- ಡಿವೈಎಸ್ಪಿ ಶರಣ ಬಸವೇಶ್ವರ ನೇತೃತ್ವದಲ್ಲಿ ಪೊಲೀಸ್ ದಂಡು - ಆಜಾದ್ ನಗರ, ಗಾಂಧಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ರೌಡಿಶೀಟರ್ಸ್‌ಗೆ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಫೆ.22ರಿಂದ 26 ರವರೆಗೆ ನಡೆಯಲಿದೆ. ಜಾತ್ರೆ ಹಿನ್ನೆಲೆ ಸಾರ್ವಜನಿಕರ ಭದ್ರತೆ ಹಿತದೃಷ್ಟಿಯಿಂದ ಗಾಂಧಿ ನಗರ, ಆಜಾದ್ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಹಳೇ ರೌಡಿಶೀಟರ್ಸ್‌ ಮನೆಗಳಿಗೆ ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ ನೇತೃತ್ವದಲ್ಲಿ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆಯೇ ತೆರಳಿ ಮನೆಗಳಲ್ಲಿ ಪರಿಶೀಲನೆ ನಡೆಸಿದರು.

ದಕ್ಷಿಣ ವಿಧಾನಸಭಾ ಕ್ಷೇತ್ರದ ಗಾಂಧಿ ನಗರ, ಆಜಾದ್‌ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಡಿವೈಎಸ್ಪಿ ಶರಣ ಬಸವೇಶ್ವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಉಮೇಶ, ಸಬ್ ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ ರೌಡಿ ಶೀಟರ್‌ಗಳ ಮನೆಗಳಲ್ಲಿ ತಪಾಸಣೆ ಮಾಡಿ, ಎಚ್ಚರಿಕೆ ಸಂದೇಶ‍ ನೀಡಿದರು.

ರೌಡಿ ಶೀಟರ್‌ಗಳಾದ ಹುಗ್ಗಿ ಕುಮಾರ ಅಲಿಯಾಸ್ ಸಂತೋಷಕುಮಾರ, ಮಂಜುನಾಥ ಅಲಿಯಾಸ್ ಗಾರೆ ಮಂಜ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಜಾತ್ರೆ ಹಾಗೂ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ರೌಡಿ ಶೀಟರ್‌ಗಳು, ಸಮಾಜಘಾತುಕ ಶಕ್ತಿಗಳು ಬಾಲಬಿಚ್ಚದಂತೆ ಅಧಿಕಾರಿಗಳು ಎಚ್ಚರಿಸಿದರು. ದುಗ್ಗಮ್ಮ ಜಾತ್ರೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಬ್ಯಾನರ್‌ಗಳನ್ನು ಅಳವಡಿಸಿದ್ದ ರೌಡಿ ಶೀಟರ್ ಗಾರೆ ಮಂಜನಿಗೆ ಉದ್ದೇಶಿಸಿ, ಅಲ್ಲಿ ಇಲ್ಲಿ ಬ್ಯಾನರ್ ಹಾಕಿಸುವುದನ್ನು ಬಿಟ್ಟು, ಒಂದು ಜೊತೆ ಬಟ್ಟೆ ಖರೀದಿಸಿ ಹಾಕಿಕೋ. ಎಲ್ಲ ವೃತ್ತಗಳಲ್ಲಿ ಅಷ್ಟೊಂದು ಬ್ಯಾನರ್ ಹಾಕಿಸಿದ್ದೀಯಲ್ಲ ಎಂದು ಸಿಪಿಐ ಉಮೇಶ ಈ ಸಂದರ್ಭ ಬುದ್ಧಿಮಾತು ಹೇಳಿದರು.


- - -

(ಬಾಕ್ಸ್‌)

* ಶಾಂತಿ, ಸುವ್ಯವಸ್ಥಿತ ಪ್ರಥಮ ಆದ್ಯತೆ: ಎಸ್‌ಪಿ ಡಾ.ಶೇಖರ್

- ದುಗ್ಗಮ್ಮ ದೇವಸ್ಥಾನ ಬಳಿ ಸಿಸಿ ಕ್ಯಾಮೆರಾಗಳ ಕಣ್ಗಾವಲು

- ಮಚ್ಚು ಹಿಡಿದ ಫ್ಲೆಕ್ಸ್, ಇತರೆ ಫ್ಲೆಕ್ಸ್‌ಗಳ ವಿರುದ್ಧ ಸೂಕ್ತ ಕ್ರಮ

ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ.ಶೇಖರ್ ಹೇಳಿದರು.

ನಗರದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿ ಗುರುವಾರ ಬೆಳಗ್ಗೆ ಜಾತ್ರೆಯ ಭದ್ರತೆ, ಸುರಕ್ಷತಾ ಕ್ರಮಗಳ ಬಗ್ಗೆ ಅಧೀನ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದು, ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜಾತ್ರೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಅನೇಕ ಕ್ರಮ ಕೈಗೊಂಡಿದ್ದೇವೆ ಎಂದರು.

2 ದಿನಗಳ ಹಿಂದಷ್ಟೇ ರ್ಯಾಪಿಡ್ ಆಕ್ಷನ್ ಫೋರ್ಸ್‌, ಕೆಎಸ್‌ಆರ್‌ಪಿ ತುಕಡಿ, ಜಿಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ಪಥ ಸಂಚಲನ ನಡೆಸಿ ಜನರಲ್ಲಿ ಸುರಕ್ಷತೆ ಭರವಸೆ ಮೂಡಿಸಿದ್ದೇವೆ. ಅದರ ಮುಂದುವರಿದ ಭಾಗವಾಗಿ ಗುರುವಾರ ಆಜಾದ್ ನಗರ, ಗಾಂಧಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ರೌಡಿ ಎಲಿಮೆಂಟ್ಸ್‌ಗಳ ಮನೆಗಳ ತಪಾಸಣೆ ಮಾಡಿದ್ದೇವೆ ಎಂದು ಹೇಳಿದರು.

