್ಲಿ ಡಿವೈಸ್ ಅ‍‍ಳ‍ವಡಿಸುತ್ತಿರುವವರು ₹11500 ಪಡೆದಿದ್ದಾರೆ. ಇದರ ರಸೀದಿ ಕೇಳಿದರೆ ಕೊಡುವುದಿಲ್ಲ ಎನ್ನುತ್ತಾರೆ. ಬಡವರಿಂದ ಹಣದೋಚುವ ಕಾರ್ಯ ಇವರು ಮಾಡುತ್ತಿದ್ದಾರೆ ಎಂದು ಉತ್ತರ ಕರ್ನಾಟಕ ಮ್ಯಾಕ್ಸಿಕ್ಯಾಬ್‌ ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಹಿಫ್ಜುರ್‌ ತೋಪನಕಟ್ಟಿ ಹೇಳಿದರು.