ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಚಾರ್ಜ್‌ಶೀಟ್: ಕೇಂದ್ರದಿಂದ ದ್ವೇಷ ರಾಜಕಾರಣ: ದೇಶಪಾಂಡೆ

| Published : Apr 18 2025, 12:33 AM IST

ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಚಾರ್ಜ್‌ಶೀಟ್: ಕೇಂದ್ರದಿಂದ ದ್ವೇಷ ರಾಜಕಾರಣ: ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ನ್ಯಾಯ, ನೀತಿ, ಪ್ರಾಮಾಣಿಕತೆ, ಗೌರವ ಮೊದಲಾದ ಎಲ್ಲ ಶಬ್ದಗಳ ಮೌಲ್ಯಗಳನ್ನು ಮರೆತು ಹೋಗಿದೆ.

ಹಳಿಯಾಳ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಉದ್ದೇಶಪೂರ್ವಕವಾಗಿ ಚಾರ್ಜ್‌ಶೀಟ್ ಮಾಡಿ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ದ್ವೇಷ, ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಗುರುವಾರ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ದ್ವೇಷ ರಾಜಕಾರಣವನ್ನು ಖಂಡಿಸಲು ನನಗೆ ಶಬ್ದಗಳು ಸಿಗುತ್ತಿಲ್ಲ ಎಂದರು.

ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ನ್ಯಾಯ, ನೀತಿ, ಪ್ರಾಮಾಣಿಕತೆ, ಗೌರವ ಮೊದಲಾದ ಎಲ್ಲ ಶಬ್ದಗಳ ಮೌಲ್ಯಗಳನ್ನು ಮರೆತು ಹೋಗಿದೆ. ನೆಹರು-ಗಾಂಧಿ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಕೇವಲ ಸೇಡು-ದ್ವೇಷದ ರಾಜಕಾರಣ ಮಾಡುವುದೇ ಇವರ ಮೂಲ ಉದ್ದೇಶವಾದಂತಿದೆ ಎಂದರು.

ಸುಳ್ಳು ಚಾರ್ಜ್‌ಶೀಟ್ ಹಾಕಿ ಹೆದರಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಯಾರೂ ಭಯ ಪಡುವುದಿಲ್ಲ. ನನಗೆ ಸಂಪೂರ್ಣ ವಿಶ್ವಾಸವಿದೆ. ಇಂತಹ ಸುಳ್ಳು ಪ್ರಕರಣಗಳಿಗೆ ಯಾವತ್ತೂ ಜಯ ಲಭಿಸುವುದಿಲ್ಲ. ಸೋನಿಯಾಗಾಂಧಿ, ರಾಹುಲ್ ಗಾಂಧಿ ವ್ಯಕ್ತಿತ್ವ ಜನಪ್ರಿಯತೆಗೆ ಧಕ್ಕೆಯಾಗುವುದಿಲ್ಲ ಎಂದರು.

ನಾವು ಹೆದರುವುದಿಲ್ಲ:

ಪ್ರತಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ದ್ವೇಷ ರಾಜಕಾರಣದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲಿದ್ದಾರೆ. ಇದು ಕೇವಲ ಪಕ್ಷದ ವಿಷಯವಲ್ಲ. ಇದು ಸಂವಿಧಾನ ಮತ್ತು ಪ್ರಜಾಪ್ರಭುತವನ್ನು ರಕ್ಷಿಸುವ ಹೋರಾಟವಾಗಿದೆ ಎಂದರು.

ಪಕ್ಷವು ಸಶಕ್ತವಾಗಿದೆ. ನಮ್ಮ ನಾಯಕರು ಇಂತಹ ರಾಜಕೀಯ ದಮನದ ಪ್ರಯತ್ನಗಳಿಗೆ ಹೆದರದೇ ಹಿಮ್ಮೆಟಿಸುವ ಜನಬಲ ಆಶೀರ್ವಾದ ಹೊಂದಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ರವಿ ತೋರಣಗಟ್ಟಿ ಇದ್ದರು.