ರೌಡಿ ಶೀಟರ್‌ ಸೇರಿದಂತೆ ಯಾರೇ ಆಗಿದ್ದರೂ ವೈಯಕ್ತಿಕ ಪ್ರತಿಷ್ಟೆಗಾಗಿ ಕಾನೂನು ಕೈಗೆತ್ತಿಕೊಳ್ಳದಂತೆ ತಿಳಿವಳಿಕೆ, ಎಚ್ಚರಿಕೆ ನೀಡುತ್ತಿದ್ದೇವೆ. ಇಂತಹ ತಪಾಸಣೆ ಕಾರ್ಯಗಳು ನಗರ, ಜಿಲ್ಲೆಯಲ್ಲಿ ಇನ್ನು ಮುಂದೆ ನಿರಂತರ ಮುಂದುವರಿಯುತ್ತವೆ. ಇದು ದುಗ್ಗಮ್ಮನ ಜಾತ್ರಾ ಮಹೋತ್ಸವವಾಗಿದೆ. ಇತಿಹಾಸ ಪ್ರಸಿದ್ಧ ಜಾತ್ರೆಯಾಗಿದ್ದು, ಶಾಂತಿ, ಸುವ್ಯವಸ್ಥೆಗೆ ಭಂಗ ತರದಂತೆ ಜಾತ್ರೆ ಆಚರಿಸಬೇಕು. ಸಾರ್ವಜನಿಕ ನೆಮ್ಮದಿಗೆ ಧಕ್ಕೆಯಾದಲ್ಲಿ ಜನತೆಗೆ ನೇರವಾಗಿ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿದರು.

ಸಿಸಿ ಕ್ಯಾಮೆರಾ- ಪೊಲೀಸ್‌ ಚೌಕಿ:

ಜಾತ್ರೆ ನಡೆಸುವ ಸ್ಥಳ, ಜನದಟ್ಟಣೆ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತದಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ. ನಿರಂತರ ನಿಗಾ ಇಡಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು, ಸರಗಳ್ಳತನ, ಪಿಕ್ ಪಾಕೆಟ್, ಮಕ್ಕಳು ಕಾಣೆಯಾದಲ್ಲಿ ಜನರ ನೆರವಿಗೆ ಧಾವಿಸಲು ಅನುವಾಗುವಂತೆ ಸ್ಥಳದಲ್ಲೇ ಪೊಲೀಸ್ ಚೌಕಿ ಸಹ ಆರಂಭಿಸುತ್ತೇವೆ. ಪೊಲೀಸ್ ಇಲಾಖೆಯಿಂದ ಜಾತ್ರೆ ಯಶಸ್ವಿಗೆ ಸಕಲ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ದಾವಣಗೆರೆ ವಿವಿಧೆಡೆ ಮಚ್ಚು, ಲಾಂಗ್ ಹಿಡಿದು ನಿಂತಿರುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಸೇರಿದಂತೆ ಫ್ಲೆಕ್ಸ್‌ಗಳನ್ನು ಇಂದಿನಿಂದಲೇ ತೆರವು ಮಾಡಿಸಲು ಸೂಚಿಸಿದ್ದೇವೆ. ಹೀಗೆ ಮಚ್ಚು, ಲಾಂಗ್ ಹಿಡಿದು, ಪ್ಲೆಕ್ಸ್, ಬ್ಯಾನರ್ ಹಾಕಿದವರು, ಫ್ಲೆಕ್ಸ್‌ಗಳನ್ನು ಹಾಕಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಫ್ಲೆಕ್ಸ್‌, ಬ್ಯಾನರ್ ಕುರಿತಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಪಾಲಿಕೆ ಆಯುಕ್ತರು ಸಹ ಸಭೆ ನಡೆಸಿ, ಫ್ಲೆಕ್ಸ್ ಅಳವಡಿಸಲು ಪಾಲಿಕೆ ಅನುಮತಿ ಪಡೆಯುವುದನ್ನು ಕಡ್ಡಾಯ ಎಂಬುದಾಗಿ ಸೂಚಿಸಿದ್ದಾರೆ ಎಂದು ಎಸ್‌ಪಿ ಡಾ.ಶೇಖರ್ ಎಚ್. ಟೇಕಣ್ಣನವರ್ ತಿಳಿಸಿದರು.

- - -

-19ಕೆಡಿವಿಜಿ1, 2: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಸ್ಥಳಕ್ಕೆ ಗುರುವಾರ ಬೆಳಗ್ಗೆ ಎಸ್‌ಪಿ ಡಾ. ಎಚ್.ಟಿ. ಶೇಖರ್ ಭೇಟಿ ನೀಡಿ, ಭದ್ರತೆ ಬಗ್ಗೆ ಅಧಿಕಾರಗಳೊಂದಿಗೆ ಚರ್ಚಿಸಿದರು. -19ಕೆಡಿವಿಜಿ3, 4: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆ ಆಜಾದ್ ನಗರ, ಗಾಂಧಿ ನಗರ ಠಾಣೆ ವ್ಯಾಪ್ತಿಯ ರೌಡಿಶೀಟರ್ಸ್ ಮನೆಗೆ ಡಿವೈಎಸ್ಪಿ ಶರಣ ಬಸವೇಶ್ವರ, ಸಿಪಿಐ ಉಮೇಶ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ, ತಪಾಸಣೆ ನಡೆಸಿ, ಕಾನೂನುಬಾಹಿರ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದರು.