ಧರ್ಮಕರ್ತ ಜಿ. ಭೀಮೇಶ್ವರ ಜೋಷಿ ನೇತೃತ್ವದಲ್ಲಿ ಧ್ವಜಾರೋಹಣ
ಕನ್ನಡಪ್ರಭ ವಾರ್ತೆ, ಹೊರನಾಡುಪ್ರಸಿದ್ಧ ಶ್ರೀಕ್ಷೇತ್ರ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣದಲ್ಲಿ ಆರಂಭಗೊಂಡಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮಧ್ಯಾಹ್ನ ಧ್ವಜಾರೋಹಣ ಸಮಾರಂಭ ಭಕ್ತರ ಜಯಘೋಷಗಳ ನಡುವೆ ಭಕ್ತಿಪೂರ್ವಕವಾಗಿ ನೆರವೇರಿತು.
ಜಾತ್ರೆಗೆ ಮುನ್ನಾ ದಿನವಾದ ಬುಧವಾರ ರಥೋತ್ಸವಾಂಗ, ಗಣಪತಿ ಪೂಜೆ, ಮಹಾಗಣಪತಿ ಹೋಮ ಹಾಗೂ ಮಹಾ ರಂಗಪೂಜೆಯಂತಹ ಧಾರ್ಮಿಕ ವಿಧಿವಿಧಾನಗಳ ಮೂಲಕ ಉತ್ಸವಕ್ಕೆ ಭಕ್ತಿಪೂರ್ಣ ಚಾಲನೆ ನೀಡಲಾಯಿತು. ಗುರುವಾರ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಕ್ರಮಬದ್ಧವಾಗಿ ನಡೆಯುತ್ತಿದ್ದು, ಮಧ್ಯಾಹ್ನ ದೇವಸ್ಥಾನದ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿಯವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು. ರಾತ್ರಿ ಪುಷ್ಪಕಾರೋಹಣ ಕಾರ್ಯಕ್ರಮ ಭಕ್ತರ ಮನಸೆಳೆಯಿತು.ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು. ಶುಕ್ರವಾರ ಮಧ್ಯಾಹ್ನ ಶ್ರೀ ಬ್ರಹ್ಮರಥೋತ್ಸವ ಹಾಗೂ ರಾತ್ರಿ ಶ್ರೀಮನ್ ಮಹಾರಥೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮಗಳಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ದೇವಸ್ಥಾನ ಪರಿಸರದಲ್ಲಿ ಜಾತ್ರೆ ಹಿನ್ನೆಲೆಯಲ್ಲಿ ಸಮಗ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರ ಹಾಗೂ ತಳಿರು ತೋರಣಗಳಿಂದ ದೇವಸ್ಥಾನ ಸೊಬಗು ತುಂಬಿಕೊಂಡಿದೆ. ಜಾತ್ರೆಯ ಅಂಗವಾಗಿ ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಅಂಗಡಿ ಮಾರುಕಟ್ಟೆಗಳು ತೆರೆಯಲ್ಪಟ್ಟಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯಗಳು ಒದಗಿಸಲಾಗಿದೆ. ಭಕ್ತರ ಸುರಕ್ಷತೆ ಮತ್ತು ಶಿಸ್ತಿನ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸಮರ್ಪಕ ಭದ್ರತಾ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.ಪೊಟೋ ೧೯ಕಳಸ೧:
ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನಡೆಯಿತು.