ಸಾರಾಂಶ
ಶ್ರೀ ಗುರುರಾಘವೇಂದ್ರ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಭಾನುವಾರದಿಂದಲೇ ಪ್ರಾರಂಭವಾಗಿದ್ದು, ಮದ್ಯಾರಾಧನೆ ಪ್ರಯುಕ್ತ ಸೋಮವಾರ ಬೆಳಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕನ್ನಡಪ್ರಭ ವಾರ್ತೆ ಮುಧೋಳ
ಶ್ರೀ ಗುರುರಾಘವೇಂದ್ರ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಭಾನುವಾರದಿಂದಲೇ ಪ್ರಾರಂಭವಾಗಿದ್ದು, ಮದ್ಯಾರಾಧನೆ ಪ್ರಯುಕ್ತ ಸೋಮವಾರ ಬೆಳಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಲಂಕೃತ ತೆರೆದ ವಾಹನದಲ್ಲಿ ಮೂಕ ಕಲಾವಿದ ಬಿಂದು ನರಸಿಂಹ ಜಂಬಗಿ ನಿರ್ಮಿಸಿದ ಸುಂದರ ಭಾವಚಿತ್ರದ ಮೆರವಣಿಗೆಯೊಂದಿಗೆ ಬೆಳಗ್ಗೆ ನಗರದ ಪ್ರಮುಖ ರಸ್ತೆಯಲ್ಲಿ ನಡೆದ ಶ್ರೀರಾಯರ ಪಾಲಕಿಯ ಉತ್ಸವ ಗ್ರಾಮ ಪ್ರದಕ್ಷಿಣೆ ಎಲ್ಲರ ಗಮನ ಸೆಳೆಯಿತು.ರಾಘವೇಂದ್ರ ಸ್ವಾಮಿ ಮಠದಿಂದ ನಗರದ ಪ್ರಮುಖ ರಸ್ತೆಯಲ್ಲಿ ಬರುವ ಪ್ರಮುಖ ದೇವಾಲಯಗಳಾದ ಶ್ರೀಕೃಷ್ಣ ಮಂದಿರ, ವಿಠ್ಠಲ ಮಂದಿರ, ವೆಂಕಟೇಶ್ವರ ದೇವಾಲಯ, ಗಣೇಶ ದೇವಾಲಯ, ಮುದ್ದೇಶ ಪ್ರಭು ಹಾಗೂ ಶ್ರೀದತ್ತನ ದೇವಾಲಯಗಳ ಮೂಲಕ ಮರಳಿ ರಾಘವೇಂದ್ರಸ್ವಾಮಿ ಮಠಕ್ಕೆ ಕೊನೆಗೊಂಡಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಪಾಲಕಿ ಉತ್ಸವದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಪುರುಷರು ಹಾಗೂ ಮಹಿಳೆಯರು ಭಜನೆ, ಕೋಲಾಟ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಹಸ್ರಾರು ಜನರ ಗಮನ ಸೆಳೆಯಿತಲ್ಲದೆ, ನಂತರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೂತನ ರಥದ ಪ್ರಥಮ ಬಾರಿಯ ರಥೋತ್ಸವದಲ್ಲಿ ಭಕ್ತರು ಭಾವಭಕ್ತಿಯಿಂದ ಪಾಲ್ಗೊಂಡು ಹರಕೆ ತಿರಿಸಿದರು.