ಸಾರಾಂಶ
ಆರೋಪಿ ವಿದ್ಯಾರ್ಥಿನಿಯರ ತಪ್ಪೊಪ್ಪಿಗೆಯನ್ನು ಆರೋಪ ಪಟ್ಟಿಯಲ್ಲಿ ಸಲ್ಲಿಸಲಾಗಿದೆ. 91 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಖಾಸಗಿ ಅರೆ ವೈದ್ಯಕೀಯ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಆರೋಪಿ ವಿದ್ಯಾರ್ಥಿನಿಯರ ತಪ್ಪೊಪ್ಪಿಗೆಯನ್ನು ಆರೋಪಪಟ್ಟಿಯಲ್ಲಿ ಸಲ್ಲಿಸಲಾಗಿದೆ.ವಿಡಿಯೋ ಚಿತ್ರೀಕರಣವೇ ನಡೆದಿಲ್ಲ, ಇದು ಮಾಧ್ಯಮಗಳ ಸೃಷ್ಟಿ ಎಂದು ಆರೋಪಿಗಳ ಪರವಾಗಿ ಕೆಲವು ಸಂಘಟನೆಗಳು ಬ್ಯಾಟಿಂಗ್ ಮಾಡಿದ್ದವು. ಆದರೆ ಚಾರ್ಜ್ ಶೀಟ್ ನಲ್ಲಿ ವಿದ್ಯಾರ್ಥಿನಿಯರು ತಾವು ಚಿತ್ರೀಕರಣ ಮಾಡಿರುವುದನ್ನು ಒಪ್ಪಿಕೊಂಡಿರುವುದನ್ನು ದಾಖಲೆಯೊಂದಿಗೆ ಸಲ್ಲಿಸಲಾಗಿದೆ.
ಕಳೆದ ವರ್ಷ ಜುಲೈ 18ರಂದು ನಗರದ ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ 3 ಮಂದಿ ವಿದ್ಯಾರ್ಥಿನಿಯರು ಫ್ರಾಂಕ್ ಮಾಡುವುದಕ್ಕಾಗಿ ಇನ್ನೊಬ್ಬ ವಿದ್ಯಾರ್ಥಿನಿಯ ಬಗ್ಗೆ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದರು. ನಂತರ ಇದು ಬಹಿರಂಗವಾಗಿ ಸಾಕಷ್ಟು ಗದ್ದಲ, ವಿವಾದಕ್ಕೆ ಕಾರಣವಾಗಿತ್ತು. ಹೆದರಿದ ಆರೋಪಿ ವಿದ್ಯಾರ್ಥಿನಿಯರು ಮೊಬೈಲಿನಿಂದ ವಿಡಿಯೋವನ್ನು ಡಿಲಿಟ್ ಮಾಡಿದ್ದರು. ಬಿಜೆಪಿ, ವಿಹಿಂಪ, ಎಬಿವಿಪಿಗಳ ಪ್ರತಿಭಟನೆಯ ನಂತರ ಪ್ರಕರಣ ಹಿಂದೂ ಮುಸ್ಲಿಂ ಬಣ್ಣ ಪಡೆದುಕೊಂಡ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು.ನಂತರ ಪೊಲೀಸರು ಮೊಬೈಲ್ ಗಳನ್ನು ಜಪ್ತು ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದರು. ಆದರೆ ಮೊಬೈಲ್ ನಲ್ಲಿದ್ದ ವಿಡಿಯೋ ರಿಟ್ರಿವ್ ಮಾಡಿದ ಬಗ್ಗೆ ಸಿಐಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಪ್ರಸ್ತಾಪ ಇಲ್ಲ. ಚಾರ್ಜ್ ಶೀಟ್ ನಲ್ಲಿ ಸಿಐಡಿ 91 ಸಾಕ್ಷಿಗಳನ್ನು ಉಲ್ಲೇಖಿಸಿದೆ. ಒಟ್ಟು ಆರೋಪಿಗಳ ತಪ್ಪೊಪ್ಪಿಗೆ ಪತ್ರ, ಹಸ್ತಾಕ್ಷರಗಳ ಆಧಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಮೊಬೈಲ್ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ದಾಖಲೆ ಸಲ್ಲಿಸುವುದಾಗಿ ಸಿಐಡಿ ಕೋರ್ಟಿಗೆ ನಿವೇದಿಸಿಕೊಂಡಿದೆ.